Kalaburagi News: ಹೆಡ್ಕಾನ್ಸ್ಟೇಬಲ್ ಹತ್ಯೆ ಪ್ರಕರಣ, ಆರೋಪಿ ಕಾಲಿಗೆ ಫೈರಿಂಗ್
ಮರಳು ಸಾಗಣೆ ಟ್ರ್ಯಾಕ್ಟರ್ ಹರಿಸಿ ಹೆಡ್ಕಾನ್ಸ್ಟೇಬಲ್ ಮೈಸೂರು ಚೌಹಾಣ್(51) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಸಾಯಿಬಣ್ಣ ಕರಜಗಿ ಕಾಲಿಗೆ ಪೊಲೀಸರು ಫೈರಿಂಗ್ ಮಾಡಿದ್ದಾರೆ.
ಕಲಬುರಗಿ: ಅಕ್ರಮ ಮರಳು ಸಾಗಣೆ (Illegal sand mafia) ಟ್ರ್ಯಾಕ್ಟರ್ ಹರಿಸಿ ಹೆಡ್ಕಾನ್ಸ್ಟೇಬಲ್ ಮೈಸೂರು ಚೌಹಾಣ್(51) ಹತ್ಯೆ ಪ್ರಕರಣಕ್ಕೆ (Head constable mysore chauhan murder) ಸಂಬಂಧಿಸಿದಂತೆ ಪ್ರಮುಖ ಆರೋಪಿ ಸಾಯಿಬಣ್ಣ ಕರಜಗಿ ಕಾಲಿಗೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಜಿಲ್ಲೆಯ ಜೇವರ್ಗಿ ಠಾಣೆ ಪೊಲೀಸರು, ವಿಜಯಪುರ (Vijayapura) ಜಿಲ್ಲೆಯ ಆಲಮೇಲ ಜಮೀನಿನಲ್ಲಿ ಅಡಗಿದ್ದ ಆರೋಪಿ ಸಾಯಿಬಣ್ಣ ಕರಜಗಿಯನ್ನು ಬಂಧಿಸಿ ವಾಹನದಲ್ಲಿ ಠಾಣೆ ಕರೆತಿದ್ದರು. ಈ ವೇಳೆ ಸಾಯಿಬಣ್ಣ ಕರಜಗಿ ಜೇವರ್ಗಿ ತಾಲೂಕಿನ ಮಂದೇವಾಲ್ ಬಳಿ ಮೂತ್ರ ವಿಸರ್ಜನೆಗೆ ಅಂತ ಕೆೆಳಗೆ ಇಳಿದಿದ್ದಾನೆ.
ನಂತರ ಸಾಯಿಬಣ್ಣ ಪಿಎಸ್ಐ ಯಡ್ರಾಮಿ ಅವರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಆತ್ಮರಕ್ಷಣೆಗಾಗಿ ಪಿಎಸ್ಐ ಯಡ್ರಾಮಿ ಅವರು ಆರೋಪಿ ಕಾಲಿಗೆ ಗುಂಡು ಹಾರಿಸಿ ಸೆರೆ ಹಿಡಿದಿದ್ದಾರೆ. ಗಾಯಾಳು ಸಾಯಿಬಣ್ಣನನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
2016ರಿಂದ ನೆಲೋಗಿ ಠಾಣಾ ವ್ಯಾಪ್ತಿಯ ರೌಡಿಶೀಟರ್
ಆರೋಪಿ ಸಾಯಿಬಣ್ಣ ಜೇವರ್ಗಿ ತಾಲೂಕಿನ ನಾರಾಯಣಪುರ ಗ್ರಾಮದ ನಿವಾಸಿಯಾಗಿದ್ದು, 2016ರಿಂದ ನೆಲೋಗಿ ಠಾಣಾ ವ್ಯಾಪ್ತಿಯ ರೌಡಿಶೀಟರ್ ಆಗಿದ್ದಾನೆ. ಸಾಯಿಬಣ್ಣ ಕರಜಗಿ ವಿರುದ್ಧ ಕೊಲೆ ಯತ್ನ, ಡಕಾಯಿತಿ ಪ್ರಕರಣಗಳಿವೆ.
