ಬಾಗಲಕೋಟೆ: ಅಪಘಾತದಲ್ಲಿ ವೃದ್ಧೆ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್, ಮೊಮ್ಮಗನ ಕರಾಳ ಮುಖ ಬಯಲು
ಬಾಗಲಕೋಟೆಯ ಚಿಕ್ಕೂರು ಕ್ರಾಸ್ ಬಳಿ ಆಗಷ್ಟ್ 20ರ ರಾತ್ರಿ 8 ಗಂಟೆ ಸುಮಾರಿಗೆ ಮೃತ ವೃದ್ಧೆ ಹಾಗೂ ಆಕೆಯ ಮಗ ಬೈಕ್ನಲ್ಲಿ ಹೋಗುತ್ತಿದ್ದರು. ಈ ವೇಳೆ ಆರೋಪಿ ಕಾರ್ನಲ್ಲಿ ಬಂದು ಅಪಘಾತ ಮಾಡಿದ್ದ. ಕೊಲೆಯನ್ನು ಅಪಘಾತವೆಂದು ಬಿಂಬಿಸಲಾಗಿತ್ತು. ಸದ್ಯ ಸತ್ಯ ಬಯಲಾಗಿದೆ.
ಬಾಗಲಕೋಟೆ, ಸೆ.13: ಬೈಕ್ಗೆ ಕಾರು ಡಿಕ್ಕಿ ಹೊಡೆದು ಬೈಕ್ ಹಿಂಬದಿ ಕೂತಿದ್ದ ವೃದ್ದೆ ಮೃತಪಟ್ಟ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಮೃತ ವೃದ್ದೆಯ ಮೊಮ್ಮಗನೇ(ಮಗನ ಮಗ) ಕಾರು ಡಿಕ್ಕಿ ಹೊಡೆಸಿ ವೃದ್ಧೆಯನ್ನು ಕೊಲೆ ಮಾಡಿದ್ದು ಎಂಬ ಭಯಾನಕ ಸತ್ಯ ಬಯಲಾಗಿದೆ. ಅಪಘಾತ ಪ್ರಕರಣ ಕೊಲೆ ಪ್ರಕರಣವಾಗಿ ತಿರುವು ಪಡೆದುಕೊಂಡಿದೆ. ಸದ್ಯ ಈಗ ಘಟನೆ ಸಂಬಂಧ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ತಾಯವ್ವ ಅರಕೇರಿ(68)ಕೊಲೆಯಾದ ವೃದ್ದೆ, ದುಂಡಪ್ಪ ಅರಕೇರಿ(25) ಕೊಲೆ ಮಾಡಿದ ಮೊಮ್ಮಗ. ವೃದ್ದೆ ಹಾಗೂ ಮೊಮ್ಮಗ ಬಾಗಲಕೋಟೆ ತಾಲ್ಲೂಕಿನ ಖಜ್ಜಿಡೋಣಿ ಗ್ರಾಮದವರು.
ಚಿಕ್ಕೂರು ಕ್ರಾಸ್ ಬಳಿ ಆಗಷ್ಟ್ 20ರ ರಾತ್ರಿ 8 ಗಂಟೆ ಸುಮಾರಿಗೆ ಮೃತ ವೃದ್ಧೆ ಹಾಗೂ ಆಕೆಯ ಮಗ ಬೈಕ್ನಲ್ಲಿ ಹೋಗುತ್ತಿದ್ದರು. ಈ ವೇಳೆ ಆರೋಪಿ ಕಾರ್ನಲ್ಲಿ ಬಂದು ಅಪಘಾತ ಮಾಡಿದ್ದ. ಕೊಲೆಯನ್ನು ಅಪಘಾತವೆಂದು ಬಿಂಬಿಸಲಾಗಿತ್ತು. ಸದ್ಯ ಸತ್ಯ ಬಯಲಾಗಿದೆ.
ಮೊಮ್ಮಗನಿಂದ ಅಜ್ಜಿ ಕೊಲೆಗೆ ಕಾರಣವೇನು?
ಈ ಕುಟುಂಬದ ಬೋರ್ವೆಲ್ ಮೋಟಾರ್ ವಿವಾದ ಕೋರ್ಟ್ನಲ್ಲಿತ್ತು. ಕೋರ್ಟ್ನಲ್ಲಿ ತಾಯವ್ವ ಪರ ತೀರ್ಪು ಬಂದಿತ್ತು. ಆದರೆ ಮೊಮ್ಮಗ ದುಂಡಪ್ಪ, ಅಜ್ಜಿ ತಾಯವ್ವಗೆ ಬೋರ್ವೆಲ್ ಮೋಟಾರು ವೈರ್ ಕೊಟ್ಟಿರಲಿಲ್ಲ. ಮೋಟಾರು ವೈರ್ ಕೊಡದ ಹಿನ್ನೆಲೆ ಅಜ್ಜಿ ತನ್ನ ಮೊಮ್ಮಗನ ವಿರುದ್ದವೇ ಲೋಕಾಪುರ ಠಾಣೆಗೆ ದೂರು ನೀಡಿದರು. ಈ ಹಿನ್ನೆಲೆ ಪೊಲೀಸರು ದುಂಡಪ್ಪನನ್ನು ಕರೆದು ಮೋಟಾರು ವೈರ್ ಕೊಡಲು ಹೇಳಿದ್ದರು. ಆಗ ವೈರ್ ಕೊಡುವುದಾಗಿ ಒಪ್ಪಿಕೊಂಡಿದ್ದ ದುಂಡಪ್ಪ ನಂತರ ತಾಯವ್ವ ಹಾಗೂ ಆಕೆಯ ಮಗ ಬೈಕ್ನಲ್ಲಿ ಊರಿಗೆ ಬರುವಾಗ ಕಾರಿನಲ್ಲಿ ಫಾಲೋ ಮಾಡಿದ್ದಾನೆ. ತಾಯವ್ವ ಹಾಗೂ ಮಗ ಶ್ರೀಧರ ಬೈಕ್ ಮೇಲೆ ಹೋಗುವಾಗ ಕಾರಿನಿಂದ ಡಿಕ್ಕಿ ಹೊಡೆದಿದ್ದಾನೆ. ಅಪಘಾತದಲ್ಲಿ ಗಾಯಗೊಂಡಿದ್ದ ವೃದ್ದೆ ತಾಯವ್ವಳನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗಸ್ಟ್ 28ರಂದು ಚಿಕಿತ್ಸೆ ಫಲಿಸದೆ ಅಜ್ಜಿ ತಾಯವ್ವ ಮೃತಪಟ್ಟಿದ್ಧಾರೆ. ಅಪಘಾತದಲ್ಲಿ ಸಂಶಯ ಎಂದು ಸೆಪ್ಟೆಂಬರ್ 5ರಂದು ತಾಯವ್ವನ ಸಂಬಂಧಿಕ ಮಂಜುನಾಥ್ ಉದಗಟ್ಟಿ ಅವರು ದುಂಡಪ್ಪನ ವಿರುದ್ಧ ಲೋಕಾಪುರ ಠಾಣೆಗೆ ದೂರು ನೀಡಿದ್ದರು. ದುಂಡಪ್ಪನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಸತ್ಯ ಬಯಲಾಗಿದೆ. ಸದ್ಯ ದುಂಡಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.
ಬಾಗಲಕೋಟೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