Kalaburagi News: ಜಮೀನಿನಲ್ಲಿ ವಿದ್ಯುತ್ ತಂತಿ ತಗುಲಿ ರೈತನ ಜೊತೆ ಎತ್ತು ಬಲಿ
ಜಮೀನಿನಿಂದ ಮನೆಗೆ ಬರುವಾಗ ಜಮೀನಿನಲ್ಲಿ ಜೋತುಬಿದ್ದ ವಿದ್ಯುತ್ ತಂತಿಗೆ ಬಾರುಕೋಲು ತಗುಲಿ ಯುವ ರೈತ ಹಾಗೂ ಎತ್ತು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಿನ್ನೆ ಮಳೆಯಿಂದಾಗಿ ಮನೆ ಗೋಡೆ ಕುಸಿದು ಮಹಿಳೆ ಮೃತಪಟ್ಟಿದ್ದರು.
ಕಲಬುರಗಿ, ಜುಲೈ 25: ಜಮೀನಿನಲ್ಲಿ ವಿದ್ಯುತ್ ತಂತಿ ತಗುಲಿ(Electrocuted ) ಸ್ಥಳದಲ್ಲೇ ಯುವ ರೈತ(Farmer) ಹಾಗೂ ಎತ್ತು(Ox) ಮೃತಪಟ್ಟ ಘಟನೆ ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಕರದಾಳ ಗ್ರಾಮದಲ್ಲಿ ನಡೆದಿದೆ. ಬಸವರಾಜ್ ಹೆಗಲೇರಿ (24) ಹಾಗೂ ಎತ್ತು ಸ್ಥಳದಲ್ಲೇ ಸಾವನ್ನಪ್ಪಿದೆ. ಸಂಜೆ ಜಮೀನಿನಿಂದ ಮನೆಗೆ ಬರುವಾಗ ಜಮೀನಿನಲ್ಲಿ ಜೋತುಬಿದ್ದ ವಿದ್ಯುತ್ ತಂತಿಗೆ ಬಾರುಕೋಲು ತಗುಲಿ ಘಟನೆ ಸಂಭವಿಸಿದೆ. ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿರಂತರ ಮಳೆಗೆ ಕುಸಿದ ಮಣ್ಣಿನ ಗೋಡೆ: ಮಹಿಳೆ ಸಾವು
ಕಲಬುರಗಿ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಮಳೆ ಸುರಿಯುತ್ತಿದೆ. ನಿರಂತರ ಮಳೆಯಿಂದ ಮಣ್ಣಿನಿಂದ ನಿರ್ಮಾಣ ಮಾಡಿರೋ ಗೋಡೆಗಳು ಬೀಳುತ್ತಿವೆ. ಮನೆ ಗೋಡೆ ಬಿದ್ದಿದ್ದರಿಂದ ಮಹಿಳೆಯೋರ್ವಳು ಮೃತಪಟ್ಟಿರೋ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಬಿರಾಳ್ ಬಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮೂವತ್ತೈದು ವರ್ಷದ ಬಸಮ್ಮ ಮೃತ ಮಹಿಳೆ, ಮನೆಯಲ್ಲಿ ಇದ್ದಾಗ ದಿಡೀರನೆ ಮನೆಯ ಗೋಡೆ ಬಿದ್ದಿದ್ದು, ಬಸಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಈ ಬಗ್ಗೆ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Karnataka Breaking Kannada News Live: ಸಿಎಂ ಆದ ನಂತರ ಮೊದಲ ಬಾರಿ ಹಾವೇರಿಗೆ ಭೇಟಿ ನೀಡಲಿರುವ ಸಿದ್ದರಾಮಯ್ಯ
ಜೂನ್ ಮತ್ತು ಜುಲೈ ಆರಂಭದ ದಿನಗಳಲ್ಲಿ ಮಳೆ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಬರದ ಕಾರ್ಮೋಡ ಕವಿದಿತ್ತು. ಆದರೆ ಜುಲೈ 15 ರಿಂದ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ. ನಿರಂತರ ಮಳೆಯಿಂದ ಅನ್ನದಾತರ ಮೊಗದಲ್ಲಿ ಮಂದಹಾಸ ಮೂಡಿದೆ. ಜೊತೆಗೆ ಅನೇಕ ಅವಘಡಗಳು ಕೂಡ ಸಂಭವಿಸುತ್ತಿವೆ. ನಗರದ ಶಹಬಜಾರ್ ಪ್ರದೇಶದಲ್ಲಿ ಮೂರು ದಿನದ ಹಿಂದೆಯಷ್ಟೇ ಮಣ್ಣು ಮತ್ತು ಕಲ್ಲಿನಿಂದ ನಿರ್ಮಾಣ ಮಾಡಿದ್ದ ದೊಡ್ಡ ಗೋಡೆ ಕುಸಿದು ಬಿದ್ದಿತ್ತು. ಅದೃಷ್ಟವಶಾತ್ ಮನೆಯಲ್ಲಿ ಯಾರು ಇಲ್ಲದೇ ಇದ್ದಿದ್ದರಿಂದ ದೊಡ್ಡ ಅನಾಹುತ ತಪ್ಪಿತ್ತು.
ಅಪಫಜಲಪುರ ತಾಲೂಕಿನ ಸಿದನೂರು, ಚಿತ್ತಾಪುರ, ಚಿಂಚೋಳಿ ತಾಲೂಕಿನ ಅನೇಕ ಗ್ರಾಮಗಳಲ್ಲಿ ಸಾಕಷ್ಟು ಮನೆಗಳ ಗೋಡೆಗಳು ನಿರಂತರ ಮಳೆಯಿಂದ ಕುಸಿದು ಬಿದ್ದಿವೆ. ಜಿಲ್ಲೆಯಲ್ಲಿ ಹೆಚ್ಚಾಗಿ ಮಣ್ಣು ಮತ್ತು ಕಲ್ಲಿನಿಂದ ನಿರ್ಮಾಣ ಮಾಡಿರುವ ಬಹಳಷ್ಟು ಮನೆಗಳಿವೆ. ಅವುಗಳಿಗೆ ಅನೇಕರು ಸಿಮೆಂಟ್ ಕೂಡಾ ಹಾಕಿಲ್ಲ. ಭಾರೀ ಮಳೆಯಾದರೆ ಮಣ್ಣು ಕರಗುವುದರಿಂದ ಗೋಡೆಗಳು ಕುಸಿದು ಬೀಳುತ್ತಿವೆ.
ಕಲಬುರಗಿ ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