ಕಲಬುರಗಿ, ಅಕ್ಟೋಬರ್ 16: ಕಲಬುರಗಿ ನಗರದಲ್ಲಿ (Kalaburagi City) ಕಳೆದ ಕೆಲ ತಿಂಗಳಿಂದ ಸರಗಳ್ಳರ ಹಾವಳಿ ಹೆಚ್ಚಾಗಿತ್ತು. ಅದರಲ್ಲೂ ಕೆಲ ದಿನಗಳ ಹಿಂದೆ ಕಲಬುರಗಿ ನಗರದ ಮಾಕಾ ಲೇಔಟ್ನಲ್ಲಿ ಸಂಜೆ ಸಮಯದಲ್ಲಿ ಮನೆ ಮುಂದೆ ವಾಕ್ ಮಾಡ್ತಿದ್ದ ವೃದ್ದೆಯ ಸರಗಳ್ಳತನ (Chain Snatching) ಪ್ರಕರಣ ನಡೆದಿತ್ತು. ಪ್ರಕರಣವನ್ನು ಗಂಭೀರವಾಗಿ ತಗೆದುಕೊಂಡಿದ್ದ ಕಲಬುರಗಿ ನಗರ ಪೊಲೀಸ್ ಕಮಿಷನರ್ ಆರ್ ಚೇತನ್, ಸರಗಳ್ಳರನ್ನು ಪತ್ತೆ ಮಾಡಿಲಿಕ್ಕಾಗಿಯೇ ಒಂದು ತಂಡವನ್ನು ರಚಿಸಿದ್ದರು. ಕಳೆದ ಕೆಲ ದಿನಗಳ ಕಾಲ ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರು ಸರಗಳ್ಳರನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಕಲಬುರಗಿ ನಗರದ ನಿವಾಸಿಗಳಾದ ಶೇಖ್ ಅಜರುದ್ದೀನ್ ಮತ್ತು ಮಹ್ಮದ್ ತೌಸೀಪ್ ಅನ್ನೋ ಇಬ್ಬರನ್ನು ಬಂಧಿಸಿದ್ದಾರೆ. ಇಬ್ಬರು ಕೂಡಾ ನಗರದಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದರಂತೆ. ಆದ್ರೆ ದಿಡೀರನೆ ಶ್ರೀಮಂತರಾಗಬೇಕು, ದುಡಿಯದೇ ಬದುಕಬೇಕು ಅಂತ ನಿರ್ಧಾರ ಮಾಡಿ, ಸರಗಳ್ಳತನ ಮಾಡಲು ಆರಂಭಿಸಿದ್ದರಂತೆ. ಇನ್ನು ಬಂಧಿತರಿಂದ ಹದಿನೈದು ಸರಗಳ್ಳತನ ಪ್ರಕರಣ ಬೇಧಿಸಿರುವ ಪೊಲೀಸರು, ಬರೋಬ್ಬರಿ,17.88 ಲಕ್ಷ ಮೌಲ್ಯದ 298 ಗ್ರಾಂ ಬಂಗಾರದ ಸರಗಳನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಕಲಬುರಗಿ: ಪ್ರೇಮ ವಿವಾಹಕ್ಕೆ ಬ್ರೇಕ್ ಹಾಕಲು ಸರ್ಕಾರಕ್ಕೆ ಮನವಿ ಸಲ್ಲಿಸಲು ಮುಂದಾದ ಗ್ರಾಮ ಪಂಚಾಯತ್ ಸದಸ್ಯರು
ಇನ್ನು ಒಂಟಿ ಮಹಿಳೆಯರು ಏರಿಯಾದಲ್ಲಿ ಓಡಾಡುತ್ತಿರುವದನ್ನು ಗಮನಿಸುತ್ತಿದ್ದ ದುರುಳರು, ಬೈಕ್ ಮೇಲೆ ಹೋಗಿ, ಸರಗಳ್ಳತನ ಮಾಡಿ ಪರಾರಿಯಾಗುತ್ತಿದ್ದರು. ಕಳೆದ ಕೆಲ ತಿಂಗಳಿಂದ ಪೊಲೀಸರಿಗೆ ತಲೆ ಬಿಸಿ ಮಾಡಿದ್ದ ಕಳ್ಳರು ಇದೀಗ ಅಂದರ್ ಆಗಿದ್ದಾರೆ. ಇನ್ನು ಕದ್ದ ಚಿನ್ನವನ್ನು ಪೈನಾನ್ಸ್ ನಲ್ಲಿ ಅಡವಿಟ್ಟಿದ್ದರೆ, ಕೆಲ ಚಿನ್ನಾಭರಣಗಳನ್ನು ಮಾರಾಟ ಮಾಡಿದ್ದರು. ಇದೀಗ ಅಡಿವಟ್ಟುಕೊಂಡಿದ್ದ ಪೈನಾನ್ಸ್ ಸಿಬ್ಬಂಧಿ ಮತ್ತು ಖರೀದಿಸಿದ್ದ ವ್ಯಕ್ತಿ ವಿರುದ್ದ ಕೂಡಾ ಪ್ರಕರಣ ದಾಖಲಿಸಲು ಪೊಲೀಸರು ಮುಂದಾಗಿದ್ದಾರೆ.
ಕಲಬುರಗಿ ನಗರ ಬೆಳೆದಂತೆ ಕ್ರೈಮ್ ಗಳ ಸಂಖ್ಯೆ ಕೂಡಾ ಹೆಚ್ಚಾಗುತ್ತಿದೆ. ಅದರಲ್ಲೂ ಸರಗಳ್ಳರ ಹಾವಳಿ ಹೆಚ್ಚಾಗಿದ್ದರಿಂದ, ಮಹಿಳೆಯರು ಹೊರಗಡೆ ಭಯ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇನ್ನು ನಗರದಲ್ಲಿ ಸರಗಳ್ಳತನ ಮಾಡೋ ಅನೇಕ ಗ್ಯಾಂಗ್ ಗಳಿದ್ದು, ಅವರನ್ನು ಪತ್ತೆ ಮಾಡಿ, ಕಂಬಿ ಹಿಂದೆ ಕಳುಹಿಸುವ ಕೆಲಸವನ್ನು ಪೊಲೀಸರು ಮಾಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