PSI Recruitment Scam: ಪತ್ನಿಯೇ ಜೈಲರ್ ಆಗಿರುವ ಜೈಲಿಗೆ ಕೈದಿಯಾಗಿ ಪತಿ ಮಹಾಶಯ ಎಂಟ್ರಿ! ಆದರೆ ಕಾನೂನು ಏನು ಹೇಳುತ್ತದೆ ಗೊತ್ತಾ?

PSI Recruitment Scam: ಪತ್ನಿಯೇ ಜೈಲರ್ ಆಗಿರುವ ಜೈಲಿಗೆ ಕೈದಿಯಾಗಿ ಪತಿ ಮಹಾಶಯ ಎಂಟ್ರಿ! ಆದರೆ ಕಾನೂನು ಏನು ಹೇಳುತ್ತದೆ ಗೊತ್ತಾ?
ಪತ್ನಿಯೇ ಜೈಲರ್ ಆಗಿರುವ ಜೈಲಿಗೆ ಕೈದಿಯಾಗಿ ಪತಿ ಮಹಾಶಯ ಎಂಟ್ರಿ! ಆದರೆ ಕಾನೂನು ಏನು ಹೇಳುತ್ತದೆ ಗೊತ್ತಾ?

Kalaburagi Jail: ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ 3 ವರ್ಷದಿಂದ ಸುನಂದಾ ಕೆಲಸ ಮಾಡುತ್ತಿದ್ದಾರೆ. ಕಾರ್ಯದಕ್ಷತೆಯಿಂದ ಹೆಸರು ಕೂಡಾ ಮಾಡಿದ್ದಾರೆ. ಯಾರಿಗೂ ಬೇಧಬಾವ ಮಾಡದೇ ಕರ್ತವ್ಯ ನಿರ್ವಹಿಸಿದ್ದಾರೆ. ಆದರೆ ಇದೀಗ ಪತಿಯೇ ಈ ರೀತಿಯಾಗಿ ಜೈಲಿಗೆ ಬರುತ್ತಾನೆ ಅಂತ ಸ್ವತಃ ಅವರು ಕೂಡಾ ಉಹಿಸಿರಲಿಕ್ಕಿಲ್ಲ. ಆದರೆ ಇಂತಹದೊಂದು ಸನ್ನಿವೇಶವಂತೂ ಸೃಷ್ಟಿಯಾಗಿದೆ.

TV9kannada Web Team

| Edited By: sadhu srinath

May 13, 2022 | 9:36 PM

ಕಲಬುರಗಿ: ಪತಿಯನ್ನು ಪತ್ನಿಯೇ ಬಂಧಿಸಿ ಜೈಲಿಗೆ ಕಳುಹಿಸುವುದು, ಪತ್ನಿಯನ್ನು ಬಂಧಿಸಿ ಪತಿ ಜೈಲಿಗೆ ಕಳುಹಿಸುವುದು, ಮಗನೇ ಹೆತ್ತವರನ್ನು ಬಂಧಿಸೋದು, ಈ ರೀತಿಯ ಅನೇಕ ಘಟನೆಗಳು ಆಗಾಗ ಘಟಿಸುತ್ತಿರುತ್ತವೆ. ಇಲ್ಲಾ ಅಂತೇನೂ ಅಲ್ಲ. ಆದ್ರೆ ಇದೀಗ ಸ್ವತಃ ಪತ್ನಿಯೇ ಜೈಲರ್ ಆಗಿರುವ ಜೈಲಿಗೆ ಪತಿ ಮಹಾಶಯ ಹೋಗಿದ್ದಾನೆ. ಹಾಗಂತ ಅತಿಥಿಯಾಗಿ ಅಲ್ಲಾ, ಬದಲಾಗಿ ವಿಚಾರಣಾಧೀನ ಕೈದಿಯಾಗಿ! ಇಂತಹದೊಂದು ಘಟನೆಗೆ ಇದೀಗ ಕಲಬುರಗಿ ಕೇಂದ್ರ ಕಾರಾಗೃಹ ಸಾಕ್ಷಿಯಾಗಿದೆ.

