
ಕಲಬುರಗಿ, ಸೆಪ್ಟೆಂಬರ್ 29: ಒಂದು ತಿಂಗಳ ಹಸೂಗೂಸನ್ನು ಕಂಕುಳಲ್ಲಿ ಇಟ್ಟುಕೊಂಡು ಮನೆಯ ಮೇಲ್ಚಾವಣೆ ಏರಿಕುಳಿತಿರುವ ಬಾಣಂತಿ, ದಿಕ್ಕೇ ತೋಚದಂತೆ ಪರದಾಡಿದ ಮನ ಕಲಕುವ ದೃಶ್ಯಕ್ಕೆ ಕಲಬುರಗಿ (Kalaburagi) ಜಿಲ್ಲೆಯ ಸೇಡಂ ತಾಲೂಕಿನ ಸಮಖೇಡ ತಾಂಡಾ ಸಾಕ್ಷಿಯಾಗಿದೆ. ಮತ್ತೊಂದೆಡೆ, ಗ್ರಾಮವೇ ಮುಳುಗಿದರೂ ಶಾಸಕರು ಬಂದಿಲ್ಲ ಎಂದು ಹೆದ್ದಾರಿ ತಡೆದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ಭೀಮಾ ನದಿಯ ಆರ್ಭಟಕ್ಕೆ ಸೇತುವೆಯೇ ಕೊಚ್ಚಿಕೊಂಡು ಹೋಗಿದೆ.
ಕಳೆದ ಕೆಲವು ದಿನಗಳಿಂದ ಕಲಬುರಗಿ ಜಿಲ್ಲೆಯಲ್ಲಿ ನಿರಂತರವಾಗಿ ಭೀಕರ ಮಳೆಯಾಗುತ್ತಿದ್ದು, ಜನರನ್ನು ಹೈರಾಣ ಮಾಡಿದೆ. ಮಳೆಯ ಪರಿಣಾಮ ಕಾಗಿಣಾ ನದಿ ಉಕ್ಕಿ ಹರಿಯುತ್ತಿದ್ದು ಸಮಖೇಡ ತಾಂಡಾವನ್ನು ಜಲಾವೃತವನ್ನಾಗಿಸಿದೆ. ಗ್ರಾಮದ ಶೋಭಾ ಎಂಬ ಬಾಣಂತಿ ತನ್ನ ಹಸೂಗೂಸನ್ನು ಕಟ್ಟಿ ಮನೆಯ ಮೇಲ್ಚಾವಣಿಯಲ್ಲಿಯೇ ಜೀವನ ಮಾಡುತ್ತಾ ಪರದಾಟ ನಡೆಸುತ್ತಿದ್ದಾಳೆ. ಕಾಗಿಣಾ ನದಿಯ ಇಬ್ಬರ ತಾಂಡಾದ 100 ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡು ಮನೆ ಸಾಮಗ್ರಿಗಳೆಲ್ಲ ನದಿಯ ಪಾಲಾಗಿದ್ದವು. ಹೀಗಾಗಿ ಜೀವ ಉಳಿಸಿಕೊಳ್ಳಲು ಶೋಭಾ ಹಸೂಗೂಸನ್ನೇ ಕಂಕುಳಲ್ಲಿಕೊಂಡು ಮೇಲ್ಚಾವಣಿ ಏರಿದ್ದರು. ನಮ್ಮ ಸಂಕಷ್ಟವನ್ನು ಯಾವೊಬ್ಬ ಅಧಿಕಾರಿಗಳೂ ಕೇಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮವೇ ಮುಳುಗಡೆಯಾದರೂ ಆಡಳಿತ ವರ್ಗದ ಯಾರೊಬ್ಬರು ನೆರವಿಗೆ ಬಂದಿಲ್ಲ ಎಂದು ತಾಂಡಾ ನಿವಾಸಿಗಳು ಧಿಡೀರ್ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ವಿಷಯ ತಿಳಿಯುತ್ತಿದ್ದಂತೆ ತಕ್ಷಣವೇ ಸ್ಥಳಳಕ್ಕೆ ಧಾವಿಸಿದ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಗ್ರಾಮಸ್ಥರ ಮನವೊಲಿಸಿ ಪ್ರತಿಭಟನೆ ನಿಲ್ಲಿಸಿದರು. ಅತ್ತ ಚಿಂಚೋಳಿ ತಾಲೂಕಿನ ಜಟ್ಟೂರು ಗ್ರಾಮದಲ್ಲಿ ಕಾಗಿಣಾ ಆರ್ಭಟಕ್ಕೆ ಗೋಶಾಲೆಯೇ ಕೊಚ್ಚಿಕೊಂಡು ಹೋಗಿದೆ. ಪರಿಣಾಮವಾಗಿ ಗೋಶಾಲೆಯಲ್ಲಿದ್ದ 42 ಗೋವುಗಳು ಸಾವಿಗೀಡಾಗಿವೆ.
