ಹೆಂಡತಿಯ ಹತ್ಯೆ ಮಾಡಿ ಅತ್ತೆ-ಮಾವನಿಗೆ ಮಚ್ಚಿನೇಟು ಕೊಟ್ಟ ಗಂಡ: ಆರೋಪಿಗೆ ಪೊಲೀಸರಿಂದ ಗುಂಡೇಟಿನ ರುಚಿ, ಆಸ್ಪತ್ರೆ ಪಾಲು – ಸ್ಥಳಕ್ಕೆ ಐಜಿಪಿ ರವಿಕಾಂತೇಗೌಡ ಭೇಟಿ

ಗಂಡ ತನ್ನ ಹೆಂಡತಿಯನ್ನು ಕೊಂದು ಅವರ ಕುಟುಂಬಸ್ಥರ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಹಲ್ಲೆಗೊಳಗಾದ ಮಾವನ ಸ್ಥಿತಿ ಗಂಭೀರವಾಗಿದ್ರೆ, ಅತ್ತೆ, ನಾದನಿಯೂ ಮಚ್ಚಿನಿಂದ ಹಲ್ಲೆಗೊಳಾಗಿದ್ದಾರೆ. ಈ ಮಧ್ಯೆ, ಆರೋಪಿಗೆ ಪೊಲೀಸರು ಗುಂಡೇಟಿನ ರುಚಿ ತೋರಿಸಿದ್ದು, ಆರೋಪಿ ಆಸ್ಪತ್ರೆ ಪಾಲಾಗಿದ್ದಾನೆ. ಘಟನಾ ಸ್ಥಳಕ್ಕೆ ಮಂಗಳವಾರ ತಡರಾತ್ರಿ ಕೇಂದ್ರ ಐಜಿಪಿ ರವಿಕಾಂತೇಗೌಡ ಭೇಟಿ ನೀಡಿ, ಮಾಹಿತಿ ಪಡೆದಿದ್ದಾರೆ.

ಹೆಂಡತಿಯ ಹತ್ಯೆ ಮಾಡಿ ಅತ್ತೆ-ಮಾವನಿಗೆ ಮಚ್ಚಿನೇಟು ಕೊಟ್ಟ ಗಂಡ: ಆರೋಪಿಗೆ ಪೊಲೀಸರಿಂದ ಗುಂಡೇಟಿನ ರುಚಿ, ಆಸ್ಪತ್ರೆ ಪಾಲು - ಸ್ಥಳಕ್ಕೆ ಐಜಿಪಿ ರವಿಕಾಂತೇಗೌಡ ಭೇಟಿ
ಹೆಂಡತಿಯ ಬರ್ಬರ ಹತ್ಯೆ ಮಾಡಿ ಅತ್ತೆ-ಮಾವ, ನಾದನಿಗೆ ಮಚ್ಚಿನೇಟು ಕೊಟ್ಟ ಗಂಡ
Follow us
| Updated By: ಸಾಧು ಶ್ರೀನಾಥ್​