ಹೌದು ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದ ಪ್ರಕರಣದಲ್ಲಿ ಸಿಐಡಿ ಪೊಲೀಸರು ಏಳು ದಿನಗಳ ಹಿಂದೆ, ಕಲಬುರಗಿ ಕೆಎಸ್ಆರ್ ಪಿ ಅಸಿಸ್ಟೆಂಟ್ ಕಮಾಡೆಂಟ್ ವೈಜನಾಥ್ ರೇವೂರ್ ನನ್ನು ಬಂಧಿಸಿದ್ದರು. ಕಳೆದ ಏಳು ದಿನಗಳ ಕಾಲ ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಇಷ್ಟು ದಿನಗಳ ಕಾಲ ಸಿಐಡಿ ಕಸ್ಟಡಿಯಲ್ಲಿದ್ದ ವೈಜನಾಥ್ ನನ್ನು ಸಿಐಡಿ ಅಧಿಕಾರಿಗಳು ಇಂದು ಸಂಜೆ ಕಲಬುರಗಿ ಮೂರನೇ ಜೆಎಂಎಫ್​​ ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ನ್ಯಾಯಾಲಯ ವೈಜನಾಥ್ ಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ. ಹೀಗಾಗಿ ಸಿಐಡಿ ಅಧಿಕಾರಿಗಳು ವೈಜನಾಥ್ ನನ್ನು ಕಲಬುರಗಿ ನಗರದ ಹೊರವಲಯದಲ್ಲಿರುವ ಕೇಂದ್ರ ಕಾರಾಗೃಹಕ್ಕೆ ಬಿಟ್ಟು ಬಂದಿದ್ದಾರೆ.

ಪತ್ನಿ ಜೈಲರ್! ಪತಿ ವಿಚಾರಣಾಧೀನ ಕೈದಿ!! ಕಲಬುರಗಿಯಲ್ಲಿ ಸಿಐಡಿ ಅಧಿಕಾರಿಗಳು ಪ್ರಕರಣದಲ್ಲಿ ಇಲ್ಲಿವರಗೆ 32 ಜನರನ್ನು ಬಂಧಿಸಿದ್ದು, ಬಂಧಿತರ ವಿಚಾರಣೆ ನಂತರ, ಜೈಲಿಗೆ ಬಿಟ್ಟು ಬಂದಿದ್ದಾರೆ. ಅಕ್ರಮದಲ್ಲಿ ಭಾಗಿಯಾದವರು ಇದೀಗ ಜೈಲು ಪಾಲಾಗಿದ್ದಾರೆ. ಅದೇ ರೀತಿ ವೈಜನಾಥನನ್ನು ಕೂಡಾ ಸಿಐಡಿ ಅಧಿಕಾರಿಗಳು ಜೈಲಿಗೆ ಬಿಟ್ಟು ಬಂದಿದ್ದಾರೆ. ಆದ್ರೆ ಈ ವೈಜನಾಥ್ ಪತ್ನಿ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಜೈಲರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ನಿ ಜೈಲರ್ ಇರೋ ಜೈಲಿಗೆ ಪತಿ ವಿಚಾರಣಾಧೀನ ಕೈದಿಯಾಗಿ ಎಂಟ್ರಿಕೊಟ್ಟಿದ್ದಾನೆ. ಪ್ರತಿನಿತ್ಯ ಜೈಲಲ್ಲಿರೋ ಕೈದಿಗಳನ್ನು ನೋಡಿಕೊಳ್ಳುತ್ತಿದ್ದ ಪತ್ನಿಗೆ ಇದೀಗ, ಪತಿಯೇ ವಿಚಾರಣಾಧೀನ ಕೈದಿಯಾಗಿ ಬಂದಿರೋದು ಮುಜಗರಕ್ಕೆ ಕಾರಣವಾಗಿದೆ.

