ಆನಂದ್ ಮಾಮನಿ ನಿಧನ: ಇಂದು ಕಲಬುರಗಿ ಜಿಲ್ಲೆಯಲ್ಲಿ ನಡೆಯಬೇಕಿದ್ದ ಜನಸಂಕಲ್ಪ ಸಮಾವೇಶ ರದ್ದು
ವಿಧಾನಸಭೆ ಡೆಪ್ಯುಟಿ ಸ್ಪೀಕರ್ ಆನಂದ್ ಮಾಮನಿ ನಿಧನ ಹಿನ್ನೆಲೆ ಇಂದು (ಅ. 23) ಕಲಬುರಗಿ ಜಿಲ್ಲೆಯಲ್ಲಿ ನಡೆಯಬೇಕಿದ್ದ ಬಿಜೆಪಿ ‘ಜನಸಂಕಲ್ಪ’ ಸಮಾವೇಶ ರದ್ದು ಮಾಡಲಾಗಿದೆ.
ಕಲಬುರಗಿ: ವಿಧಾನಸಭೆ ಡೆಪ್ಯುಟಿ ಸ್ಪೀಕರ್ ಆನಂದ್ ಮಾಮನಿ ನಿಧನ ಹಿನ್ನೆಲೆ ಇಂದು (ಅ. 23) ಕಲಬುರಗಿ ಜಿಲ್ಲೆಯಲ್ಲಿ ನಡೆಯಬೇಕಿದ್ದ ಬಿಜೆಪಿ ‘ಜನಸಂಕಲ್ಪ’ ಸಮಾವೇಶ ರದ್ದು ಮಾಡಲಾಗಿದೆ. ಸಿಎಂ ಸಚಿವಾಲಯದ ಅಧಿಕಾರಿಗಳಿಗೆ ಕಲಬುರಗಿ ಪ್ರವಾಸ ರದ್ದುಪಡಿಸಲು ಸಿಎಂ ಬೊಮ್ಮಾಯಿ ಸೂಚಿಸಿದ್ದಾರೆ. ಈ ಕುರಿತಾಗಿ ಟಿವಿ 9ಗೆ ಕಲಬುರಗಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ ಸ್ಪಷ್ಟನೆ ನೀಡಿದ್ದಾರೆ. ಆಳಂದ ಹಾಗೂ ಚಿತ್ತಾಪುರ ಪಟ್ಟಣಗಳಲ್ಲಿ ಇಂದು ಜನಸಂಕಲ್ಪ ಯಾತ್ರೆ ನಡೆಯಬೇಕಿತ್ತು. ಈಗಾಗಲೇ ವೇದಿಕೆ ಸೇರಿದಂತೆ ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿದೆ. ಹೀಗಾಗಿ ನಾಳೆಯಾದರು ಕಾರ್ಯಕ್ರಮ ನಡೆದರೆ ಅನಕೂಲವೆನ್ನಲಾಗುತ್ತಿದೆ. ಹೀಗಾಗಿ ನಾಳೆ ಕಲಬುರಗಿ ಜಿಲ್ಲೆಗೆ ಸಮಯ ನೀಡುವಂತೆ ಬಿಜೆಪಿ ನಾಯಕರು ಮನವಿ ಮಾಡಿದ್ದಾರೆ.
