ಸಸ್ಯ ಸಂತೆ ಮೂಲಕ ಕಲಬುರಗಿಯನ್ನ ಹಸಿರು ನಾಡು ಮಾಡಲು ಅಧಿಕಾರಿಗಳ ಕಸರತ್ತು!
ಕಲಬುರಗಿ: ರಾಜ್ಯದ ಬಿಸಿಲ ನಾಡು, ಕಡಿಮೆ ತೋಟಗಾರಿಕಾ ಮತ್ತು ಕಡಿಮೆ ಅರಣ್ಯ ಹೊಂದಿರೋ ಜಿಲ್ಲೆ ಅಂದ್ರೆ ಅದು ಕಲಬುರಗಿ ಜಿಲ್ಲೆ. ಆದ್ರೆ ಈ ಅಪವಾದದ ಪೊರೆ ಸರಿಸಿ ಕಲಬುರಗಿಯನ್ನು ಹಸಿರ ನಾಡು ಮಾಡೋ ಪ್ರಯತ್ನಕ್ಕೆ ಕೈ ಹಾಕಿದೆ ಜಿಲ್ಲಾ ತೋಟಗಾರಿಕೆ ಇಲಾಖೆ. ಈ ಸಂಬಂಧ ಸಾರ್ವಜನಿಕರು ಮತ್ತು ರೈತರಲ್ಲಿ ಜಾಗೃತಿ ಮೂಡಿಸಲು ಸಸ್ಯ ಸಂತೆಯನ್ನು ಪ್ರಾರಂಭಿಸಿದೆ. ಹೌದು ಕಲಬುರಗಿ ತೋಟಗಾರಿಕೆ ಇಲಾಖೆ ವತಿಯಿಂದ ನಗರದ ಐವಾನ್ ಈ ಶಾಹಿ ರಸ್ತೆಯಲ್ಲಿರುವ ತೋಟಗಾರಿಕೆ ಇಲಾಖೆ ಕಚೇರಿಯಲ್ಲಿ ಸಸ್ಯ ಸಂತೆ […]
ಕಲಬುರಗಿ: ರಾಜ್ಯದ ಬಿಸಿಲ ನಾಡು, ಕಡಿಮೆ ತೋಟಗಾರಿಕಾ ಮತ್ತು ಕಡಿಮೆ ಅರಣ್ಯ ಹೊಂದಿರೋ ಜಿಲ್ಲೆ ಅಂದ್ರೆ ಅದು ಕಲಬುರಗಿ ಜಿಲ್ಲೆ. ಆದ್ರೆ ಈ ಅಪವಾದದ ಪೊರೆ ಸರಿಸಿ ಕಲಬುರಗಿಯನ್ನು ಹಸಿರ ನಾಡು ಮಾಡೋ ಪ್ರಯತ್ನಕ್ಕೆ ಕೈ ಹಾಕಿದೆ ಜಿಲ್ಲಾ ತೋಟಗಾರಿಕೆ ಇಲಾಖೆ. ಈ ಸಂಬಂಧ ಸಾರ್ವಜನಿಕರು ಮತ್ತು ರೈತರಲ್ಲಿ ಜಾಗೃತಿ ಮೂಡಿಸಲು ಸಸ್ಯ ಸಂತೆಯನ್ನು ಪ್ರಾರಂಭಿಸಿದೆ.
ಹೌದು ಕಲಬುರಗಿ ತೋಟಗಾರಿಕೆ ಇಲಾಖೆ ವತಿಯಿಂದ ನಗರದ ಐವಾನ್ ಈ ಶಾಹಿ ರಸ್ತೆಯಲ್ಲಿರುವ ತೋಟಗಾರಿಕೆ ಇಲಾಖೆ ಕಚೇರಿಯಲ್ಲಿ ಸಸ್ಯ ಸಂತೆ ಆಯೋಜಿಸಲಾಗಿದೆ. ಜೂನ್ 17ಕ್ಕೆ ಪ್ರಾರಂಭವಾಗಿರೋ ಸಸ್ಯ ಸಂತೆ ಜೂನ್ 30ರವರೆಗೆ ನಡೆಯಲಿದೆ. ಈ ಸಮಯದಲ್ಲಿ ರೈತರಿಗೆ ಮತ್ತು ಸಾರ್ವಜನಿಕರಿಗೆ ತೋಟಗಾರಿಕೆ ಬೆಳೆಗಳ ಪರಿಚಯ ಮಾಡುವುದಲ್ಲದೇ ಸಸ್ಯಗಳನ್ನು ಮಾರಾಟ ಕೂಡಾ ಮಾಡಲಾಗುತ್ತೆ.
