ಕಲಬುರಗಿ: ಕುಟುಂಬದ ಯುವತಿಯ ಬೆನ್ನುಬಿದ್ದಿದ್ದ ಯುವಕನ ಬರ್ಬರ ಕೊಲೆ ಮಾಡಿಸಿದ ಮಾಲಗತ್ತಿ ಗ್ರಾಮ ಪಂಚಾಯತ್ ಸದಸ್ಯ

| Updated By: ಸಾಧು ಶ್ರೀನಾಥ್​

Updated on: Dec 17, 2022 | 11:10 AM

ಮನೆಗೆ ಆಧಾರವಾಗಿದ್ದ ಮಗನನ್ನು ಕಳೆದುಕೊಂಡು ಕುಟುಂಬ ಕಂಗಾಲಾಗಿತ್ತು. ಜೊತೆಗೆ ಕೊಲೆ ಮಾಡಿದವರು ಯಾರು, ಯಾವ ಕಾರಣಕ್ಕಾಗಿ ಕೊಲೆಯಾಗಿದೆ ಅನ್ನೋದು ಕೂಡಾ ಕುಟುಂಬಕ್ಕೆ ಗೊತ್ತಿರಲಿಲ್ಲಾ. ಆದ್ರೆ ತನಿಖೆಯ ಬೆನ್ನುಬಿದ್ದ ಪೊಲೀಸರು ಇದೀಗ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಲಬುರಗಿ: ಕುಟುಂಬದ ಯುವತಿಯ ಬೆನ್ನುಬಿದ್ದಿದ್ದ ಯುವಕನ ಬರ್ಬರ ಕೊಲೆ ಮಾಡಿಸಿದ ಮಾಲಗತ್ತಿ ಗ್ರಾಮ ಪಂಚಾಯತ್ ಸದಸ್ಯ
ಕುಟುಂಬದ ಯುವತಿಯ ಬೆನ್ನುಬಿದ್ದಿದ್ದ ಯುವಕನ ಬರ್ಬರ ಕೊಲೆ ಮಾಡಿಸಿದ ಮಾಲಗತ್ತಿ ಗ್ರಾಮ ಪಂಚಾಯತ್ ಸದಸ್ಯ
Follow us on

ಅಲ್ಲಿ ಬ್ಯಾಂಕ್ ಲೋನ್ ರಿಕವರಿ ಮಾಡ್ತಿದ್ದ ಯುವಕನ ಬರ್ಬರ ಕೊಲೆಯಾಗಿತ್ತು (Murder). ಯಾರ ತಂಟೆಗೂ ಹೋಗದ ಯುವಕನ ಕೊಲೆ, ಎಲ್ಲರಿಗೂ ಶಾಕ್ ತರಿಸಿತ್ತು. ಆದ್ರೆ ಇದೀಗ ಕೊಲೆಗಾರರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ತಮ್ಮ ಕುಟುಂಬದ ಯುವತಿಯ ಬೆನ್ನು ಬಿದ್ದಿದ್ದ (Love Aaffair) ಯುವಕನನ್ನು ಗ್ರಾಮ ಪಂಚಾಯತ್ ಸದಸ್ಯ, ತನ್ನ ಸ್ನೇಹಿತರ ಜೊತೆ ಸೇರಿ ಬರ್ಬರವಾಗಿ ಕೊಲೆ ಮಾಡಿರೋದು ವಿಚಾರಣೆಯಿಂದ ಬೆಳಕಿಗೆ ಬಂದಿದೆ. ಅದು ಡಿಸೆಂಬರ್ 10 ನೇ ತಾರೀಕು. ಕಲಬುರಗಿ ನಗರದ ಹೊರವಲಯದ ಎಂ ಆರ್ ಗಾರ್ಡನ್ ಬಳಿಯಿರೋ ಖಾಲಿ ಜಾಗದಲ್ಲಿ ಯುವಕನ ಶವವೊಂದು ಪತ್ತೆಯಾಗಿತ್ತು. ಮಾರಕಾಸ್ತ್ರಗಳಿಂದ ಇರಿದಿದ್ದ ದುಷ್ಕರ್ಮಿಗಳು, ಕೊಲೆ ಮಾಡಿ ಶವವನ್ನು ಅಲ್ಲೇ ಬಿಟ್ಟು ಹೋಗಿದ್ದರು. ಈ ಬಗ್ಗೆ ಕಲಬುರಗಿ ನಗರದ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ (Kalaburagi Police) ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಕೊಲೆಯಾದ ಯುವಕನ ಗುರುತು ಪತ್ತೆ ಮಾಡಿದಾಗ ಗೊತ್ತಾಗಿದ್ದು, ಕೊಲೆಯಾಗಿದ್ದು, ಕಲಬುರಗಿ ತಾಲೂಕಿನ ಮಾಲಗತ್ತಿ ಗ್ರಾಮದ ನಿವಾಸಿಯಾಗಿದ್ದ 25 ವರ್ಷದ ಸಚೀನ್ ಅಂಬಲಗಿ ಅನ್ನೋದು.

