ಕಲಬುರಗಿ: ಕೆಬಿಎಸ್ ಬ್ಯಾಂಕ್ ನಲ್ಲಿ ಪತ್ತೆಯಾಯ್ತು 700 ಗ್ರಾಂ ನಕಲಿ ಚಿನ್ನಾಭರಣ!
ಕಲಬುರಗಿಯ ಕೃಷ್ಣಾ ಸಮೃದ್ಧಿ ಬ್ಯಾಂಕಿನಲ್ಲಿ 700 ಗ್ರಾಂ ಗೂ ಅಧಿಕ ನಕಲಿ ಚಿನ್ನಾಭರಣ ಅಡವಿಟ್ಟು 76 ಲಕ್ಷ ರೂಪಾಯಿಗೂ ಹೆಚ್ಚು ಸಾಲ ಪಡೆದಿರುವ ಭಾರಿ ವಂಚನೆ ಬೆಳಕಿಗೆ ಬಂದಿದೆ. ಆಡಿಟ್ ವೇಳೆ ಈ ಗೋಲ್‌ಮಾಲ್ ಬಯಲಾಗಿದ್ದು, ಹಳೆ ಮ್ಯಾನೇಜರ್ ಹಾಗೂ ಅಕ್ಕಸಾಲಿಗನ ವಿರುದ್ಧ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಈ ಘಟನೆಯಿಂದ ಗ್ರಾಹಕರಲ್ಲಿ ಆತಂಕ ಮೂಡಿದೆ.

ಮುಖ್ಯಾಂಶಗಳು
- ಕಲಬುರಗಿ ಬ್ಯಾಂಕಿನಲ್ಲಿ 700 ಗ್ರಾಂ ನಕಲಿ ಚಿನ್ನಾಭರಣ ಪತ್ತೆಯಾಗಿದೆ.
- ನಕಲಿ ಚಿನ್ನವಿಟ್ಟು ಬರೋಬ್ಬರಿ 76 ಲಕ್ಷ ರೂಪಾಯಿ ಸಾಲ ಪಡೆಯಲಾಗಿದೆ.
- ಹಳೆ ಮ್ಯಾನೇಜರ್ ಹಾಗೂ ಅಕ್ಕಸಾಲಿಗನ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು.
ಕಲಬುರಗಿ, ಅಕ್ಟೋಬರ್ 23: ಸುಪರ್ ಮಾರ್ಕೆಟ್‌ನಲ್ಲಿರುವ ಕೃಷ್ಣಾ ಸಮೃದ್ಧಿ (ಕೆಬಿಎಸ್) ಬ್ಯಾಂಕಿನಲ್ಲಿ ಬರೋಬ್ಬರಿ 700 ಗ್ರಾಂ ಗೂ ಅಧಿಕ ನಕಲಿ ಚಿನ್ನಾಭರಣ ಅಡವಿಟ್ಟು ಲಕ್ಷಾಂತರ ರೂಪಾಯಿ ಸಾಲ ಪಡೆದಿರುವ ದೊಡ್ಡ ಮಟ್ಟದ ವಂಚನೆ ಪ್ರಕರಣ ಕಲಬುರಗಿಯಲ್ಲಿ ಬೆಳಕಿಗೆ ಬಂದಿದೆ. ಬ್ಯಾಂಕಿನಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ನಕಲಿ ಚಿನ್ನ ಪತ್ತೆಯಾಗಿರುವುದು ಗ್ರಾಹಕರಲ್ಲಿ ತೀವ್ರ ಆತಂಕ ಮೂಡಿಸಿದೆ. ತಾವು ಅಸಲಿ ಚಿನ್ನವಿಟ್ಟು ಸಾಲ ಪಡೆದ ಪ್ರಾಮಾಣಿಕ ಗ್ರಾಹಕರು ಸಹ ತಮ್ಮ ಒಡವೆಗಳ ಸುರಕ್ಷತೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಬ್ಯಾಂಕ್ ಅಧಿಕಾರಿಗಳ ನೇರ ಶಾಮೀಲಾತಿ ಇಲ್ಲದೆ ಇಂತಹ ದೊಡ್ಡ ಪ್ರಮಾಣದ ವಂಚನೆ ನಡೆಸುವುದು ಸಾರ್ವಜನಿಕರಿಗೆ ಅಸಾಧ್ಯವೆಂದು ತೋರುತ್ತದೆ. ಸಾರ್ವಜನಿಕರು ಬ್ಯಾಂಕ್ ಮೇಲೆ ಇಟ್ಟಿರುವ ನಂಬಿಕೆಯನ್ನು ಈ ಘಟನೆ ಹುಸಿಗೊಳಿಸಿದೆ.
ಈ ಗೋಲ್‌ಮಾಲ್ ಹಿಂದೆ ದೊಡ್ಡ ಜಾಲವೇ ಇರುವ ಶಂಕೆ!
