ಕಲಬುರಗಿ: ದೇವಸ್ಥಾನಗಳನ್ನೇ ಟಾರ್ಗೆಟ್​ ಮಾಡಿ ಕಳ್ಳತನ ಮಾಡ್ತಿದ್ದ ಆರೋಪಿಗಳ ಬಂಧನ; 65 ಗ್ರಾಂ ಚಿನ್ನ, 85 ಸಾವಿರ ನಗದು ವಶಕ್ಕೆ

ಕರ್ನಾಟಕ, ತೆಲಂಗಾಣ, ಮಹರಾಷ್ಟ್ರದ ಅನೇಕ ದೇವಸ್ಥಾನಗಳನ್ನೇ ಟಾರ್ಗೆಟ್​ ಮಾಡ್ತಿದ್ದ ಈ ಕಳ್ಳರು. ಕಲಬುರಗಿ ಜಿಲ್ಲೆಯಲ್ಲಿ ಸುಪ್ರಸಿದ್ದ ದೇವಸ್ಥಾನದಲ್ಲಿ ಕಳ್ಳತನ ಮಾಡಿದ್ರು. ಇಂತಹ ಖತರ್ನಾಕ್​ ಕಳ್ಳ ಬೆಕ್ಕುಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

ಕಲಬುರಗಿ: ದೇವಸ್ಥಾನಗಳನ್ನೇ ಟಾರ್ಗೆಟ್​ ಮಾಡಿ ಕಳ್ಳತನ ಮಾಡ್ತಿದ್ದ ಆರೋಪಿಗಳ ಬಂಧನ; 65 ಗ್ರಾಂ ಚಿನ್ನ, 85 ಸಾವಿರ ನಗದು ವಶಕ್ಕೆ
ಆರೋಪಿಗಳ ಬಂಧನ, ಚಿನ್ನಾಭರಣ ಸೇರಿ ನಗದು ವಶಕ್ಕೆ
Follow us
|

Updated on: Jun 11, 2023 | 9:40 AM

ಕಲಬುರಗಿ: ಈ ದೃಶ್ಯಗಳನ್ನೊಮ್ಮೆ ನೋಡಿ, ಇಲ್ಲಿ ಇಬ್ಬರು ಕಳ್ಳರು(Thieves) ಮುಖವನ್ನು ಬಟ್ಟೆಯಿಂದ ಕಟ್ಟಿಕೊಂಡು, ಮಂಕಿ ಟೋಪಿ ಧರಿಸಿ, ಯಾರು ಇಲ್ಲದೇ ಇರುವುದನ್ನ ಕನ್ಪರ್ಮ್ ಮಾಡಿಕೊಂಡು, ಗರ್ಭಗುಡಿಯೊಳಗೆ ಹೋಗಿ, ಕೈಗೆ ಸಿಕ್ಕಿದ್ದನ್ನ ದೋಚಿಕೊಂಡು ಹೋಗಿದ್ದರು. ದೇವಸ್ಥಾನದ ಗರ್ಭಗುಡಿಯೊಳಗೆ ಶೂಗಳನ್ನು ಧರಿಸಿ ಎಂಟ್ರಿ ಕೊಟ್ಟಿದ್ದ ಕಳ್ಳರು, ಯಾರ ಅಂಜಿಕೆ ಅಳುಕಿಲ್ಲದೆ ಕಳ್ಳತನ ಮಾಡಿದ್ದರು. ಈ ಕಳ್ಳ ಬೆಕ್ಕುಗಳು ಇಂತಹದೊಂದು ಕಳ್ಳಾಟವಾಡಿದ್ದು, ಕಲಬುರಗಿ(Kalaburagi) ಜಿಲ್ಲೆಯ ಅಫಜಲಪುರ ತಾಲೂಕಿನ ಸುಕ್ಷೇತ್ರ ಘತ್ತರಗಾ ಭಾಗ್ಯವಂತಿ ದೇವಸ್ಥಾನದಲ್ಲಿ. ಹೌದು ಘತ್ತರಗಾ ಭಾಗ್ಯವಂತಿ ದೇವಸ್ಥಾನದಲ್ಲಿ 2022 ಡಿಸೆಂಬರ್ 28 ರಂದು ಕಳ್ಳತನವಾಗಿತ್ತು. ಇನ್ನು ಘತ್ತರಗಾ ಭಾಗ್ಯವಂತಿ ದೇವಸ್ಥಾನ, ಈ ಭಾಗದಲ್ಲಿ ಸುಪ್ರಸಿದ್ದ ದೇವಸ್ಥಾನ. ಪ್ರತಿನಿತ್ಯ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಬರ್ತಾರೆ. ಈ ದೇವಸ್ಥಾನದ ಹಿಂದಿನ ಬಾಗಿಲು ಮುರಿದು ಒಳ ನುಗ್ಗಿದ್ದ ಮೂವರು ಕಳ್ಳರು, ದೇವಿಯ ಚಿನ್ನದ ಒಡವೆ, ದೇವಿಯ ಬಟ್ಟೆಗಳು ಸೇರಿದಂತೆ ಹುಂಡಿಯಲ್ಲಿದ್ದ ಹಣವನ್ನು ಕದ್ದೊಯ್ದಿದ್ದರು.

