ಪಿಎಸ್ಐ ಅಕ್ರಮದ ಸೂತ್ರಧಾರ ನಾಯಕಿ ದಿವ್ಯಾ ಹಾಗರಗಿ ಜೈಲುಪಾಲಾಗಿ 2 ವಾರವಾದರೂ ಸರ್ಕಾರಿ ಸ್ಥಾನ-ಮಾನ ಸುಭದ್ರ! ಬಿಜೆಪಿ ಸರ್ಕಾರ ಇನ್ನೂ ಉಳಿಸಿಕೊಂಡಿರುವುದು ಏಕೆ?
Priyank Kharge: ದಿವ್ಯಾ ಹಾಗರಗಿಗೆ ಬಿಜೆಪಿ ಸರ್ಕಾರ ನೀಡಿದ್ದ ಸದಸ್ಯತ್ವ ರದ್ದಾಗಿಲ್ಲಾ ಏಕೆ? ರದ್ದು ಮಾಡಿದ್ರೆ ತಮ್ಮ ಬಗ್ಗೆ ದಿವ್ಯಾ ಹಾಗರಗಿ ಏನಾದ್ರೂ ಬಾಯಿಬಿಟ್ಟಾಳು ಅನ್ನೋ ಭಯ ಬಿಜೆಪಿ ನಾಯಕರನ್ನು ಕಾಡುತ್ತಿದೆಯಾ? ಯಾಕೆ ಸರ್ಕಾರ ಇಲ್ಲಿವರಗೆ ಕ್ರಮ ಕೈಗೊಂಡಿಲ್ಲಾ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಮಾರ್ಮಿಕ ಪ್ರಶ್ನೆ ಎತ್ತಿದ್ದಾರೆ.
ಕಲಬುರಗಿ: ಸಾಮಾನ್ಯವಾಗಿ ಸರ್ಕಾರಿ ಉದ್ಯೋಗಿಗಳು ಅಪರಾಧ ಕೃತ್ಯವೆಸಗಿ ಜೈಲುಪಾಲಾದರೆ ಅವರಿಗೆ ಡಿಸ್ಮಿಸ್ ಭಾಗ್ಯ ಕಟ್ಟಿಟ್ಟಬುತ್ತಿಯಾಗಿರುತ್ತದೆ. ಆದರೆ ಇದು ರಾಜಕೀಯ ಪಕ್ಷಗಳಿಗೆ ಅನ್ವಯವಾಗುತ್ತದಾ? ಅಥವಾ ರಾಜಕೀಯ ಪ್ರೇರಿತವಾಗಿ ನೇಮಕಗೊಂಡ ಹುದ್ದೆಗಳಿಗೂ ಅನ್ವಯವಾಗುತ್ತದಾ? ಎಂಬುದು ಜನ ಕುತೂಹಲದಿಂದ ಕೇಳುವ ಪ್ರಶ್ನೆ. ಪ್ರಸಂಗ ಏನೆಂದರೆ… 545 ಪಿಎಸ್ಐ ಹುದ್ದೆ ನೇಮಕಾತಿ ಅಕ್ರಮ ಪ್ರಕರಣದ ಪ್ರಧಾನ ಸೂತ್ರಧಾರ ಎನಿಸಿರುವ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ (Divya Hagargi) ಬಂಧನ ವಿಚಾರ. ದಿವ್ಯಾ ಹಾಗರಗಿ ತಿಂಗಳ ಕಾಲ ಸತಾಯಿಸಿ, ಕೊನೆಗೂ ನೆರೆ ರಾಜ್ಯದಲ್ಲಿ ನಡುರಾತ್ರಿ ಕರ್ನಾಟಕ ಪೊಲೀಸರ ವಶವಾಗಿ ಅದಾಗಲೇ ಎರಡು ವಾರ ಕಾಲವಾಗುತ್ತಾ ಬಂದಿದೆ (Jail). ಆದರೆ ಆಕಿ ಬಂಧನವಾಗಿದ್ದರೂ ಆಕಿಗೆ ನೀಡಿದ್ದ ಹುದ್ದೆಯನ್ನು