ಕಲಬುರಗಿ, ನ.29: ಸಚಿವ ಕೃಷ್ಣಭೈರೇಗೌಡ (Krishna Byregowda) ಅವರು ನನ್ನ ವಿರುದ್ಧ ಆರೋಪದ ರೀತಿ ಮಾತನಾಡಿದ್ದಾರೆ. ಅವರು ಮಾಡಿರುವ ಆರೋಪದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಉನ್ನತಮಟ್ಟದ ತನಿಖೆಯಾಗಬೇಕು. ತನಿಖೆ ಮುಗಿಯುವರೆಗೂ ಸದನಕ್ಕೆ ಹೋಗುವುದಿಲ್ಲ. ಬೆಳಗಾವಿ ಅಧಿವೇಶನದಲ್ಲೂ ನಾನು ಭಾಗಿಯಾಗುವುದಿಲ್ಲ ಎಂದು ಕಲಬುರಗಿ ನಗರದಲ್ಲಿ ಆಳಂದ ಶಾಸಕ ಬಿ.ಆರ್.ಪಾಟೀಲ್ (BR Patil) ಅವರು ಕೃಷ್ಣಭೈರೇಗೌಡ ವಿರುದ್ಧ ಕಿಡಿಕಾರಿದ್ದು ತನಿಖೆಗೆ ಆಗ್ರಹಿಸಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಬಿ.ಆರ್.ಪಾಟೀಲ್, ಕೃಷ್ಣಭೈರೇಗೌಡ ನನ್ನ ವಿರುದ್ದ ಆರೋಪದ ರೀತಿ ಮಾತನಾಡಿದ್ದಾರೆ. ಆ ಬಗ್ಗೆ ತನಿಖೆಯಾಗಬೇಕು. ಅಲ್ಲಿಯವರೆಗೂ ಸದನಕ್ಕೆ ಹೋಗಲ್ಲ. ನಾನು ಸ್ವಾಭಿಮಾನದಿಂದ ಬದುಕಿದೋನು. ಸ್ವಾಭಿಮಾನ ಇಲ್ಲದಿದ್ರೆ ಬದುಕಿದ್ರೂ ಸತ್ತಂತೆ. ಇವತ್ತು ಸಿಎಂ ಸಭೆ ಕರೆದಿದ್ದಾರೆ. ನಾನು ಮಧ್ಯಾಹ್ನ ಮತ್ತೆ ಬೆಂಗಳೂರಿಗೆ ಹೊಗುತ್ತೇನೆ. ಸಿಎಂ ಸಿದ್ದರಾಮಯ್ಯ ಜೊತೆ ಮಾತನಾಡುತ್ತೇನೆ. ಅವರು ಅಧಿಕಾರಿಗಳನ್ನ ಕರೆದು ಮಾಹಿತಿ ಪಡೆಯಲಿ. ನಾನು ಏನಾದ್ರು ಅದರಲ್ಲಿ ತಪ್ಪು ಮಾಡಿದ್ರೆ ನನ್ನ ಮೇಲೆ ಕ್ರಮ ಕೈಗೊಳ್ಳಲಿ. ಆವತ್ತೆ ನಾನು ಸದನದಲ್ಲಿ ಸಚಿವ ಕೃಷ್ಣ ಭೈರೇಗೌಡ ಉತ್ತರ ಕೊಡುವಾಗ ಕಾಮಗಾರಿಗಳ ಬಗ್ಗೆ ಪ್ರಶ್ನೆ ಕೇಳಿದ್ದೆ. ಆದರೆ ಸಚಿವರು ನನ್ನ ಮೇಲೆ ಆರೋಪಗಳ ರೀತಿಯಲ್ಲಿ ಮಾತನಾಡಿದ್ದರು. ನಾನು ಹಣ ಪಡೆದು ಕೆಲಸ ಕೊಟ್ಟಿದಿನಿ ಅಂತಾ ಆರೋಪ ಮಾಡಿದ್ದರು. ಇದರ ವಿರುದ್ಧ ನಾನು ಪ್ರತಿಭಟನೆ ಮಾಡಿದ್ದೆ. ನನ್ನ ಬೆಂಬಲಕ್ಕೆ ಇಬ್ಬರು ಶಾಸಕರ ಹೊರತಾಗಿ ಯಾರು ಬಂದಿಲ್ಲ. ನಮ್ಮ ಜಿಲ್ಲೆಯವರು ನನ್ನ ಬೆಂಬಲಕ್ಕೆ ಬಂದಿಲ್ಲ ಎಂದು ಸ್ವ ಜಿಲ್ಲೆಯ ಶಾಸಕರ ವಿರುದ್ದವೂ ಬಿ.ಆರ್ ಪಾಟೀಲ್ ಅಸಮಧಾನ ಹೊರ ಹಾಕಿದ್ದಾರೆ.
ಸಚಿವ ಕೃಷ್ಣಭೈರೇಗೌಡ ಮಾಡಿರುವ ಆರೋಪದ ಬಗ್ಗೆ ತನಿಖೆಯಾಗಬೇಕು. ಅಧಿಕಾರಿಗಳಿಂದ ಮಾಹಿತಿ ಪಡೆದು ಉನ್ನತಮಟ್ಟದ ತನಿಖೆಯಾಗಬೇಕು. ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದಕ್ಕೆ ಸಿಎಂಗೆ ಪತ್ರ ಬರೆದಿದ್ದೇನೆ. ಇಷ್ಟೂ ದಿನ ನಾನು ಎಲ್ಲಾ ರೀತಿಯ ಅವಮಾನಗಳನ್ನು ಸಹಿಸಿಕೊಂಡಿದ್ದೇನೆ. ಈ ವಿಚಾರವಾಗಿ ಕಳೆದ ಬಾರಿಯೂ ಪ್ರತಿಭಟಿಸಿದ್ದೆ. ಯಶವಂತರಾಯ ಪಾಟೀಲ್, ಶಿವಲಿಂಗೇಗೌಡ ಬೆಂಬಲ ನೀಡಿದ್ದರು. ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿರುವುದಕ್ಕೆ ಸಿಎಂಗೆ ಪತ್ರ ಬರೆದಿದ್ದೇನೆ ಎಂದು ಶಾಸಕ ಬಿ.ಆರ್.ಪಾಟೀಲ್ ಅವರು ಸಚಿವ ಕೃಷ್ಣಭೈರೇಗೌಡ ವಿರುದ್ಧ ಬಹಿರಂಗವಾಗಿ ತೊಡೆ ತಟ್ಟಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