ಕಲಬುರಗಿ, ಸೆಪ್ಟೆಂಬರ್ 4: ಜಿಲ್ಲೆಯಲ್ಲಿ ಬಿಟ್ಟು ಬಿಡದೇ ಮಳೆ (rain) ಸುರಿಯುತ್ತಿದೆ. ಬಾರಿ ಮಳೆಯಿಂದ ರಸ್ತೆಗಳು ಜಲಾವೃತಗೊಂಡಿದ್ದು, ಮತ್ತೊಂದೆಡೆ ವಾಹನ ಸವಾರರು ಪರಡಾವಂತಾಗಿದೆ. ಎರಡು ದಿನಗಳ ಕಾಲ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಇಂದು ಕೂಡ ಜಿಲ್ಲೆಯಲ್ಲಿ ಮಳೆ ಅಬ್ಬರ ಜೋರಾಗಿದ್ದು, ಸೇಡಂ ಪಟ್ಟಣದ ಎಸಿ ಕಚೇರಿ ಪಕ್ಕದಲ್ಲಿರುವ ಪೊಲೀಸ್ ಠಾಣೆಗೆ ಮಳೆ ನೀರು ನುಗ್ಗಿದ್ದು, ಪೊಲೀಸರು ಪರದಾಡಿದ್ದಾರೆ. ತಗ್ಗು ಪ್ರದೇಶದಲ್ಲಿ ಇರುವುದರಿಂದ ಪ್ರತಿ ಮಳೆಗಾಲದಲ್ಲಿ ಠಾಣೆಗೆ ಮಳೆ ನೀರು ನುಗ್ಗುತ್ತದೆ. ದಾಖಲಾತಿಗಳನ್ನು ಟೇಬಲ್ ಮೇಲೆ ಇಟ್ಟು ಹಾಳಾಗದಂತೆ ಸಿಬ್ಬಂದಿಗಳು ಎಚ್ಚರವಹಿಸಿದ್ದಾರೆ.
ಮಳೆ ನೀರು ಹರಿದುಕೊಂಡು ಹೋಗಲು ಸೂಕ್ತ ವ್ಯವಸ್ಥೆ ಇಲ್ಲದೇ ಇರುವುದರಿಂದ ಸಮಸ್ಯೆ ಉಂಟಾಗಿದ್ದು, ಇದೀಗ ನೀರನ್ನು ಹೊರಹಾಕಲು ಪೊಲೀಸರು ಪರದಾಡುತ್ತಿದ್ದಾರೆ. ಕೇವಲ ಪೊಲೀಸ್ ಠಾಣೆ ಅಲ್ಲದೇ ಸೇಡಂ ತಾಲೂಕಿನ ತೋಟನಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಮಳೆ ನೀರು ನುಗ್ಗಿದ್ದು, ಮೈದಾನ ಜಲಾವೃತಗೊಂಡಿದೆ.
ಇದನ್ನೂ ಓದಿ: ಕಲಬುರಗಿಯಲ್ಲಿ ಮಳೆ ಆರ್ಭಟ; ಗೋಡೆ ಕುಸಿದು 80ಕ್ಕೂ ಅಧಿಕ ಕುರಿ, ಮೇಕೆಗಳ ಸಾವು
ಭಾರೀ ಮಳೆಯಿಂದ ಅನೇಕ ಕೆರೆಗಳು ತುಂಬಿವೆ. ದೋಟಿಕೋಳ ಕೆರೆ ಕೋಡಿ ಬಿದ್ದ ಹಿನ್ನೆಲೆ, ಚಿಂಚೋಳಿ ತಾಲೂಕಿನ ಕನಕಾಪುರ ತಾಜಲಾಪುರ ನಡುವಿನ ರಸ್ತೆ ಸಂಪರ್ಕ ಕಡಿತವಾಗಿದೆ. ಹಳ್ಳದಲ್ಲಿ ಕೊಚ್ಚಿಹೋಗಿದ್ದ ಯುವಕನನ್ನು ಸ್ಥಳೀಯರು ರಕ್ಷಿಸಿರುವಂತಹ ಘಟನೆ ಚಿಂಚೋಳಿ ತಾಲೂಕಿನ ದೋಟಿಕೊಳ ಗ್ರಾಮದಲ್ಲಿ ನಡೆದಿದೆ. ಅಪಾಯವನ್ನು ಲೆಕ್ಕಿಸದೇ ಹಳ್ಳದಾಟಲು ಹೋಗಿದ್ದ ದೋಟಿಕೊಳ ಗ್ರಾಮದ ಮಾರುತಿ ಕೊಚ್ಚಿಹೋಗಿದ್ದ. ಭಾರಿ ಮಳೆಯಿಂದ ದೋಟಿಕೊಳ ಹಳ್ಳ ತುಂಬಿ ಹರಿಯುತ್ತಿದೆ.