ಹೌದು ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಕಳೆದ ಮೂರು ವರ್ಷಗಳಿಂದ ಸುನಂದಾ ಅವರು ಕೆಲಸ ಮಾಡುತ್ತಿದ್ದಾರೆ. ತಮ್ಮ ಕಾರ್ಯದಕ್ಷತೆಯಿಂದ ಹೆಸರು ಕೂಡಾ ಮಾಡಿದ್ದಾರೆ. ಯಾರಿಗೂ ಬೇಧಬಾವ ಮಾಡದೇ ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ. ಆದರೆ ಇದೀಗ ಪತಿಯೇ ಈ ರೀತಿಯಾಗಿ ಜೈಲಿಗೆ ಬರುತ್ತಾನೆ ಅಂತ ಸ್ವತ ಅವರು ಕೂಡಾ ಉಹಿಸಿರಲಿಕ್ಕಿಲ್ಲಾ. ಆದರೆ ಇಂತಹದೊಂದು ಸನ್ನಿವೇಶವಂತೂ ಸೃಷ್ಟಿಯಾಗಿದೆ.

ಕಾನೂನು ಹೇಳೊದೇನು? ಪತಿ ಅಥವಾ ಪತ್ನಿ ಜೈಲು ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರೆ ಅವರ ಕುಟುಂಬದವರು ಯಾರೇ ಆಗಿದ್ದರೂ ವಿಚಾರಣಾಧೀನ ಕೈದಿಯಾಗಿ ಅಥವಾ ಸಜಾ ಕೈದಿಯಾಗಿ ಜೈಲಲ್ಲಿ ಇರಬಾರದು ಅಂತ ಯಾವುದೇ ನಿಯಮಗಳಿಲ್ಲ. ಜೈಲು ಸಿಬ್ಬಂದಿಯಾಗಿ ಕುಟುಂಬದವರು ಇದ್ದರೂ ಕೂಡಾ ಅವರ ಕುಟುಂಬದವರು ತಪ್ಪು ಮಾಡಿದ್ದರೆ, ಅವರನ್ನು ವಿಚಾರಣಾಧೀನ ಕೈದಿ, ಸಜಾ ಕೈದಿಯಾಗಿ ಇಟ್ಟುಕೊಳ್ಳಬಹುದು. ಆದ್ರೆ ಇಬ್ಬರಿಗೂ ಕೂಡಾ ಮುಜಗರವಾಗುವದನ್ನು ತಪ್ಪಿಸಲು ಮತ್ತು ಬೇರೆಯವರು ವಿನಾಕಾರಣ ಸ್ವಹಿತಾಸಕ್ತಿಯ ಆರೋಪ ಮಾಡುವುದರಿಂದ, ಪತಿ ಅಥವಾ ಪತ್ನಿ ಜೈಲಲ್ಲಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರೆ, ಇಬ್ಬರಲ್ಲಿ ಒಬ್ಬರನ್ನು ಬೇರೆ ಕಡೆಗೆ ಕಳುಹಿಸಲಾಗುವುದು.

ಇನ್ನು ಸುನಂದಾ ಅವರ ಪತಿ ವಿಚಾರಣಾಧೀನ ಕೈದಿಯಾಗಿ ಜೈಲಿಗೆ ಬಂದಿದ್ದರಿಂದ, ಸುನಂದಾ ಅವರಿಗೆ ಇಂದಿನಿಂದ ಸೋಮವಾರದವರಗೆ ಜೈಲಿನ ಮುಖ್ಯ ಅಧೀಕ್ಷಕರು ರಜೆ ನೀಡಿದ್ದಾರೆ. ಸೋಮವಾರ, ನ್ಯಾಯಾಲಯಕ್ಕೆ ಜೈಲು ಸಿಬ್ಬಂದಿ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. ವಿಚಾರಣಾಧೀನ ಕೈದಿಯ ಪತ್ನಿ, ಜೈಲರ್ ಆಗಿರೋದರಿಂದ ಮುಜಗರವನ್ನು ತಪ್ಪಿಸಲು, ವೈಜನಾಥ್ ನನ್ನು ಬೇರೆ ಜೈಲಿಗೆ ಶಿಫ್ಟ್​​ ಮಾಡಲು ಮನವಿ ಮಾಡಲಿದ್ದಾರೆ. ಒಂದು ವೇಳೆ ನ್ಯಾಯಾಲಯ ಮನವಿನಯನ್ನು ಪುರಸ್ಕರಿಸದೇ ಇದ್ದರೆ, ವೈಜನಾಥ್ ಜೈಲಲ್ಲಿ ಇರುವಷ್ಟು ದಿನ, ಸುನಂದಾ ಅವರನ್ನು ಬೇರೆ ಜೈಲಿಗೆ ತಾತ್ಕಾಲಿಕವಾಗಿ ವರ್ಗಾವಣೆ ಮಾಡಲು ಸಹ ಕಲಬುರಗಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರು ಚಿಂತನೆ ನಡೆಸಿದ್ದಾರೆ.

