
ಕಲಬುರಗಿ, ಅಕ್ಟೋಬರ್ 03: ಸೇಡಂ ತಾಲೂಕಿನ ಊಡಗಿ ಗ್ರಾಮದಲ್ಲಿ ಐ ಲವ್ ಮೊಹಮ್ಮದ್ ಬ್ಯಾನರ್ ರಾರಾಜಿಸಿದ್ದು, ಹಿಂದೂ ಸಂಘಟನೆಳು ಆಕ್ರೋಶ ಹೊರಕಿದ ಪ್ರಸಂಗ ನಡೆದಿದೆ. ಗ್ರಾಮದ ಮುಖ್ಯ ರಸ್ತೆಯಲ್ಲಿ ಬ್ಯಾನರ್ ಹಾಕಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿಯೂ ವ್ಯಾಪಕ ವಿರೋಧ ವ್ಯಕ್ತವಾಗ್ತಿದೆ. ಸಚಿವ ಶರಣಪ್ರಕಾಶ್ ಪಾಟೀಲ್ (Sharanprakash Patil) ಸ್ವಗ್ರಾಮ ಊಡಗಿಯಲ್ಲೇ ಬ್ಯಾನರ್ ಅಳವಡಿಸಿರುವ ಕಾರಣ, ಸಚಿವರೇ ಜಿಹಾದಿ ಮನಸ್ಥಿತಿಯಿಂದ ಹೊರಗಡೆ ಬನ್ನಿ. ಹಿಂದೂ ಸಮಾಜವನ್ನ ಏನು ಮಾಡಲು ಹೊರಟಿದ್ದೀರಿ? ಸೇಡಂನಲ್ಲಿ ತುಘಲಕ್ ದರ್ಬಾರ್ ನಡೆಯುತ್ತಿದೆ ಎಂದು ಹಿಂದೂ ಸಂಘಟನೆಗಳು ಕಿಡಿ ಕಾರಿವೆ. ಸ್ಥಳಕ್ಕೆ ಬಂದ ಪೊಲೀಸರು ಅಂತಿಮವಾಗಿ ಬ್ಯಾನರ್ ತೆಗೆಸಿದ್ದಾರೆ.
ಕಾರ್ಲ್ ಮಾರ್ಕ್ಸ್ ನಗರದಲ್ಲಿಯೂ ಐ ಲವ್ ಮೊಹಮ್ಮದ್ ಎಂಬ ಬರಹವುಳ್ಳ ಫ್ಲೆಕ್ಸ್ ಹಾಕಿದ್ದಕ್ಕೆ ದೊಡ್ಡ ಮಟ್ಟದ ಗಲಾಟೆ ಇತ್ತೀಚೆಗಷ್ಟೇ ನಡೆದಿತ್ತು. ಫ್ಲೆಕ್ಸ್ ಹರಿಯಲಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಕೆಲ ಕಿಡಿಗೇಡಿಗಳು ಸುಳ್ಳು ಸುದ್ದಿ ಹರಿಬಿಟ್ಟ ಪರಿಣಾಮ ನೂರಾರು ಜನ ಗುಂಪುಗೂಡಿ ಪರಿಸ್ಥಿತಿ ನಿಯಂತ್ರಣ ಕಳೆದುಕೊಂಡಿತ್ತು. ಈ ವೇಳೆ ಹಿಂದೂಗಳ ಮನೆಗಳ ಮೇಲೆ ಕಲ್ಲು ತೂರಾಟ ನಡೆದಿದೆ ಎಂಬ ಆರೋಪವೂ ಕೇಳಿಬಂತು. ಗಲಾಟೆಯಲ್ಲಿ ನಾಲ್ವರಿಗೆ ಗಾಯಗಳಾಗಿದ್ದು, ವಾಹನಗಳು ಜಖಂಗೊಂಡಿದ್ದವು. ಘಟನೆ ಸಂಬಂಧ ಹಲವರ ವಿರುದ್ಧ ಎಫ್ಐಆರ್ ಕೂಡ ದಾಖಲಿಸಲಾಗಿತ್ತು. ಆ ಘಟನೆ ಮಾಸುವ ಮುನ್ನವೇ ಇದೀಗ ಸೇಡಂ ತಾಲೂಕಿನ ಊಡಗಿ ಗ್ರಾಮದಲ್ಲಿ ಮತ್ತೊಂದು ಬ್ಯಾನರ್ ರಾರಾಜಿಸಿದೆ.
ಇದನ್ನೂ ಓದಿ: ‘ಐ ಲವ್ ಮೊಹಮ್ಮದ್’ ಫ್ಲೆಕ್ಸ್ ವಿವಾದ: ಏನಿದು? ಶುರುವಾಗಿದ್ದು ಎಲ್ಲಿಂದ?
ಕರ್ನಾಟಕ ಮಾತ್ರವಲ್ಲದೆ ದೇಶದ ವಿವಿಧೆಡೆ ಈ ‘ಐ ಲವ್ ಮೊಹಮ್ಮದ್’ ವಿಚಾರ ವಿವಾದವಾಗಿ ಮಾರ್ಪಟ್ಟಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಭಾರತದಲ್ಲಿ ನಾನು ಮೋದಿಯನ್ನು ಪ್ರೀತಿಸುತ್ತೇನೆ ಎಂದು ಹೇಳಬಹುದು. ಆದರೆ ನಾನು ಮೊಹಮ್ಮದ್ನನ್ನು ಪ್ರೀತಿಸುತ್ತೇನೆ ಎಂದು ಹೇಳುವಂತಿಲ್ಲ ಎಂದು ದೂರಿದ್ದಾರೆ. ನೀವು ಈ ದೇಶವನ್ನು ಎಲ್ಲಿಗೆ ಕೊಂಡೊಯ್ಯುತ್ತಿದ್ದೀರಿ? ನಾನು ಮೋದಿಯನ್ನು ಪ್ರೀತಿಸುತ್ತೇನೆ ಎಂದು ಯಾರಾದರೂ ಹೇಳಿದರೆ ಸಂತೋಷ ಪಡುತ್ತೀರಿ. ಅದೇ ನಾನು ಮೊಹಮ್ಮದ್ ಅವರನ್ನು ಪ್ರೀತಿಸುತ್ತೇನೆ ಎಂದು ಹೇಳಿದರೆ ಅದಕ್ಕೆ ವಿರೋಧ ಏಕೆ ಎಂದು ಪ್ರಶ್ನಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.