ಹದಿಮೂರು ದಿನಗಳ ಕಾಲ ನಡೆಯಲಿರುವ ಸಸ್ಯ ಸಂತೆಯಲ್ಲಿ ರೈತರು ಮತ್ತು ಸಾರ್ವಜನಿಕರು ತೋಟಗಾರಿಕೆ ಬೆಳೆಗಳ ಅಗತ್ಯ ಮಾಹಿತಿ ಪಡೆಯಬಹುದು. ತೋಟಗಾರಿಕೆ ಇಲಾಖೆ ತನ್ನ ನರ್ಸರಿಯಲ್ಲಿ ಬೆಳಸಿದ ಸಸಿಗಳನ್ನು ಕಡಿಮೆ ಬೆಲೆಗೆ ಸಾರ್ವಜನಿಕರು ಖರೀದಿಸಬಹುದು. ಅದೂ ಉತ್ತಮ ಗುಣಮಟ್ಟದಲ್ಲಿ ಸಸಿಗಳನ್ನ. ಇದರ ಜೊತೆಗೆ ಹೂವಿನ ಸಸಿಗಳು, ಅಲಂಕಾರಿಕ ಸಸಿಗಳನ್ನು ಕೂಡಾ ಇಲ್ಲಿ ಮಾರಟ ಮಾಡಲಾಗುತ್ತಿದೆ.
4ಲಕ್ಷ ಹೆಕ್ಟೇರ್ ಕೃಷಿ ಭೂಮಿಯಲ್ಲಿ 21 ಸಾವಿರ ಹೆಕ್ಟೇರ್ ಮಾತ್ರ ತೋಟಗಾರಿಕೆ ಕಲಬುರಗಿಯಲ್ಲಿ ನಾಲ್ಕು ಲಕ್ಷ ಹೆಕ್ಟೇರ್ ಕೃಷಿ ಭೂಮಿಯಿದೆ. ಆದ್ರೆ ಅದರಲ್ಲಿ ತೋಟಗಾರಿಕೆ ಬೆಳೆಗಳು ಇರುವುದು ಕೇವಲ 21 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಮಾತ್ರ. ಹಸಿರು ಕಡಿಮೆ ಇರುವ ಬಿಸಿಲನಾಡು ಅನ್ನೋ ಅಪಖ್ಯಾತಿ ತೆಗೆದು ಹಸಿರು ನಾಡು ಮಾಡಬೇಕು ಅನ್ನೋ ಉದ್ದೇಶ ತೋಟಗಾರಿಕೆ ಇಲಾಖೆಯದ್ದು. ಇದಕ್ಕಾಗಿ ಕಳೆದ ವರ್ಷದಿಂದ ಕಲಬುರಗಿ ನಗರ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಕೂಡಾ ಸಸ್ಯ ಸಂತೆಯನ್ನು ಆಯೋಜಿಸುತ್ತಿದೆ.
ಸಸ್ಯ ಸಂತೆ ಬಗ್ಗೆ ಬಹುತೇಕರಿಗೆ ಮಾಹಿತಿಯೇ ಇಲ್ಲ! ಆದ್ರೆ ಈ ಸಸ್ಯ ಸಂತೆಯ ಬಗ್ಗೆ ಬಹುತೇಕ ರೈತರಿಗೆ ಮಾಹಿತಿಯೇ ಇಲ್ಲ ಎನ್ನೋ ಆರೋಪಗಳು ಕೇಳಿ ಬರುತ್ತಿವೆ. ನಾವು ಬೇರೆ ಬೇರೆ ಕಡೆ ಹೋಗಿ ಸಸಿಗಳನ್ನು ಖರೀದಿಸಿ ತರ್ತಾಯಿದ್ದೇವೆ. ಆದ್ರೆ ಜಿಲ್ಲೆಯಲ್ಲಿಯೇ ನಡೆಯುತ್ತಿರುವ ಸಸ್ಯ ಸಂತೆಯ ಬಗ್ಗೆ ತೋಟಗಾರಿಕೆ ಇಲಾಖೆ ಸರಿಯಾಗಿ ಪ್ರಚಾರ ಮಾಡಿಲ್ಲಾ. ಹೀಗಾಗಿ ಬಹುತೇಕ ಸಾರ್ವಜನಿಕರಿಗೆ ಅದರ ಮಾಹಿತಿ ಸಿಗದಂತಾಗಿದೆ ಎಂದು ಕೆಲ ರೈತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಅದೇನೇ ಇರಲಿ ಸಸ್ಯ ಸಂತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಜನರಿಗೆ ತೋಟಗಾರಿಕೆ ಬೆಳೆಗಳನ್ನು ಹೆಚ್ಚು ಬೆಳೆಯುವಂತೆ ಮಾಡಿದ್ರೆ ಕಲಬುರಗಿ ಹಸಿರು ಹೊದ್ದ ನಾಡಾಗಲಿದೆ. ಈ ನಿಟ್ಟಿನಲ್ಲಿ ಇಲಾಖೆ ಜೊತೆಗೆ ಸಾರ್ವಜನಿಕರು ಕೂಡಾ ಕೈ ಜೋಡಿಸಬೇಕಿದೆ. ಶೃದ್ಧೆ ವಹಿಸಿ ತೋಟಗಾರಿಕೆ ಗಿಡಗಳನ್ನು ಮನೆಯ ಆವರಣದಲ್ಲಿ, ಕೃಷಿ ಜಮೀನಿನಲ್ಲಿ ಬೆಳೆಯುವ ಕೆಲಸ ಮಾಡಬೇಕಿದೆ. ಇದಕ್ಕೆ ಸರ್ಕಾರಿ ಅಧಿಕಾರಿಗಳು ಮತ್ತು ಸಾರ್ವಜನಿಕರು ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಿಬೇಕಿದೆ – ಸಂಜಯ್