ನಾಳೆಗೆ ಮುಂದೂಡಿದ ಕಿತ್ತೂರು ಉತ್ಸವ:
ಇನ್ನು ಇಂದಿನಿಂದ 3 ದಿನಗಳ ಕಾಲ ಕಿತ್ತೂರು ಉತ್ಸವ ನಡೆಯಬೇಕಿತ್ತು. ಆದರೆ ಆನಂದ್ ಮಾಮನಿ ವಿಧಿವಶ ಹಿನ್ನೆಲೆ ಉತ್ಸವ ನಾಳೆಗೆ (ಅ. 24) ಮುಂದೂಡಲಾಗಿದೆ. ರಾಜ್ಯ ಸರ್ಕಾರದ ನಿರ್ಧಾರಕ್ಕಾಗಿ ಬೆಳಗಾವಿ ಜಿಲ್ಲಾಡಳಿತ ಕಾಯುತ್ತಿದ್ದು, ಸದ್ಯ ಬೆಳಗಾವಿ ಡಿಸಿ ನಿತೇಶ್ ಪಾಟೀಲ್ ಮಾಧ್ಯಮ ಪ್ರಕಟಣೆ ಮೂಲಕ ತಿಳಿಸಿದ್ದಾರೆ. ಇದೇ ಮೊದಲ ಬಾರಿಗೆ ರಾಜ್ಯಮಟ್ಟದ ಕಿತ್ತೂರು ಉತ್ಸವವನ್ನು ಅ.23ರಿಂದ 25ರ ವರೆಗೆ ಆಯೋಜನೆ ಮಾಡಲಾಗಿತ್ತು. ಕಿತ್ತೂರು ಉತ್ಸವದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾಗವಹಿಸಲಿದ್ದರು. ಮೂರು ದಿನಗಳ ಕಿತ್ತೂರು ಉತ್ಸವಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿತ್ತು. ಈ ಕುರಿತಾಗಿ ಗೋವಿಂದ್ ಕಾರಜೋಳ ಹೇಳಿಕೆ ನೀಡಿದ್ದು, ಇಂದು ಕಿತ್ತೂರು ಉತ್ಸವ ನಡೆಸಬೇಕಿತ್ತು. ಆನಂದ ಮಾಮನಿ ಅವರ ನಿಧನ ಹಿನ್ನೆಲೆಯಲ್ಲಿ ಕಿತ್ತೂರು ಉತ್ಸವ ಮುಂದೂಡಿಕೆಯಾಗಿದ್ದು, ನಾಳೆಗೆ ನಡೆಯಲಿದೆ. ಇಂದಿನ ಎಲ್ಲ ಸರ್ಕಾರಿ ಕಾರ್ಯಕ್ರಮಗಳನ್ನೂ ಮುಂದೂಡಿಕೆ ಮಾಡಲಾಗಿದೆ. ಜನ ಸಂಕಲ್ಪ ಯಾತ್ರೆಯನ್ನೂ ಮುಂದೂಡಲಾಗಿದೆ ಎಂದು ಹೇಳಿದರು.
ಶಾಸಕ ಜಿ.ಟಿ ದೇವೇಗೌಡ ಸಂತಾಪ
ಮೈಸೂರು: ಶಾಸಕ ಆನಂದ ಮಾಮಾನಿ ಮೃತ ಹಿನ್ನೆಲೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಶಾಸಕ ಜಿಟಿ ದೇವೇಗೌಡ ಸಂತಾಪ ಸೂಚಿಸಿದ್ದಾರೆ. ಮಾಮನಿ ನನ್ನ ಆತ್ಮೀಯ ಸ್ನೇಹಿತ. ಪಕ್ಷಾತೀತವಾಗಿ ಆತ ನನಗೆ ಹತ್ತಿರನಾಗಿದ್ದ. ಅಂತಃಕರಣ ಹೊಂದಿದ್ದ ರಾಜಕಾರಣಿ. ಮಾನವೀಯ ಮೌಲ್ಯಗಳನ್ನು ಹೊಂದಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ. ವಸತಿ ಸಮಿತಿಯಲ್ಲಿ ನಾವಿಬ್ಬರು ಒಟ್ಟಿಗೆ ಕೆಲಸ ಮಾಡಿದ್ದೆವು. ಆತನ ಕ್ಷೇತ್ರಕ್ಕೆ ನಾನು ಹೋಗಿ ಬಂದಿದ್ದೆ. ಒಳ್ಳೆಯ ವ್ಯಕ್ತಿತ್ವದೊಂದಿಗೆ ಧರ್ಮರಾಯನಂತಿದ್ದ. ಮಾಮನಿ ಉತ್ತಮ ಭವಿಷ್ಯವನ್ನು ಹೊಂದಿದ್ದ ಜನನಾಯಕ. ಮಾಮಾನಿ ಅಕಾಲಿಕ ಮರಣ ರಾಜ್ಯ ರಾಜಕೀಯಕ್ಕೆ ಅಪಾರ ನಷ್ಟವನ್ನುಂಟು ಮಾಡಿದೆ. ಅವರ ಕುಟುಂಬಕ್ಕೆ ಬಂಧುಗಳಿಗೆ ಸ್ನೇಹಿತರಿಗೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:55 am, Sun, 23 October 22