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿದ್ದಾರೆ ಆರು ಮಂದಿ ಜೈಲರುಗಳು! ಇನ್ನು ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಸುನಂದಾ ಅವರು ಮಾತ್ರ ಜೈಲರ್ ಆಗಿ ಕೆಲಸ ಮಾಡುತ್ತಿಲ್ಲಾ. ಸುನಂದಾ ಅವರ ರೀತಿ, ಒಟ್ಟು ಆರು ಜನ ಜೈಲರ್ ಇದ್ದಾರೆ. ಒಬ್ಬೊಬ್ಬ ಜೈಲರ್ ಒಂದೊಂದು ಉಸ್ತುವಾರಿ ಕೆಲಸವನ್ನು ನೋಡಿಕೊಳ್ಳುತ್ತಾರೆ. ಒಬ್ಬರು ಗಾರ್ಡನ್ ಉಸ್ತುವಾರಿ ನೋಡಿಕೊಂಡರೆ, ಇನ್ನೊಬ್ಬರು ಅಡುಗೆ ಉಸ್ತುವಾರಿ, ಕೈದಿಗಳ ಆಗಮನ- ನಿರ್ಗಮನದ ಉಸ್ತುವಾರಿ ನೋಡಿಕೊಳ್ಳುತ್ತಾರೆ. ಪ್ರತಿ ಆರು ತಿಂಗಳಿಗೊಮ್ಮೆ ಉಸ್ತುವಾರಿ ಬದಲಾವಣೆಯಾಗುತ್ತಾ ಹೋಗುತ್ತದೆ.

ಇಂದು ವೈಜನಾಥ್ ನ್ನು ಜೈಲಿಗೆ ತಂದು ಸಿಐಡಿ ಸಿಬ್ಬಂದಿ ಬಿಟ್ಟಿದ್ದಾರೆ. ಅವರ ಪತ್ನಿ ನಮ್ಮಲ್ಲಿ ಜೈಲರ್ ಆಗಿದ್ದಾರೆ. ಹೀಗಾಗಿ ಇಬ್ಬರಿಗೂ ಮುಜಗರವಾಗುವದನ್ನು ತಪ್ಪಿಸಲು ಏನಾದರೂ ಕ್ರಮ ಕೈಗೊಳ್ಳಲಾಗುವುದು. ವೈಜನಾಥ್ ನನ್ನೇ ಬೇರೆ ಜೈಲಿಗೆ ಶಿಫ್ಟ್​​ ಮಾಡಲು ನ್ಯಾಯಾಲಯಕ್ಕೆ ಮನವಿ ಮಾಡುತ್ತೇವೆ. ಇಲ್ಲದಿದ್ದರೆ ವೈಜನಾಥ್ ಅವರ ಪತ್ನಿಯನ್ನೇ ಬೇರೆ ಕಡೆಗೆ ತಾತ್ಕಾಲಿಕ ವಾಗಿ ಆನ್​ ಡ್ಯೂಟಿ ಕಳುಹಿಸಲಾಗುವುದು ಎನ್ನುತ್ತಾರೆ ಕಲಬುರಗಿ ಕೇಂದ್ರ ಕಾರಾಗೃಹ ಮುಖ್ಯ ಅಧೀಕ್ಷಕ ರಮೇಶ್.

ವರದಿ: ಸಂಜಯ್ ಚಿಕ್ಕಮಠ

Follow us on

Related Stories

Most Read Stories

Click on your DTH Provider to Add TV9 Kannada