Updated on: Sep 13, 2023 | 11:35 AM

ಕೌಟುಂಬಿಕ ಕಲಹ ಹಿನ್ನೆಲೆ ಗಂಡ ತನ್ನ ಹೆಂಡತಿಯನ್ನು ಬರ್ಬರವಾಗಿ ಕೊಂದು ಅವರ ಕುಟುಂಬಸ್ಥರ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಹಲ್ಲೆಗೊಳಗಾದ ಮಾವನ ಸ್ಥಿತಿ ಗಂಭೀರವಾಗಿದ್ರೆ, ಅತ್ತೆ ಮತ್ತು ನಾದನಿಯೂ ಮಚ್ಚಿನಿಂದ ಹಲ್ಲೆಗೊಳಾಗಿದ್ದಾರೆ. ಈ ಮಧ್ಯೆ, ಕೊಲೆ ಮಾಡಿದ ಆರೋಪಿಗೆ ಪೊಲೀಸರು ಗುಂಡೇಟಿನ ರುಚಿ ತೋರಿಸಿದ್ದು, ಆರೋಪಿ ಆಸ್ಪತ್ರೆ ಪಾಲಾಗಿದ್ದಾನೆ. ಊರಿನ ಮಧ್ಯೆ ನಿಂತು ಗಾಳಿಯಲ್ಲಿ ಗುಂಡು ಹಾರಿಸುತ್ತಿರುವ ಪೊಲೀಸರು, ಊರ ತುಂಬೆಲ್ಲಾ ಆಕ್ರೋಶಗೊಂಡು ಜಮಾಯಿಸಿರುವ ಜನರು, ಮನೆಯೊಳಗೆ ಬಂಧಿಯಾಗಿ ಮಚ್ಚು ಹಿಡಿದು ಕುಳಿತಿರುವ ಕೊಲೆ ಆರೋಪಿ, ಮತ್ತೊಂದೆಡೆ ಗಂಡನಿಂದಲೇ ಬರ್ಬರವಾಗಿ ಹತ್ಯೆಯಾಗಿ ಬಿದ್ದಿರುವ ಮಹಿಳೆ ಇಂಥಾ ದೃಶ್ಯಗಳು ನಮಗೆ ಕಂಡುಬಂದಿದ್ದು ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕು ನಂಬಿಹಳ್ಳಿ ಗ್ರಾಮದಲ್ಲಿ.

ಹೌದು ನಂಬಿಹಳ್ಳಿ ಗ್ರಾಮದಲ್ಲಿ ನಾಗೇಶ್​ ಎಂಬಾತ ತನ್ನ ಪತ್ನಿ ರಾಧಾ ಎಂಬಾಕೆಯನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಅಷ್ಟೇ ಅಲ್ಲ ಹತ್ಯೆ ಮಾಡುವ ವೇಳೆ ತಡೆಯಲು ಬಂದ ತನ್ನ ಮಾವ, ಅತ್ತೆ, ನಾದುನಿ, ಮೈದುನ ಎಲ್ಲರ ಮೇಲೂ ಮನಸೋ ಇಚ್ಚೆ ಮಚ್ಚು ಬೀಸಿದ್ದಾನೆ, ಇದರಿಂದ ಮಾವ ಮುನಿಯಪ್ಪ ಗಂಭೀರವಾಗಿ ಗಾಯಗೊಂಡು ಸಾವು ಬದುಕಿ ನಡುವೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಬಾಮೈದುನ, ನಾದಿನಿಯರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಎರಡನೇ ಮದುವೆಯಾಗಿ ಎರಡನೇ ಹೆಂಡತಿ ಜೊತೆಗೆ ಸಂಸಾರ ನಡೆಸುತ್ತಿದ್ದ ನಾಗೇಶನೊಂದಿಗೆ ಮೊದಲ ಪತ್ನಿ ರಾಧ ವಿಚ್ಛೇದನ ನೀಡುವಂತೆ ಕೇಳಿದ್ದಾಳೆ. ಅಲ್ಲದೆ ತನ್ನ ತವರು ಮನೆ ನಂಬಿಹಳ್ಳಿ ಗ್ರಾಮದಲ್ಲೇ ಒಂದು ಚಿಲ್ಲರೆ ಅಂಗಡಿ ಹಾಕಿಕೊಂಡು, ಟೈಲರಿಂಗ್​ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಳು, ಹೀಗಿದ್ದರೂ ಇದೇ ವಿಚಾರವಾಗಿ ಕಳೆದ ಏಳು ವರ್ಷಗಳಿಂದ ಇಬ್ಬರ ನಡುವೆ ಗಲಾಟೆ ನಡೆಯುತ್ತಲೇ ಇತ್ತು.