ಕಲಬುರಗಿ ನಗರದಲ್ಲಿರೋ ಖಾಸಗಿ ಬ್ಯಾಂಕ್ ನಲ್ಲಿ ಫೈನಾನ್ಸ್ ಲೋನ್ ರಿಕವರಿ ಮಾಡೋ ಕೆಲಸ ಮಾಡುತ್ತಿದ್ದ ಸಚಿನ್, ಗ್ರಾಮದಲ್ಲಿ ಯಾರ ತಂಟೆಗೂ ಕೂಡಾ ಹೋದವನಲ್ಲವಂತೆ. ಆದ್ರೆ ಡಿಸೆಂಬರ್ 9 ರಂದು ಸಂಜೆ ಮನೆಯಿಂದ ಊಟಕ್ಕೆ ಸ್ನೇಹಿತರ ಜೊತೆ ಹೋಗಿ ಬರ್ತೇನೆ ಅಂತ ಹೋದವನು ಮರಳಿ ಮನೆಗೆ ಬಂದಿರಲಿಲ್ಲಾ. ಗಾಬರಿಯಾಗಿ ಹುಡುಕಾಡಿದಾಗ ಗೊತ್ತಾಗಿದೆ, ಸಚಿನ್ ಕೊಲೆಯಾಗಿದ್ದಾನೆ ಅನ್ನೋ ಸತ್ಯ.

ಮನೆಗೆ ಆಧಾರವಾಗಿದ್ದ ಮಗನನ್ನು ಕಳೆದುಕೊಂಡು ಕುಟುಂಬ ಕಂಗಾಲಾಗಿತ್ತು. ಜೊತೆಗೆ ಕೊಲೆ ಮಾಡಿದವರು ಯಾರು, ಯಾವ ಕಾರಣಕ್ಕಾಗಿ ಕೊಲೆಯಾಗಿದೆ ಅನ್ನೋದು ಕೂಡಾ ಕುಟುಂಬಕ್ಕೆ ಗೊತ್ತಿರಲಿಲ್ಲಾ. ಆದ್ರೆ ತನಿಖೆಯ ಬೆನ್ನುಬಿದ್ದ ಪೊಲೀಸರು ಇದೀಗ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಶೇಷವೆಂದ್ರೆ ಕೊಲೆ ಮಾಡಿದವರು ಕೂಡಾ ಇದೇ ಸಚಿನ್ ಅಂಬಲಗಿ ವಾಸವಾಗಿರೋ ಮಾಲಗತ್ತಿ ಗ್ರಾಮದ ನಿವಾಸಿಗಳು. ಹೌದು ಸಚಿನ್ ಕೊಲೆ ಪ್ರಕರಣದಲ್ಲಿ, ಮಾಲಗತ್ತಿ ಗ್ರಾಮ ಪಂಚಾಯತ್ ಸದಸ್ಯ ಸಿದ್ದು ಪೂಜಾರಿ ಮತ್ತು ಆತನ ಇನ್ನಿಬ್ಬರು ಸ್ನೇಹಿತರಾದ, ಇಕ್ಬಾಲ್ ಮತ್ತು ಆಸೀಪ್ ಅನ್ನೋರನ್ನು ಬಂಧಿಸಿ, ಪೊಲಸರು ನ್ಯಾಯಂಗ ಬಂಧನಕ್ಕೊಪ್ಪಿಸಿದ್ದಾರೆ.

ಇನ್ನು ಸಚಿನ್ ಕೊಲೆಗೆ ಯಾವುದೇ ಆಸ್ತಿ ವಿಚಾರ, ಹಣಕಾಸಿನ ವಿಚಾರ ಕಾರಣವಾಗಿಲ್ಲಾ. ಆದ್ರೆ ಸಚಿನ್ ಕೊಲೆಗೆ ಕಾರಣವಾಗಿದ್ದು ಪ್ರೀತಿ, ಪ್ರೇಮದ ವಿಚಾರ. ಹೌದು ಸಚಿನ್, ಇದೇ ಮಾಲಗತ್ತಿ ಗ್ರಾಮದ ಬಂಧಿತ ಸಿದ್ದು ಪೂಜಾರಿ ಕುಟುಂಬದ ಓರ್ವ ಯುವತಿಯನ್ನು ಪ್ರೀತಿಸುತ್ತಿದ್ದನಂತೆ. ಅಷ್ಟೇ ಅಲ್ಲ, ಯುವತಿ ಜೊತೆಗೆ ತಾನು ಇರೋ ಪೋಟೋಗಳನ್ನು ಅನೇಕರಿಗೆ ಆಗಾಗ ತೋರಿಸುತ್ತಿದ್ದನಂತೆ.