ಬ್ಯಾಂಕಿನಲ್ಲಿ ನಡೆದ ವಾರ್ಷಿಕ ಆಡಿಟ್ ವೇಳೆ ಈ ಆಘಾತಕಾರಿ ಮಾಹಿತಿ ಹೊರಬಿದ್ದಿದ್ದು, ನಕಲಿ ಚಿನ್ನದ ಮೇರೆಗೆ ಅಂದಾಜು 76 ಲಕ್ಷ ರೂಪಾಯಿಗಳಿಗೂ ಹೆಚ್ಚು ಸಾಲ ನೀಡಲಾಗಿದೆ ಎಂಬುದು ಗೊತ್ತಾಗಿದೆ. ಈ ಗಂಭೀರ ಅಕ್ರಮದ ಕುರಿತು ಬ್ಯಾಂಕ್ ಮ್ಯಾನೇಜರ್ ಹರ್ಷಾ ಕುಲಕರ್ಣಿ ಅವರು ಕಲಬುರಗಿಯ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ದೂರು ದಾಖಲಿಸಿದ್ದಾರೆ. ಬ್ಯಾಂಕಿನ ಹಳೆ ಮ್ಯಾನೇಜರ್ ಹಾಗೂ ಚಿನ್ನಾಭರಣ ಪರಿಶೀಲನೆ ನಡೆಸುತ್ತಿದ್ದ ಅಕ್ಕಸಾಲಿಗನ ವಿರುದ್ಧ ದೂರು ನೀಡಲಾಗಿದ್ದು, ಈ ಗೋಲ್‌ಮಾಲ್ ಹಿಂದೆ ದೊಡ್ಡ ಜಾಲವೇ ಕಾರ್ಯನಿರ್ವಹಿಸಿರುವ ಶಂಕೆ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ ಪೊಲೀಸರು ಎಲ್ಲಾ ಆಯ್ದ ಕೋನಗಳಿಂದಲೂ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಸ್ಥಳೀಯರು ಹಾಗೂ ಗ್ರಾಹಕರು ಬಲವಾಗಿ ಆಗ್ರಹಿಸುತ್ತಿದ್ದಾರೆ. ಬ್ಯಾಂಕಿನ ಆಂತರಿಕ ಭದ್ರತೆ ಮತ್ತು ಪರಿಶೀಲನಾ ವ್ಯವಸ್ಥೆಯ ಲೋಪಗಳು ಕೂಡ ಇಲ್ಲಿ ಬಹಿರಂಗಗೊಂಡಿವೆ.
ದೂರು ಕೊಟ್ಟ ಮ್ಯಾನೇಜರ್ ಮೇಲೆಯೂ ಗಂಭೀರ ಆರೋಪ!
ಈ ಹಗರಣದಲ್ಲಿ ಕುತೂಹಲಕಾರಿ ಸಂಗತಿಯೆಂದರೆ, ದೂರು ನೀಡಿರುವ ಪ್ರಸ್ತುತ ಮ್ಯಾನೇಜರ್ ಹರ್ಷಾ ಕುಲಕರ್ಣಿ ಅವರ ಮೇಲೆಯೂ ಕೆಲವು ಗಂಭೀರ ಆರೋಪಗಳಿವೆ. ಅವರು ಈ ಹಿಂದೆ ಕಮಲಾಪುರ ಬ್ಯಾಂಕ್ ಮ್ಯಾನೇಜರ್ ಆಗಿದ್ದಾಗ ಬರೋಬ್ಬರಿ 84 ಲಕ್ಷ ರೂಪಾಯಿ ಹಣ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸದ್ಯ ನಕಲಿ ಚಿನ್ನದ ಈ ಪ್ರಕರಣದ ತನಿಖೆಯನ್ನು ಪೊಲೀಸರು ಕೈಗೆತ್ತಿಕೊಂಡಿದ್ದು, ಕಮಲಾಪುರ ಪ್ರಕರಣದ ನಂಟಿನ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ. ಬ್ಯಾಂಕಿನ ಉನ್ನತ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಪಾತ್ರದ ಬಗ್ಗೆಯೂ ತೀವ್ರ ವಿಚಾರಣೆ ನಡೆಯುತ್ತಿದೆ. ಪೊಲೀಸರ ಸಂಪೂರ್ಣ ಹಾಗೂ ನಿಷ್ಪಕ್ಷಪಾತ ತನಿಖೆಯ ಬಳಿಕವಷ್ಟೇ ಈ ಬ್ಯಾಂಕ್ ಗೋಲ್‌ಮಾಲ್‌ನ ಅಸಲಿ ಸತ್ಯ ಮತ್ತು ರೂವಾರಿಗಳು ಯಾರೆಂಬುದು ಹೊರಬರಬೇಕಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