ಆದರೆ ನಿನ್ನೆ ಮಂಗಳವಾರ ಸಂಜೆ ವೇಳೆಗೆ ಏಕಾಏಕಿ ಮಚ್ಚು ಹಿಡಿದು ಮನೆಗೆ ಬಂದ ನಾಗೇಶ ಅಂಗಡಿಯಲ್ಲಿದ್ದ ತನ್ನ ಹೆಂಡತಿಯ ಮೇಲೆ ಮನಸೋಇಚ್ಚೆ ಹಲ್ಲೆ ಮಾಡಿ ಸ್ಥಳದಲ್ಲೇ ಕೊಂದುಹಾಕಿದ್ದಾನೆ. ತಡೆಯಲು ಬಂದ ಮಾವ ಮುನಿಯಪ್ಪ, ನಾದನಿ ಅನುಷಾ, ಹಾಗೂ ಬಾಮೈದ ವರುಣ್​ ಎಂಬುವವರ ಮೇಲೂ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಇನ್ನು ಮಾವ ಮುನಿಯಪ್ಪ ಗಂಭೀರವಾಗಿ ಗಾಯಗೊಂಡಿದ್ದು ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ. ಬಾಮೈದುನ ಮತ್ತು ನಾದನಿ ಕೂಡಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನು ಆರೋಪಿ ಕೊಲೆ ಮಾಡುತ್ತಿದ್ದಂತೆ ಗ್ರಾಮಸ್ಥರು ಆರೋಪಿಯನ್ನು ಸುತ್ತುವರೆದಿದ್ದಾರೆ. ಇದೇ ವೇಳೆ ಆರೋಪಿ ಅದೇ ಗ್ರಾಮದ ಮನೆಯೊಂದರಲ್ಲಿ ಮಚ್ಚು ಸಮೇತ ಮನೆಯೊಳಗೆ ಸೇರಿಕೊಂಡಿದ್ದಾರೆ, ಆಗ ತಕ್ಷಣ ಗ್ರಾಮಸ್ಥರು ಆರೋಪಿಯನ್ನು ಸುಟ್ಟುಹಾಕಲು ಮನೆಯೊಳಗೆ ಪೆಟ್ರೋಲ್​ ಹಚ್ಚಿ ಸಾಯಿಸಲು ಸಿದ್ದವಾಗಿದ್ದಾರೆ. ಅಷ್ಟೊತ್ತಿಗೆ ಸ್ಥಳಕ್ಕೆ ಬಂದ ಪೊಲೀಸರು ಶ್ರೀನಿವಾಸಪುರ ಗ್ರಾಮಸ್ಥರನ್ನು ನಿಯಂತ್ರಣ ಮಾಡಿದ್ದಾರೆ. ಆಕ್ರೋಶಗೊಂಡಿದ್ದ ಗ್ರಾಮಸ್ಥರು ಆರೋಪಿಯನ್ನು ತಮಗೆ ಒಪ್ಪಿಸುವಂತೆ ಒತ್ತಾಯ ಮಾಡಿದ್ದಾರೆ, ಅಷ್ಟೊತ್ತಿಗೆ ಆರೋಪಿ ಕೂಡಾ ಮನೆಯಲ್ಲಿದ್ದ ಗ್ಯಾಸ್​ ಸಿಲಿಂಡರ್ ನ್ನು ಹಿಡಿದು ಗ್ಯಾಸ್​ ಲೀಕ್​ ಮಾಡಿ ಬ್ಲಾಸ್ಟ್​ ಮಾಡಿ ಸಾಯುವ ಬೆದರಿಕೆ ಹಾಕಿದ್ದಾನೆ, ಇದರಿಂದ ಪೊಲೀಸರು ಒಂದೆಡೆ, ಗ್ರಾಮಸ್ಥರು ಇನ್ನೊಂದೆಡೆ ಆರೋಪಿಯನ್ನು ನಿಯಂತ್ರಣ ಮಾಡಲು ಹರಸಾಹಸ ಪಡಬೇಕಾಯ್ತು.

