ಕಲಬುರಗಿ, ಸೆ.14: ಮೂಲತಃ ಯಾದಗಿರಿ (Yadagiri) ಜಿಲ್ಲೆಯ ಶಹಪೂರ್ ತಾಲೂಕಿನ ಹರಳಹಳ್ಳಿ ಗ್ರಾಮದ ನಿವಾಸಿಯಾಗಿದ್ದ ಹತ್ತೊಂಬತ್ತು ವರ್ಷದ ಭಾಗ್ಯಶ್ರೀ ಎನ್ನುವ ಯುವತಿ ನಿನ್ನೆ(ಸೆ.13) ವಿದ್ಯುತ್ ಶಾಕ್ (Electric Shock) ನಿಂದ ಮೃತಪಟ್ಟಿದ್ದಾಳಂತೆ. ಕಲಬುರಗಿ (Kalaburagi) ನಗರದ ಕೋಟನೂರು ಬಳಿ ಬಾಡಿಗೆ ಮನೆಯಲ್ಲಿ ಪತಿಯ ಜೊತೆ ವಾಸವಾಗಿದ್ದ ಭಾಗ್ಯಶ್ರೀ ಬಾರದ ಲೋಕಕ್ಕೆ ಹೋಗಿದ್ದಾಳೆ. ನಿನ್ನೆ ಮಧ್ಯಾಹ್ನ ಭಾಗ್ಯಶ್ರೀ ಕುಟುಂಬದವರಿಗೆ ಪತಿ ಮನೆಯವರು ಪೋನ್ ಮಾಡಿ, ಭಾಗ್ಯಶ್ರೀ ಮೃತಪಟ್ಟಿರೋದಾಗಿ ಹೇಳಿದ್ದಾರೆ. ಹೀಗಾಗಿ ಭಾಗ್ಯಶ್ರೀ ಹೆತ್ತವರು ಮತ್ತು ಕುಟುಂಬದವರು ಕಲಬುರಗಿ ನಗರಕ್ಕೆ ಧಾವಿಸಿ ಬಂದಿದ್ದರು. ಆದ್ರೆ, ಮೈ ಮೇಲೆ ಕೆಲವಡೆ ಗಾಯದ ಗುರುತುಗಳು ಇರೋದರಿಂದ, ಭಾಗ್ಯಶ್ರೀ ವಿದ್ಯುತ್ ಶಾಕ್ನಿಂದ ಮೃತಪಟ್ಟಿಲ್ಲ, ಬದಲಾಗಿ ಆಕೆಯ ಪತಿ ಮತ್ತು ಕುಟುಂಬದವರೇ ಕೊಲೆ ಮಾಡಿ, ಕರೆಂಟ್ ಶಾಕ್ ಹೊಡಿಸಿ ಸಾಯಿಸಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.
ಇನ್ನು ಯಾದಗಿರಿ ಜಿಲ್ಲೆಯ ಹರಳಹಳ್ಳಿ ಗ್ರಾಮದ ಭಾಗ್ಯಶ್ರೀಯದು ಪ್ರೇಮ ವಿವಾಹ. ಅದೇ ಗ್ರಾಮದ ಶಂಕರಗೌಡ ಮತ್ತು ಭಾಗ್ಯಶ್ರೀ ನಡುವೆ ಪ್ರೀತಿ ಮೂಡಿದೆ. ಆದ್ರೆ, ಜಾತಿ ಬೇರೆ ಬೇರೆಯಾಗಿದ್ದರಿಂದ ಮನೆಯವರು ವಿರೋಧ ವ್ಯಕ್ತಪಡಿಸಿದ್ದರಂತೆ. ಇದರಿಂದ ಇಬ್ಬರು ಮನೆ ಬಿಟ್ಟು ಹೋಗಿ, ಭಾಗ್ಯಶ್ರೀಗೆ ಹದಿನೆಂಟು ವರ್ಷವಾದ ಮೇಲೆ ಬಂದಿದ್ದರಂತೆ. ಈ ಬಗ್ಗೆ ಯಾದಗಿರಿ ಜಿಲ್ಲೆಯ ಭೀಮರಾಯನ ಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆಯಂತೆ. ಆಗ ಕೂಡ ಭಾಗ್ಯಶ್ರೀ ಹೆತ್ತವರು ತಮ್ಮ ಜೊತೆ ಬಂದು ಬಿಡು ಎಂದು ಮಗಳಿಗೆ ಹೇಳಿದ್ದು, ಆದರೆ ತಾನು ಬದುಕಿದ್ರೆ ಶಂಕರಗೌಡನ ಜೊತೆಯೇ ಎಂದು ಭಾಗ್ಯಶ್ರೀ ಹೇಳಿದ್ದಳಂತೆ.
ಇದನ್ನೂ ಓದಿ:ಚಾಮರಾಜನಗರ: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳು; ಯುವಕ ಸಾವು, ಯುವತಿ ಸ್ಥಿತಿ ಚಿಂತಾಜನಕ
ಇನ್ನು ಭಾಗ್ಯಶ್ರೀ ಈಗಾಗಲೇ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಹೀಗಾಗಿ ಮಗಳು ಎಲ್ಲಾದ್ರು ಇರಲಿ ಚೆನ್ನಾಗಿರಲಿ ಎಂದು ಸುಮ್ಮನಾಗಿದ್ದರಂತೆ. ಇದೀಗ ಮಗಳು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಹೆತ್ತವರನ್ನು ಕಂಗಾಲು ಮಾಡಿದೆ. ಸದ್ಯ ಭಾಗ್ಯಶ್ರೀ ಸಾವಿಗೆ ಸಂಬಂಧಿಸಿದಂತೆ ಕಲಬುರಗಿ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಅಸಹಹಜ ಸಾವು ಪ್ರಕರಣ ದಾಖಲಾಗಿದೆ. ಪೊಲೀಸರು ಭಾಗ್ಯಶ್ರೀ ಪತಿ ಶಂಕರಗೌಡನನ್ನು ವಶಕ್ಕೆ ಪಡೆದು ವಿಚಾರಣೆ ಕೂಡ ನಡೆಸುತ್ತಿದ್ದಾರೆ. ವಿಚಾರಣೆ ನಂತರವೇ ಭಾಗ್ಯಶ್ರೀ ಕರೆಂಟ್ ಶಾಕ್ನಿಂದ ಮೃತಪಟ್ಟಿರೋದಾ ಅಥವಾ ಕೊಲೆಯಾ ಅನ್ನೋದು ಗೊತ್ತಾಗಲಿದೆ. ಆದ್ರೆ, ಬಾಳಿ ಬದುಕಬೇಕಿದ್ದ ಯುವತಿ, ಚಿಕ್ಕ ವಯಸ್ಸಿನಲ್ಲಿಯೇ ಬಾರದ ಲೋಕಕ್ಕೆ ಹೋಗಿದ್ದು, ಮಾತ್ರ ದುರಂತವೇ ಸರಿ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:47 pm, Thu, 14 September 23