ಕಲಬುರಗಿ: ಇದೇ ಜನವರಿ 19ರಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಕಲಬುರಗಿ(Kalaburagi) ಜಿಲ್ಲೆಗೆ ಭೇಟಿ ನೀಡಲಿದ್ದು, ನೂತನವಾಗಿ ರಚಿಸಲಾಗಿರುವ ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಲಿದ್ದಾರೆ. ಅಲ್ಲದೇ ಇದೇ ವೇಳೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಮತ್ತು ಉದ್ಘಾಟನೆ ಮಾಡಲಿದ್ದಾರೆ. ಇನ್ನು ಇದಕ್ಕೆ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ (Priyank Kharge) ಪ್ರತಿಕ್ರಿಯಿಸಿ, ಶಾಸಕ, ಮಂತ್ರಿ ಮಾಡೋ ಕೆಲಸವನ್ನ ಪ್ರಧಾನಿಯಿಂದ ಮಾಡಿಸ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಕಲಬುರಗಿಯಲ್ಲಿ ಇಂದು(ಜನವರಿ 17) ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಶಾಸಕ, ಮಂತ್ರಿ ಮಾಡುವ ಕೆಲಸವನ್ನ ಪ್ರಧಾನಿಯಿಂದ ಮಾಡಿಸುತ್ತಿದ್ದಾರೆ. ಕಂದಾಯ ಗ್ರಾಮ ಮಾಡಬೇಕೆಂದು ಕಾಂಗ್ರೆಸ್ ಸರ್ಕಾರದಲ್ಲೇ ಆಗಿತ್ತು. ಬಿಜೆಪಿ ಸರ್ಕಾರದ ಸಾಧನೆ ಶೂನ್ಯ. ಬಿಜೆಪಿಯವರಿಗೆ ಇರೋದು ನಡುಕ. ಬಿಜೆಪಿ ನಾಯಕರಿಗೆ ಯತ್ನಾಳ್ ಬಾಯಿ ಮುಚ್ಚಿಸಲು ಆಗುತ್ತಿಲ್ಲ ಎಂದು ಟಾಂಗ್ ಕೊಟ್ಟರು.
ಮುಖ್ಯಮಂತ್ರಿ ಕಚೇರಿಯಲ್ಲಿ ಹನಿಟ್ರ್ಯಾಪ್ ಆಗಿರುವುದು ನಿಜಾನಾ, ಸುಳ್ಳಾ? ಹೈಕೋರ್ಟ್ನಲ್ಲಿ ಶಾಸಕರು ಜಾಮೀನು ಪಡೆದಿದ್ದು, ನಿಜಾನಾ, ಸುಳ್ಳಾ? ಇದು ಲಂಚ, ಮಂಚದ ಸರ್ಕಾರವಲ್ಲವಾ? ಲಂಚ, ಮಂಚದ ಸರ್ಕಾರ ಅಂದಾಗ ನನ್ನ ಮೇಲೆ ಮುಗಿದು ಬಿದ್ದಿದ್ದರು. ಸ್ಯಾಂಟ್ರೋ ರವಿ ಪಿಂಪ್ ಎನ್ನುವುದು ನಿಜಾನಾ ಸುಳ್ಳಾ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಜ.19ರಂದು ಕಲಬುರಗಿ ಜಿಲ್ಲೆಗೆ ಭೇಟಿ ನೀಡಲಿದ್ದು, ಸೇಡಂ ತಾಲೂಕಿನ ಮಳಖೇಡ ಹೆಲಿಪ್ಯಾಡ್ನಲ್ಲಿ ಮಧ್ಯಾಹ್ನ 2 ಗಂಟೆಗೆ ಇಳಿಯಲಿದ್ದಾರೆ. ಮಳಖೇಡನಲ್ಲಿ ಮಧ್ಯಾಹ್ನ 02.15ಕ್ಕೆ ನಡೆಯುವ ಕಾರ್ಯಕ್ರಮ ಸ್ಥಳಕ್ಕೆ ಆಗಮಿಸಿ, ನೂತನವಾಗಿ ರಚಿಸಲಾಗಿರುವ ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಲಿದ್ದಾರೆ. ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಮತ್ತು ಉದ್ಘಾಟನೆ ಮಾಡಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಮಳಖೇಡ ಕಾರ್ಯಕ್ರಮ ಸ್ಥಳದಿಂದ ನಿರ್ಗಮಿಸಿ, 03.05ಕ್ಕೆ ಹೆಲಿಕಾಪ್ಟರ್ ಮೂಲಕ ಕಲಬುರಗಿ ಏರ್ಪೋರ್ಟ್ಗೆ ಹೋಗುತ್ತಾರೆ. ಅಲ್ಲಿಂದ 03.35ಕ್ಕೆ ಕಲಬುರಗಿ ಏರ್ಪೋರ್ಟ್ನಿಂದ ದೆಹಲಿಗೆ ವಾಪಸ್ ಆಗಲಿದ್ದಾರೆ.
Published On - 4:02 pm, Tue, 17 January 23