ಆದರೆ ಗ್ರಾಮಸ್ಥರನ್ನು ನಿಯಂತ್ರಣ ಮಾಡುವುದು ಕಷ್ಟವಾಗಿದೆ. ಈ ವೇಳೆ ಸ್ಥಳಕ್ಕೆ ಬಂದ ಎಸ್ಪಿ ನಾರಾಯಣ್​ ಅವರು ಗಾಳಿಯಲ್ಲಿ ಸುಮಾರು ಏಳೆಂಟು ಬಾರಿ ಗುಂಡು ಹಾರಿಸಿ ಜನರನ್ನು ಚದುರಿಸಿದ್ದಾರೆ. ತಕ್ಷಣವೇ ಆರೋಪಿ ಸೇರಿಕೊಂಡಿದ್ದ ಮನೆಯ ಬಾಗಿಲು ಮುರಿದು ಆರೋಪಿಯನ್ನು ಬಂಧಿಸಲು ಯತ್ನಿಸಿದ್ದಾರೆ. ಈ ವೇಳೆ ಆರೋಪಿ ನಾಗೇಶ ಪೊಲೀಸರ ಮೇಲೆಯೇ ಮಚ್ಚು ಬೀಸಿದ್ದಾನೆ. ಆಗ ಪೊಲೀಸರು ಆರೋಪಿಯ ಎರಡು ಕಾಲು ಹಾಗೂ ಕೈಗೆ ಗುಂಡು ಹಾರಿಸಿದ್ದು, ಆರೋಪಿಯನ್ನು ಬಂಧಿಸಿದರು. ಈ ವೇಳೆ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು, ಗ್ರಾಮದಲ್ಲಿ ಇನ್ನೂ ಬಿಗುವಿನ ವಾತಾವರಣವಿದ್ದು ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್​ ಮಾಡಲಾಗಿದೆ.

ಇನ್ನು ಘಟನಾ ಸ್ಥಳಕ್ಕೆ ತಡರಾತ್ರಿ ಕೇಂದ್ರ ವಲಯ ಐಜಿಪಿ ರವಿಕಾಂತೇಗೌಡ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ಘಟನೆಯಲ್ಲಿ ಎಸ್ಪಿ ನಾರಾಯಣ್ ಸೇರಿ ಸುಮಾರು ಹತ್ತು ಜನರಿಗೆ ಗಾಯಗಳಾಗಿವೆ, ಗಾಯಾಳುಗಳು ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರ ಗುಂಡೇಟು‌ ತಿಂದ ಆರೋಪಿ ನಾಗೇಶ್ ಕೂಡಾ ಜಿಲ್ಲಾಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆ ಕುರಿತು ಕೋಲಾರ ಎಸ್ಪಿ ನಾರಾಯಣ್ ಅವರು ಪೊಲೀಸ್ ಮಹಾನಿರ್ದೇಶಕರಿಗೆ ವರದಿ ಸಲ್ಲಿಸಿದ್ದಾರೆ.

ಒಟ್ಟಾರೆ ನನಗೆ ಗಂಡ ಬೇಡ ಎಂದ ಹೆಂಡತಿಯನ್ನು ಕೊಲೆ ಮಾಡಲು ಪತಿರಾಯ ಗ್ರಾಮದಲ್ಲಿ ದೊಡ್ಡ ಹೈಡ್ರಾಮವನ್ನೇ ಸೃಷ್ಟಿಸಿದ್ದ, ತಾನು ತನ್ನ ಹೆಂಡತಿಯನ್ನು ಕೊಂದು ಪರಾರಿಯಾಗಬಹುದು ಎಂಕೊಂಡು ಬಂದವನು ತಾನು ಬೋನಿಗೆ ಬಿದ್ದ ಇಲಿಯಂತೆ ಪೊಲೀಸರಿಂದ ಗುಂಡೇಟು ತಿಂದು ಕೊನೆಗೆ ಆಸ್ಪತ್ರೆ ಸೇರಿದ್ದಾನೆ. ಇತ್ತ ಇಂಥ ಮನೆಹಾಳು ಅಳಿಯನಿಂದ ನೆಮ್ಮದಿಯಾಗಿದ್ದ ಒಂದು ಕುಟುಂಬದಲ್ಲಿ ಅಲ್ಲೋಲ ಕಲ್ಲೋಲವಾಗಿ ಹೋಗಿದೆ..