ಇದನ್ನೂ ಓದಿ: ಸಾಂತ್ವನ, ಪರಿಹಾರ ಕೊಡಿಸುವ ಭರವಸೆ ನೀಡಿದ ಸಚಿವ ಪ್ರಿಯಾಂಕ್ ಖರ್ಗೆ, ಜಿಲ್ಲಾ ಎಸ್ಪಿ ಇಶಾ ಪಂತ್ ಏನಂದರು?
ಆರೋಪಿ ಸಾಯಿಬಣ್ಣ ಜೇವರ್ಗಿ ಜೂನ್ 15ರಂದು ಮರಳು ಸಾಗಣೆ ಟ್ರ್ಯಾಕ್ಟರ್ ಹರಿಸಿ ಹೆಡ್ಕಾನ್ಸ್ಟೇಬಲ್ ಮೈಸೂರು ಚೌಹಾಣ್(51) ಹತ್ಯೆ ಮಾಡಿ ಪರಾರಿಯಾಗಿದ್ದನು. ನಂತರ ಆರೋಪಿ ರೌಡಿಶೀಟರ್ ಸಾಯಿಬಣ್ಣ ಕರಜಗಿ ಬಂಧನಕ್ಕಾಗಿ 3 ತಂಡ ರಚಿಸಲಾಗಿತ್ತು. ಈತ ವಿಜಯಪುರ ಜಿಲ್ಲೆ ಆಲಮೇಲ ಬಳಿ ಜಮೀನಿನಲ್ಲಿ ಅಡಗಿದ್ದು, ಬಂಧಿಸಿ ಕರೆ ತರಲಾಗಿದೆ. ಆರೋಪಿಗಳಾದ ಸಾಯಿಬಣ್ಣ ಕರಜಗಿ, ಸಿದ್ದಪ್ಪ ಇಬ್ಬರೂ ಸಹೋದರರು ಎಂದು ಕಲಬುರಗಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಹೇಳಿದ್ದಾರೆ.
ಏನಿದು ಹೆಡ್ಕಾನ್ಸ್ಟೇಬಲ್ ಹತ್ಯೆ ಪ್ರಕರಣ?
ದುಷ್ಕರ್ಮಿಗಳು ಭೀಮಾ ನದಿಯಿಂದ ಟ್ರ್ಯಾಕ್ಟರ್ನಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದರು. ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನಾರಾಯಣಪುರ ಗ್ರಾಮದ ಬಳಿ ಮರಳು ಸಾಗಣೆ ಟ್ರ್ಯಾಕ್ಟರ್ ತಡೆಯಲು ಅಕ್ರಮ ಮರಳುಗಾರಿಕೆಯನ್ನು ತಡೆಯಲು ಹೆಚ್ಸಿ ಮೈಸೂರು ಚೌಹಾಣ್, ಪಿಸಿ ಪ್ರಮೋದ್ ದೊಡ್ಮನಿ ಅವರಿಬ್ಬರೂ ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ಬೈಕ್ನಲ್ಲಿ ತೆರಳಿದ್ದರು. ಆ ವೇಳೆ ಪೊಲೀಸರಿದ್ದ ಬೈಕ್ ಮೇಲೆ ಮರಳು ಟ್ರ್ಯಾಕ್ಟರ್ ದುಷ್ಕರ್ಮಿಗಳು ಹತ್ತಿಸಿದ್ದರು. ನೆಲೋಗಿ ಠಾಣೆ ಹೆಡ್ಕಾನ್ಸ್ಟೇಬಲ್ ಮೈಸೂರು ಚೌಹಾಣ್ (51) ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಇನ್ನು ಕಾನ್ಸ್ಟೇಬಲ್ ಪ್ರಮೋದ್ ದೊಡ್ಮನಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆರೋಪಿ ಸಿದ್ದಪ್ಪನನ್ನು ವಶಕ್ಕೆ ಪಡೆದಿರುವ ನೆಲೋಗಿ ಠಾಣೆ ಪೊಲೀಸರು ತಲೆ ಮರೆಸಿಕೊಂಡಿರುವ ಸಾಯಿಬಣ್ಣಗಾಗಿ ಶೋಧ ನಡೆಸಿದ್ದಾರೆ. ಇಬ್ಬರೂ ಆರೋಪಿಗಳ ಮೇಲೆ ಕೊಲೆ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಕಲಬುರ್ಗಿ ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:27 pm, Sat, 17 June 23