PSI Recruitment Scam: ರಸ್ತೆಯಲ್ಲೇ ಡೀಲ್, ರಸ್ತೆಯಲ್ಲೇ ಅಕ್ರಮದ ಪ್ಲ್ಯಾನ್: ವಿಚಾರಣೆ ವೇಳೆ ಡೀಲ್ ರಹಸ್ಯ ಬಿಚ್ಚಿಟ್ಟ ಆರೊಪಿಗಳು

| Updated By: ಗಂಗಾಧರ​ ಬ. ಸಾಬೋಜಿ

Updated on: May 14, 2022 | 9:12 AM

ಮತ್ತೊಂದೆಡೆ ಮಂಜುನಾಥ್ ಮೇಳಕುಂದಿ, ಕಾಶೀನಾಥ್ ಜೊತೆ ಸೇರಿ ದಿವ್ಯಾ & ಗ್ಯಾಂಗ್​ನಿಂದ ತನ್ನ ಮನೆಯಲ್ಲಿ ಡೀಲ್​ ಮಾಡಲಾಗುತ್ತಿತ್ತು ಎಂದು ವಿಚಾರಣೆ ವೇಳೆ ಡೀಲ್ ರಹಸ್ಯಗಳನ್ನು ಆರೋಪಿಗಳು ಬಿಚ್ಚಿಟ್ಟಿದ್ದಾರೆ. 

PSI Recruitment Scam: ರಸ್ತೆಯಲ್ಲೇ ಡೀಲ್, ರಸ್ತೆಯಲ್ಲೇ ಅಕ್ರಮದ ಪ್ಲ್ಯಾನ್: ವಿಚಾರಣೆ ವೇಳೆ ಡೀಲ್ ರಹಸ್ಯ ಬಿಚ್ಚಿಟ್ಟ ಆರೊಪಿಗಳು
ಸಾಂದರ್ಭಿಕ ಚಿತ್ರ
Follow us on

ಕಲಬುರಗಿ: 545 ಪಿಎಸ್​ಐ ಹುದ್ದೆಗಳಿಗೆ ನೇಮಕಾತಿಯಲ್ಲಿ ಅಕ್ರಮ ಪ್ರಕರಣ ಹಿನ್ನೆಲೆ ಕಿಂಗ್​ಪಿನ್ ರುದ್ರಗೌಡ ಡೀಲ್ ಕುದುರಿಸುತ್ತಿದ್ದದ್ದು ಎಲ್ಲಿ ಗೊತ್ತಾ?ಯಾವುದೇ ‌ಲಾಡ್ಜ್​, ಮನೆಯಲ್ಲಿ ಡೀಲ್ ಕುದುರಿಸುತ್ತಿರಲಿಲ್ಲ. ಬದಲಿಗೆ ರಸ್ತೆಯಲ್ಲೇ ಡೀಲ್, ಕಲಬುರಗಿಯ ಉದನೂರು ರಸ್ತೆಯಲ್ಲೇ ಅಕ್ರಮದ ಪ್ಲ್ಯಾನ್ ರೂಪಿಸುತ್ತಿದ್ದ. ತನ್ನ ನಿರ್ಮಾಣ ಹಂತದ ಮನೆ ಬಳಿ ರುದ್ರಗೌಡ ಡೀಲ್ ಮಾಡುತ್ತಿದ್ದ. ವೈಜನಾಥ್, ಆನಂದ್ ಜೊತೆ ಸೇರಿ ಕಿಂಗ್​ಪಿನ್ ಡೀಲ್ ಮಾಡ್ತಿದ್ದ. ಕೆಎಸ್ಆರ್​​ಪಿ ಅಸಿಸ್ಟೆಂಟ್ ಕಮಾಂಡೆಂಟ್ ವೈಜನಾಥ್ ಮತ್ತು ಬೆರಳಚ್ಚು ವಿಭಾಗದ ಸಿಪಿಐ ಆನಂದ್ ಜೊತೆ ಸೇರಿ ಕಾರಿನಲ್ಲೇ ಕುಳಿತು ಕಿಲಾಡಿಗಳು ಅಕ್ರಮದ ಪ್ಲ್ಯಾನ್ ರೂಪಿಸುತ್ತಿದ್ದರು. ಮತ್ತೊಂದೆಡೆ ಮಂಜುನಾಥ್ ಮೇಳಕುಂದಿ, ಕಾಶೀನಾಥ್ ಜೊತೆ ಸೇರಿ ದಿವ್ಯಾ & ಗ್ಯಾಂಗ್​ನಿಂದ ತನ್ನ ಮನೆಯಲ್ಲಿ ಡೀಲ್​ ಮಾಡಲಾಗುತ್ತಿತ್ತು ಎಂದು ವಿಚಾರಣೆ ವೇಳೆ ಡೀಲ್ ರಹಸ್ಯಗಳನ್ನು ಆರೋಪಿಗಳು ಬಿಚ್ಚಿಟ್ಟಿದ್ದಾರೆ.