ಇದನ್ನೂ ಓದಿ: ಬಣ್ಣಬಣ್ಣದ ದೀಪಗಳಿಂದ ಜಗಮಗಿಸುತ್ತಿರುವ ಆಲಮಟ್ಟಿ ಡ್ಯಾಂ ಟೂರ್ ಮಾಡೋಣಾ ಬನ್ನೀ
ನಗರದಲ್ಲಿ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ಥವಾಗಿದ್ದರೆ, ಜಿಲ್ಲೆಯ ಅನೇಕ ಕಡೆ ಕೂಡ ಕಳೆದ ರಾತ್ರಿಯಿಂದ ಬಾರಿ ಮಳೆ ಸುರಿಯುತ್ತಿದೆ. ಜಿಲ್ಲೆಯ ಚಿಂಚೋಳಿ ತಾಲೂಕಿನ ಬೆಡಗಪಲ್ಲಿ ಗ್ರಾಮದಲ್ಲಿ ಕಳೆದ ರಾತ್ರಿ ಸುರಿದ ಬಾರಿ ಹತ್ತಾರು ಆವಾಂತರಗಳನ್ನೇ ಸೃಷ್ಟಿಸಿದೆ. ಮಳೆಯ ನೀರು ಗ್ರಾಮದ ಅನೇಕ ಮನೆಗಳಿಗೆ ನುಗ್ಗಿದ್ದರಿಂದ ಗ್ರಾಮದ ಜನರು ರಾತ್ರಿಯೆಲ್ಲಾ ಮಲಗಲಿಕ್ಕಾಗದೇ ಜಾಗರಣೆ ಮಾಡಿದ್ದರು.
ಮನೆಯಲ್ಲಿದ್ದ ದವಸ, ಧಾನ್ಯಗಳು ಕೂಡ ನೀರು ಪಾಲಾಗಿದ್ದರಿಂದ ಜನರು ಕಂಗಾಲಾಗಿದ್ದರು. ಕಲಬುರಗಿ ನಗರ ಸೇರಿ ಹಲವಡೆ ಸುರಿದ ಭಾರಿ ಮಳೆಯಿಂದ ಅನೇಕ ಕಡೆ ಮರಗಳು, ಮರದ ಕೊಂಬೆಗಳು ನೆಲಕ್ಕುರಳಿವೆ. ಆಗಸ್ಟ್ ತಿಂಗಳಲ್ಲಿ ವರುಣ ಬಾರದೇ ಇದ್ದಾಗ ಕಂಗಾಲಾಗಿದ್ದ ಜನರು, ಸೆಪ್ಟಂಬರ್ ತಿಂಗಳಲ್ಲಿ ವರುಣ ಅಬ್ಬರಿಸಿ ಬೊಬ್ಬೆರೆಯಲು ಆರಂಭಿಸಿದ್ದರಿಂದ ಒಂದಡೆ ಸಂತಸ ಪಟ್ಟರೆ, ಮತ್ತೊಂದಡೆ ಮಳೆಯಿಂದ ತೊಂದರೆಗಳಿಗೆ ಕೂಡ ಸಿಲುಕುವಂತಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.