ಇದು ಸಿದ್ದು ಪೂಜಾರಿ ಮತ್ತು ಕುಟುಂಬದವರ ಆಕ್ರೋಶಕ್ಕೆ ಕಾರಣವಾಗಿತ್ತು. ಹೀಗಾಗಿ ಅನೇಕ ಬಾರಿ ತಮ್ಮ ಕುಟುಂಬದ ಯುವತಿ ತಂಟೆಗೆ ಬಾರದಂತೆ ಸಿದ್ದು ಪೂಜಾರಿ, ಸಚಿನ್ ಗೆ ವಾರ್ನ್ ಕೂಡಾ ಮಾಡಿದ್ದನಂತೆ. ಆದ್ರು ಕೂಡಾ ಸಚಿನ್ ಯುವತಿಯ ಸಂಪರ್ಕದಲ್ಲಿದ್ದನಂತೆ. ಡಿಸೆಂಬರ್ 9 ರಂದು ಕೂಡಾ ತನ್ನ ಸ್ನೇಹಿತರ ಜೊತೆಗೆ ಹೋಟೆಲ್ ವೊಂದರಲ್ಲಿ ಇದ್ದಾಗ, ಯುವತಿ ಜೊತೆ ಇರೋ ಪೋಟೋಗಳನ್ನು ಕೆಲವರಿಗೆ ತೋರಿಸುವದನ್ನು ಸಿದ್ದು ಪೂಜಾರಿ ನೋಡಿದ್ದನಂತೆ.

ಹೀಗೆಯೇ ಬಿಟ್ಟರೆ ತಮ್ಮ ಕುಟುಂಬದ ಮರ್ಯಾದೆ ಹಾಳಾಗುತ್ತದೆ, ಸಚಿನ್ ಗೆ ಏನಾದ್ರು ಒಂದು ಗತಿ ಕಾಣಿಸಲೇಬೇಕು ಅಂತ ಸಿದ್ದು ಪೂಜಾರಿ ನಿರ್ಧಾರ ಮಾಡಿದ್ದನಂತೆ. ಡಿಸೆಂಬರ್ 9 ರಂದು ರಾತ್ರಿ, ತನ್ನ ಸ್ನೇಹಿತರ ಜೊತೆ ಹೊಂಚು ಹಾಕಿದ್ದ ಸಿದ್ದು ಪೂಜಾರಿ, ಸಚಿನ್ ಪಾರ್ಟಿ ಮುಗಿಸಿಕೊಂಡು ಮರಳಿ ಮಾಲಗತ್ತಿ ಗ್ರಾಮಕ್ಕೆ ಹೋಗುತ್ತಿದ್ದಾಗ, ಆತನ ಬೈಕ್ ತಡೆದು, ಆತನನ್ನು ರಸ್ತೆ ಪಕ್ಕದ ಜಾಗಕ್ಕೆ ಕೆರದುಕೊಂಡು ಹೋಗಿ ಕೊಲೆ ಮಾಡಿ ಪರಾರಿಯಾಗಿದ್ದರು ಎಂದು ಕಲಬುರಗಿ ನಗರ ಡಿಸಿಪಿ ಅಡ್ಡೂರು ಶ್ರೀನಿವಾಸಲು ಮಾಹಿತಿ ನೀಡಿದ್ದಾರೆ.

ಹೆತ್ತವರಿಗೆ ಆಧಾರವಾಗಬೇಕಿದ್ದ ಮಗ, ಯುವತಿಯ ಬೆನ್ನುಬಿದ್ದು ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಇತ್ತ ತಪ್ಪು ಮಾಡಿದವರಿಗೆ ತಿದ್ದಿ ಬುದ್ದಿ ಹೇಳಬೇಕು. ಇಲ್ಲವೇ ಅವರ ಹೆತ್ತವರಿಗೆ ತಿಳಿಸಬೇಕು. ಅದನ್ನು ಮಾಡುವದನ್ನು ಬಿಟ್ಟು ಕೊಲೆ ಮಾಡಿ, ಗ್ರಾಮ ಪಂಚಾಯತ್ ಸದಸ್ಯ ಜೈಲು ಪಾಲಾಗಿರೋದು ದುರ್ದೈವದ ಸಂಗತಿಯಾಗಿದೆ.

ವರದಿ: ಸಂಜಯ್, ಟಿವಿ 9, ಕಲಬುರಗಿ

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