ತನಿಖೆ ಮಾಡಲು ಸರ್ಕಾರಕ್ಕೆ ಧೈರ್ಯ ಇದೆಯೇ; ಪ್ರಿಯಾಂಕ್ ಖರ್ಗೆ

ಪೊಲೀಸ್​ ಸಬ್ ಇನ್​ಸ್ಪೆಕ್ಟರ್ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಸಿಐಡಿ ನಡೆಸುತ್ತಿರುವ ತನಿಖೆ ಸರಿಯಾದ ದಿಕ್ಕಿನಲ್ಲಿ ಹೋಗುತ್ತಿಲ್ಲ. ಅಕ್ರಮದಲ್ಲಿ ಭಾಗಿಯಾದವರನ್ನು ಹೆಸರಿಸಲು ಅಧಿಕಾರಿಗಳು ಹಿಂಜರಿಯುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಆರೋಪ ಮಾಡಿದ್ದಾರೆ. 545 ಪಿಎಸ್​ಐ ಹುದ್ದೆಗಳಿಗೆ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಕುರಿತು ವಿಚಾರಣೆ ಸಂದರ್ಭದಲ್ಲಿ ಪ್ರಮುಖ ಆರೋಪಿ ರುದ್ರಗೌಡ ಪಾಟೀಲ್ ‌ಸಿಐಡಿ ಅಧಿಕಾರಿಗಳಿಗೆ ಸವಾಲು ಹಾಕಿದ್ದಾನೆ. ಈ ಅಕ್ರಮದಲ್ಲಿ ಯಾರೆಲ್ಲ ಇದ್ದಾರೆಂದು ಹೇಳಲು ಸಿದ್ಧವಾಗಿದ್ದಾನೆ. ಆದರೆ ತನಿಖೆ ಮಾಡಲು ಸರ್ಕಾರಕ್ಕೆ ಧೈರ್ಯ ಇದೆಯೇ? ಹೆಸರು ಬಹಿರಂಗಪಡಿಸಲು ಸರ್ಕಾರ ಹಿಂದೇಟು ಹಾಕುತ್ತಿರುವುದೇಕೆ? ಅಕ್ರಮದಲ್ಲಿ ಭಾಗಿಯಾದ ಮಹಾ ಕಿಂಗ್​ಪಿನ್​ಗಳನ್ನು ಕರೆಸಿ ಏಕೆ ವಿಚಾರಿಸುತ್ತಿಲ್ಲ ಎಂದು ಪ್ರಶ್ನಿಸಿದರು. ಹಗರಣದ ಬಗ್ಗೆ ಮಾಹಿತಿ ನೀಡಲು ಯತ್ನಿಸಿದ ನನಗೆ ಮೂರು ಬಾರಿ ನೊಟೀಸ್ ನೀಡಿದ್ದಾರೆ. ಆದರೆ ಬಿಜೆಪಿ ಶಾಸಕರಿಗೆ, ಸಚಿವರಿಗೆ ಎಷ್ಟು ನೋಟಿಸ್ ನೀಡಲಾಗಿದೆ ಎಂದು ಪ್ರಶ್ನಿಸಿದರು.

32 ಜನರ ವಿಚಾರಣೆ ನಿನ್ನೆಗೆ ಮುಕ್ತಾಯ

ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಇಲ್ಲಿವರಗೆ 32 ಜನರನ್ನು ಸಿಐಡಿ ಅಧಿಕಾರಿಗಳು ಬಂಧಿಸಿತ್ತು. 32 ಜನರ ವಿಚಾರಣೆ ನಿನ್ನೆಗೆ ಮುಕ್ತಾಯವಾಗಿದೆ. ಆರೋಪಿಗಳ ಪೈಕಿ ಯಾರೊಬ್ಬರಿಗೂ ಜಾಮೀನು ಸಿಗದ ಹಿನ್ನೆಲೆ 32 ಜನರಿಗೂ ಇದೀಗ ಜೈಲು ಭಾಗ್ಯ ಫಿಕ್ಸ್​! ಆಗಿದೆ. ಎಲ್ಲರನ್ನು ಕಲಬುರಗಿ ಕೇಂದ್ರ ಕಾರಾಗೃಹಗೆ ಸಿಐಡಿ ಸಿಬ್ಬಂದಿ ಬಿಟ್ಟಿದ್ದು, ನಗರದ ಐವಾನ್ ಈ ಶಾಹಿ ಅತಿಥಿ ಗೃಹದಲ್ಲಿರೋ ಸಿಐಡಿ ಕಚೇರಿ, ಕಳೆದ ಒಂದು ತಿಂಗಳಿಂದ ಆರೋಪಿಗಳಿಂದ ತುಂಬಿ ಹೋಗಿತ್ತು. ತಿಂಗಳ ನಂತರ ಮೊದಲ ಬಾರಿಗೆ ಆರೋಪಿಗಳಿಲ್ಲದೆ ಸಿಐಡಿ ಕಚೇರಿ ಖಾಲಿಯಾಗಿದೆ. ಸದ್ಯ ಸಿಐಡಿ ಅಧಿಕಾರಿಗಳು ಎರಡನೇ ಹಂತದ ಕಾರ್ಯಾಚರಣೆಗೆ ಸಿದ್ದತೆ ನಡೆಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.