ಹಿಂಪಡೆಯುವ ಮನಸು ರಾಜ್ಯ ಸರ್ಕಾರಕ್ಕಿ ಇದ್ದಂತಿಲ್ಲ. ದಿಶಾ ಸಮಿತಿ ಸಭೆ ಸದಸ್ಯೆಯಾಗಿ ದಿವ್ಯಾರನ್ನು ಸರ್ಕಾರ ನೇಮಿಸಿತ್ತು. ರಾಜ್ಯ ನರ್ಸಿಂಗ್ ಕೌನ್ಸಿಲ್ ಸದಸ್ಯೆಯಾಗಿಯೂ ದಿವ್ಯಾರನ್ನು ನೇಮಿಸಿತ್ತು. ದಿವ್ಯಾಗೆ ಒಟ್ಟೊಟ್ಟಿಗೆ ನೀಡಿದ್ದ ಎರಡೂ ಸದಸ್ಯತ್ವವನ್ನು ಸರ್ಕಾರ ಹಿಂಪಡೆದಿಲ್ಲ. ಸೋಜಿಗದ ವಿಷಯೆವೆಂದರೆ ಪ್ರಕರಣದಲ್ಲಿ ಬಂಧಿತರಾದ ಉನ್ನತಮಟ್ಟದ ಅಧಿಕಾರಿಗಳೂ ಸೇರಿದಂತೆ ಹಲವರು ಸರ್ಕಾರಿ ಸೇವೆಯಿಂದ ಅಮಾನತುಗೊಂಡು ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ. ದಿವ್ಯಾ ಹಾಗರಗಿ ಸಹ ಗೋಳಾಡುತ್ತಾ ಕಂಬಿ ಎಣಿಸುತ್ತಿದ್ದಾರೆ. ಆದರೆ ಅವರ ಸರ್ಕಾರಿ ಸ್ಥಾನಮಾನ ಇನ್ನೂ ಸುಭದ್ರವಾಗಿದೆ. ಅಧಿಕಾರಿಗಳನ್ನು ಅಮಾನತು ಮಾಡಿರುವ ರಾಜ್ಯ ಸರ್ಕಾರ, ದಿವ್ಯಾ ಹಾಗರಗಿ ವಿಚಾರದಲ್ಲಿ ಮೌನವಾಗಿರುವುದು ಏಕೆ ಎಂದು ರಾಜ್ಯದ ಜನತೆ ಪ್ರಶ್ನಿಸುತ್ತಿದ್ದಾರೆ (PSI Recruitment Scam).
ದಿವ್ಯಾ ಹಾಗರಗಿಗೆ ಬಿಜೆಪಿ ಸರ್ಕಾರ ನೀಡಿದ್ದ ಸದಸ್ಯತ್ವ ರದ್ದಾಗಿಲ್ಲಾ ಏಕೆ? ರದ್ದು ಮಾಡಿದ್ರೆ ತಮ್ಮ ಬಗ್ಗೆ ದಿವ್ಯಾ ಹಾಗರಗಿ ಏನಾದ್ರೂ ಬಾಯಿಬಿಟ್ಟಾಳು ಅನ್ನೋ ಭಯ ಬಿಜೆಪಿ ನಾಯಕರನ್ನು ಕಾಡುತ್ತಿದೆಯಾ? ಸರ್ಕಾರ ಇಲ್ಲಿವರೆಗೆ ಕ್ರಮ ಕೈಗೊಂಡಿಲ್ಲಾ ಯಾಕೆ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಮಾರ್ಮಿಕ ಪ್ರಶ್ನೆ ಎತ್ತಿದ್ದಾರೆ (Priyank Kharge). – ಸಂಜಯ್ ಚಿಕ್ಕಮಠ, ಟಿವಿ9
ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:58 pm, Fri, 13 May 22