ಭೀಮಾ ನದಿಯ ಪ್ರವಾಹದಿಂದ ನದಿ ದಡದ ಹಲವು ಗ್ರಾಮಗಳಿಗೆ ಕಂಟಕ ತಟ್ಟಿದೆ. ಭೀಮೆಯ ರಣಾರ್ಭಟಕ್ಕೆ ಸೇತುವೆಯೇ ಕೊಚ್ಚಿಕೊಂಡು ಹೋಗಿದೆ. ಕಲ್ಲೂರ (ಕೆ) ಮತ್ತು ಚಿನ್ಮಳ್ಳಿ ಗ್ರಾಮದ ಮಧ್ಯೆ ಇರೋ ಬ್ರಿಡ್ಜ್ ಕಂ ಬ್ಯಾರೆಜ್ನ ಒಂದು ಭಾಗದ ತಡೆಗೋಡೆಯೇ ಕೊಚ್ಚಿಕೊಂಡು ಹೋಗಿದೆ. ಪರಿಣಾಮ ನೂರಾರು ಏಕರೆಯಲ್ಲಿ ಬೆಳೆದಿದ್ದ ಬೆಳೆ ಸರ್ವನಾಶವಾಗಿ ಹೋಗಿತ್ತು. ಅತ್ತ ಜೇವರ್ಗಿ ತಾಲೂಕಿನ ಮಾಹೂರ ಗ್ರಾಮ ನಡುಗಡೆಯಾಗಿತ್ತು. ಭೀಮಾ ನದಿಯ ನೀರು ಗ್ರಾಮವನ್ಮೆ ಸುತ್ತುವೆದಿತ್ತು. ಹೀಗಾಗಿ ಗ್ರಾಮಸ್ಥರು ತಮಗೆ ಶಾಶ್ವತ ಪರಿಹಾರದ ಭರವಸೆ ಸಿಗುವ ವರೆಗೂ ಗ್ರಾಮ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಹೀಗಾಗಿ ತಕ್ಷಣವೇ ಮಾಹೂರ ಗ್ರಾಮಕ್ಕೆ ಆಗಮಿಸಿದ ಜೇವರ್ಗಿ ಶಾಸಕ ಡಾ.ಅಜಯ್ ಸಿಂಗ್ ಗ್ರಾಮಸ್ಥರ ಮನವೊಲಿಸಿ ಶಾಶ್ವತ ಪರಿಹಾರದ ಭರಸೆ ನೀಡಿದರು. ಬಳಿಕ ಗ್ರಾಮಸ್ಥರನ್ನು ಬೋಟ್ ಮೂಲಕ ಅಗ್ನಿಶಾಮಕ ದಳ ಸಿಬ್ಬಂದಿ ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಿದರು.
ಇದನ್ನೂ ಓದಿ: ಇಂದಿನಿಂದ ಅ. 4ರವರೆಗೆ ಕರ್ನಾಟಕದಲ್ಲಿ ಮಳೆ; ಕರಾವಳಿಯಲ್ಲಿ ಚಂಡಮಾರುತದ ಭೀತಿ
ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ಜಿಲ್ಲೆಯಾದ್ಯಂತ ಇನ್ನೆರಡು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಈ ಮಧ್ಯೆ ಸಿಎಂ ಸಿದ್ದರಾಮಯ್ಯ ಕೂಡಾ ಜಿಲ್ಲಾಧಿಕಾರಿಳು ಸ್ಥಳಕ್ಕೆ ಹೋಗುವಂತೆ ಸೂಚನೆ ನೀಡಿದ್ದಾರೆ. ಭೀಮಾ ನದಿ ಆರ್ಭಟ ಮತ್ತಷ್ಟು ಆಪತ್ತು ತರುವ ಆತಂಕ ಎದುರಾಗಿದೆ.