ಕಲಬುರಗಿ, ಜನವರಿ 24: ಸಂವಿಧಾನ ಶಿಲ್ಪಿ ಬಿ.ಆರ್ ಅಂಬೇಡ್ಕರ್ ಅವರ ಪ್ರತಿಮೆಗೆ (Ambedkar statue) ಅಪಮಾನ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ಥಳಿ ಬಳಿ ಸಿಕ್ಕ ಚೀಟಿಯೊಂದು ತೀವ್ರ ಕುತೂಹಲ ಮೂಡಿಸಿದೆ. ಮಂಗಳವಾರ (ಜ.23) ರಂದು ಕಲಬುರಗಿ (Kalaburagi) ಹೊರವಲಯದ ಕೋಟನೂರ (ಡಿ) ಗ್ರಾಮದಲ್ಲಿನ ಅಂಬೇಡ್ಕರ್ ಪ್ರತಿಮೆಗೆ ಅಪಮಾನ ಮಾಡಲಾಗಿತ್ತು. ಕಿಡಿಗೇಡಿಗಳು ಪುತ್ಥಳಿಗೆ ಚಪ್ಪಲಿ ಹಾರ ಹಾಕಿ ಅಂಬೇಡ್ಕರ್ ಪ್ರತಿಮೆಗೆ ಅವಮಾನ ಮಾಡಿದ್ದರು. ಇದೀಗ ಈ ಸ್ಥಳದಲ್ಲಿ ಸ್ಥಳಿಯರಿಗೆ ಚೀಟಿಯೊಂದು ಸಿಕ್ಕಿದೆ.
ಚೀಟಿಯಲ್ಲಿ ಸ್ಥಳಿಯ 10 ಜನರ ಹೆಸರು ಬರೆಯಲಾಗಿದ್ದು, “ಇವರು ನನಗೆ ಹಣ ಕೊಡುವುದಾಗಿ ಹೇಳಿದ್ದರು. ಹಣದ ಆಸೆಗಾಗಿ ಈ ಕೃತ್ಯ ಎಸಗಿದ್ದೇವೆ” ಅಂತ ಬರೆಯಲಾಗಿದೆ. ಆದರೆ ಚೀಟಿ ಬರೆದಾತ ತನ್ನ ಹೆಸರನ್ನು ಗುಟ್ಟು ಬಿಟ್ಟುಕೊಟ್ಟಿಲ್ಲ. ಈ ಮೂಲಕ ತಮ್ಮ ಹಗೆತನಕ್ಕಾಗಿ ಅಂಬೇಡ್ಕರ ಅವರಿಗೆ ಅಪಮಾನ ಮಾಡುವಂತಹ ನೀಚ ಕೃತ್ಯಕ್ಕೆ ಕಿಡಿಗೇಡಿಗಳು ಇಳಿದರಾ? ಎಂಬ ಪ್ರಶ್ನೆ ಉದ್ಭವವಾಗಿದೆ.
ಪ್ರಕರಣ ದಾಖಲಿಸಿಕೊಂಡ ಗುಲ್ಬರ್ಗಾ ವಿವಿ ಪೊಲೀಸರು ಚೀಟಿ ರಹಸ್ಯ ಬೆನ್ನು ಹತ್ತಿದ್ದಾರೆ. ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ರೀತಿ ಚೀಟಿ ಬರೆಯಲು ಕಾರಣವೇನು? ಅಂಬೇಡ್ಕರ್ ಅವರ ಪ್ರತಿಮೆ ಅಪಮಾನಕ್ಕೂ ಮತ್ತು ಈ ಚೀಟಿಗೂ ಎನು ಸಂಬಂಧ ಎಂಬುವುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಡಾ. ಅಂಬೇಡ್ಕರ್ಗೆ ಅಪರೂಪದ ಗೌರವ, ಸಿಎಂ ವೈಎಸ್ ಜಗನ್ರಿಂದ 125 ಅಡಿ ಪ್ರತಿಮೆ ಅನಾವರಣ
ಅಂಬೇಡ್ಕರ್ ಪ್ರತಿಮೆಗೆ ಅಪಮಾನ ಮಾಡಿದ್ದ ನಾಲ್ವರನ್ನು ಕಲಬುರಗಿ ವಿವಿ ಠಾಣೆ ಪೊಲೀಸರು ಬಂಧಿಸಲಾಗಿದೆ ಎಂದು ಕಲಬುರಗಿ ಪೊಲೀಸ್ ಆಯುಕ್ತ ಆರ್. ಚೇತನ್ ಮಾಹಿತಿ ನೀಡಿದ್ದಾರೆ.
ಅಂಬೇಡ್ಕರ್ ಪ್ರತಿಮೆಗೆ ಅಪಮಾನ ಮಾಡಿದ ವಿಚಾರ ತಿಳಿಯುತ್ತಿದ್ದಂತೆ ಮಂಗಳವಾರ ದಲಿತ ಮುಖಂಡರು ಸಿಡಿದೆದ್ದಿದ್ದು, ಟೈಯರ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ಬಿಜೆಪಿ ವಿಧಾನಪರಿಷತ್ ಸದಸ್ಯ ಮಾಲೀಕತ್ವದ ಪೆಟ್ರೋಲ್ ಬಂಕ್ನ ಗಾಜನ್ನು ಪುಡಿ ಪುಡಿ ಮಾಡಿದ್ದರು. ಇದರಿಂದ ಕಲಬುರಗಿ ನಗರದಲ್ಲಿ ಉದ್ರಿಕ್ತ ಪರಿಸ್ಥಿತಿ ನಿರ್ಮಾಣವಾಗಿತ್ತು.
ಜಗತ್ ಸರ್ಕಲ್ ಬಳಿ ಗೂಡ್ಸ್ ವಾಹನಕ್ಕೆ ಕಲ್ಲು ತೂರಲಾಗಿತ್ತು. ಬಲವಂತವಾಗಿ ಅಂಗಡಿ ಮುಗ್ಗಟ್ಟುಗಳನ್ನು ಪ್ರತಿಭಟನಾಕಾರರು ಬಂದ್ ಮಾಡಿಸಿದ್ದರು. ಸ್ಟೇಷನ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.
ಪ್ರತಿಮೆಗೆ ಅಪಮಾನ ಮಾಡಿದ ಕಿಡಿಗೇಡಿಗಳನ್ನು ಬಂಧಿಸಿಬೇಕು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಆಗ್ರಹಿಸಿದ್ದರು. ಪ್ರತಿಮೆಗೆ ಅಪಮಾನ ಆಗದಂತೆ ಸರ್ಕಾರ ಮುನ್ನೆಚ್ಚರಿಕೆ ವಹಿಸಲಿ. ಶ್ರೀರಾಮನ ಭಾವಚಿತ್ರ ಹರಿದು ಹಾಕುವ ಪ್ರಕರಣ ಹೆಚ್ಚಾಗುತ್ತಿದೆ. ಕಾಂಗ್ರೆಸ್ನವರ ಮನಸ್ಥಿತಿ ಎತ್ತ ಸಾಗುತ್ತಿದೆ ಅಂತ ಗೊತ್ತಾಗುತ್ತೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:29 am, Wed, 24 January 24