ಕಲಬುರಗಿ: ಕಲಬುರಗಿ ಜಿಲ್ಲಾಧಿಕಾರಿ ಇದೀಗ ಜೋಳಿಗೆ ಹಿಡಿದು ಸುದ್ದಿಯಾಗಿದ್ದಾರೆ. ಅಷ್ಟಕ್ಕೂ ಜಿಲ್ಲಾಧಿಕಾರಿ ಜೋಳಿಗೆ ಹಿಡಿದಿದ್ದು ಹಣಕ್ಕಾಗಿ ಅಲ್ಲಾ! ಗ್ರಾಮೀಣ ಭಾಗದ ಜನರ ಓದಿಗೆ ಅನುಕೂಲವಾಗಲು ಪುಸ್ತಕಗಳಿಗಾಗಿ…!!! ರಾಜ್ಯದಲ್ಲಿ ಪ್ರತಿ ತಿಂಗಳು ಮೂರನೇ ಶನಿವಾರ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನು ಸರ್ಕಾರ ಪ್ರಾರಂಭಿಸಿದೆ. ಜಿಲ್ಲಾಧಿಕಾರಿ, ತಹಶಿಲ್ದಾರಗಳು ತಮ್ಮ ವ್ಯಾಪ್ತಿಯಲ್ಲಿ ಒಂದು ದಿನ ಒಂದು ಹಳ್ಳಿಯಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತಾರೆ. ಅದರೆ ಕಲಬುರಗಿ ಜಿಲ್ಲಾಧಿಕಾರಿ ಯಶವಂತ ಗುರುಕಾರ್ ಮಾತ್ರ ಪ್ರತಿ ಗ್ರಾಮ ವಾಸ್ತವ್ಯದಲ್ಲಿ ಕೂಡಾ ತಮ್ಮ ನಡೆ ನುಡಿ ಆಚಾರಗಳಿಂದ ಜನರ ಮೆಚ್ಚುಗೆ ಪಡೆಯುತ್ತಿದ್ದಾರೆ. ಇಂದು ತಮ್ಮ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಗ್ರಾಮವಾಸ್ತವ್ಯದಲ್ಲಿ ಜೋಳಿಗೆ ಹಿಡಿದು ಜನರಿಂದ ಪುಸ್ತಕಗಳನ್ನು (Book) ಬೇಡಿ ಪಡೆಯುವ ಮೂಲಕ ಹೊಸ ಸಂಪ್ರದಾಯಕ್ಕೆ ಚಾಲನೆ ನೀಡಿದ್ದಾರೆ (Kalaburagi District Deputy Commissioner Yashwant Gurikar).
ಕಲಬುರಗಿ ತಾಲೂಕಿನ ಭೀಮಳ್ಳಿ ಗ್ರಾಮದಲ್ಲಿ ಇಂದು ಜಿಲ್ಲಾಧಿಕಾರಿ ಯಶವಂತ ಗುರುಕಾರ್ ಗ್ರಾಮ ವಾಸ್ತವ್ಯ ಮಾಡಿದ್ದಾರೆ. ಗ್ರಾಮವಾಸ್ತವ್ಯ ಹಿನ್ನೆಲೆಯಲ್ಲಿ ಮುಂಜಾನೆ ಭೀಮಳ್ಳಿ ಗ್ರಾಮಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಸೂಟು ಬೂಟು ಬಿಟ್ಟು, ಜಿಲ್ಲಾಧಿಕಾರಿ ಹಮ್ಮುಬಿಮ್ಮು ಪಕ್ಕಕ್ಕಿಟ್ಟು ಪಂಚೆ ತೊಟ್ಟು, ಟಾಂಗಾದಲ್ಲಿ ಗ್ರಾಮಕ್ಕೆ ಎಂಟ್ರಿ ಕೊಟ್ಟರು. ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಜೋಳಿಗೆ ಹಿಡಿದು ಸಂಚರಿಸಿದ್ದು ವಿಶೇಷವಾಗಿತ್ತು. ಅಷ್ಟಕ್ಕೂ ಜಿಲ್ಲಾಧಿಕಾರಿ ಜೋಳಿಗೆ ಹಿಡಿದು ಗ್ರಾಮದಲ್ಲಿ ಸಂಚರಿಸಿದ್ದು ಪುಸ್ತಕಗಳಿಗಾಗಿ.
ನೀವು ಓದಿ ಮುಗಿಸಿರುವ ಪುಸ್ತಕಗಳು ಮನೆಯಲ್ಲಿ ಇದ್ರೆ ದಾನ ಮಾಡಿ:
ಹೌದು ಭೀಮಳ್ಳಿ ಗ್ರಾಮದಲ್ಲಿ ಜೋಳಿಗೆ ಹಿಡಿದು ಗ್ರಾಮದಲ್ಲಿ ಅಡ್ಡಾಡಿದ ಜಿಲ್ಲಾಧಿಕಾರಿ ಯಶವಂತ್, ನಿಮ್ಮ ಮನೆಯಲ್ಲಿ ನೀವು ಓದಿ ಮುಗಿಸಿರುವ ಪುಸ್ತಕಗಳು ಇದ್ರೆ ಅವುಗಳನ್ನು ದಾನದ ರೂಪದಲ್ಲಿ ನೀಡಿ ಅಂತ ಜನರಲ್ಲಿ ಮನವಿ ಮಾಡಿದರು. ಜಿಲ್ಲಾಧಿಕಾರಿ ಮನವಿಗೆ ಸ್ಪಂಧಿಸಿದ ಗ್ರಾಮದ ಕೆಲವರು ತಮ್ಮಲ್ಲಿದ್ದ ಪುಸ್ತಕಗಳನ್ನು ದಾನ ಮಾಡಿದ್ರು. ಜನರಿಂದ ಸಂಗ್ರಹಿಸಿದ ಪುಸ್ತಕಗಳನ್ನು ಗ್ರಾಮದಲ್ಲಿನ ಗ್ರಂಥಾಲಯಕ್ಕೆ ಜಿಲ್ಲಾಧಿಕಾರಿ ಯಶವಂತ ಗುರುಕಾರ್ ನೀಡಿದರು.
ಗ್ರಾಮೀಣ ಭಾಗದ ಜನರು ಓದುವ ಹವ್ಯಾಸ ಬಳಸಿಕೊಳ್ಳಬೇಕು. ಗ್ರಾಮದಲ್ಲಿನ ಗ್ರಂಥಾಲಯದಲ್ಲಿರುವ ಪುಸ್ತಕಗಳನ್ನು ಓದಬೇಕು. ವಿದ್ಯಾರ್ಥಿಗಳು, ಯುವಕರು ದುಶ್ಚಟಗಳಿಗೆ ಬಲಿಯಾಗದೇ ಓದುವ ಗುಣ ಬೆಳಸಿಕೊಳ್ಳಬೇಕು ಅಂತ ಜಿಲ್ಲಾಧಿಕಾರಿ ಗ್ರಾಮದ ಜನರಲ್ಲಿ ಮನವಿ ಮಾಡಿದರು.
Published On - 2:32 pm, Sat, 19 March 22