ಈ ಬಗ್ಗೆ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದ್ರೆ, ಕಳೆದ ಐದಾರು ತಿಂಗಳಿಂದ ಪೊಲೀಸರ ಕೈಗೆ ಸಿಗದೇ ಮತ್ತೆ ಕಳ್ಳಾಟವಾಡಿದ್ದ ಖತರ್ನಾಕ ಕಿಲಾಡಿಗಳನ್ನು ಪತ್ತೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸದ್ಯ ಘತ್ತರಗಾ ಭಾಗ್ಯವಂತಿ ದೇವಸ್ಥಾನದಲ್ಲಿ ಕಳ್ಳತನ ಮಾಡಿದ್ದ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಭೀಮರಾಯ್ ನಾಯ್ಕ ತಾಂಡಾದ ನಿವಾಸಿಗಳಾದ ತಾನಾಜಿ ಮತ್ತು ಕವಿತಾ ಅನ್ನೋ ಇಬ್ಬರನ್ನು ಬಂಧಿಸಿದ್ದಾರೆ. ಕವಿತಾ ಪತಿ ಬಾಲಾಜಿ ಮತ್ತು ಆತನ ಸಹಚರರು, ದೇವಸ್ಥಾನದಲ್ಲಿ ಚಿನ್ನಾಭರಣ ಕದ್ದು ತಗೆದುಕೊಂಡು ಹೋದ್ರೆ, ಈ ತಾನಾಜಿ ಮತ್ತು ಕವಿತಾ ಆ ಚಿನ್ನಾಭರಣಗಳನ್ನು ಮಾರಾಟ ಮಾಡುತ್ತಿದ್ದರಂತೆ. ಇನ್ನು ಬಂಧಿತರಿಂದ 65 ಗ್ರಾಂ ಚಿನ್ನಾಭರಣ, ಮತ್ತು 85 ಸಾವಿರ ನಗದನ್ನು ವಶಪಡಿಸಿಕೊಂಡಿದ್ದಾರೆ. ಕವಿತಾ ಪತಿ ಬಾಲಾಜಿ ಮತ್ತು ಇನ್ನಿಬ್ಬರು ತಲೆಮರೆಸಿಕೊಂಡಿದ್ದು ಅವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಕಲಬುರಗಿ ನಗರದಲ್ಲಿ ಹೆಚ್ಚಾದ ಬೈಕ್ ಕಳ್ಳತನ ಪ್ರಕರಣಗಳು; ಲಕ್ಷಾಂತರ ಮೌಲ್ಯದ ಬೈಕ್ ಕಳೆದುಕೊಂಡು ಕಂಗಾಲಾಗುತ್ತಿರೋ ಜನ

ಇನ್ನು ಈ ಗ್ಯಾಂಗ್, ಕರ್ನಾಟಕ, ಮಹರಾಷ್ಟ್ರ ಮತ್ತು ತೆಲಂಗಾಣದಲ್ಲಿ ಕಳ್ಳತನ ಮಾಡುತ್ತಿತ್ತಂತೆ. ಭಕ್ತರಂತೆ ಪ್ರತಿಷ್ಟಿತ ದೇವಸ್ಥಾನಕ್ಕೆ ಹೋಗ್ತಿದ್ದ ಈ ಕಳ್ಳರು, ಅಲ್ಲಿಯೇ ಒಂದು ದಿನ ಸುತ್ತಾಡಿ, ಯಾವ ರೀತಿಯಾಗಿ ಕಳ್ಳತನ ಮಾಡಬಹುದೆಂದು ಸ್ಕೆಚ್ ಹಾಕುತ್ತಿದ್ದರಂತೆ. ರಾತ್ರಿ ಸಮಯದಲ್ಲಿ ಎಲ್ಲರೂ ಮಲಗಿದ್ದಾಗ, ದೇವಸ್ಥಾನಕ್ಕೆ ಎಂಟ್ರಿ ಕೊಟ್ಟು, ದೇವರ ಮೂರ್ತಿ, ಚಿನ್ನಾಭರಣ, ಹುಂಡಿಯಲ್ಲಿದ್ದ ಹಣವನ್ನು ಕದ್ದು ಪರಾರಿಯಾಗುತ್ತಿದ್ದರಂತೆ. ಈ ಗ್ಯಾಂಗ್ ಕಳೆದ ಕೆಲ ವರ್ಷಗಳಿಂದ ದೇವರ ಚಿನ್ನಾಭರಣಗಳನ್ನು ಕದಿಯೋದನ್ನು ಕೆಲಸ ಮಾಡಿಕೊಂಡಿತ್ತಂತೆ.

ಸದ್ಯ ಈ ದೇವರ ಮೂರ್ತಿ ಮತ್ತು ದೇವರ ಚಿನ್ನಾಭರಣ ಕದಿಯುತ್ತಿದ್ದ ಇನ್ನು ಕೆಲವರು ನಾಪತ್ತೆಯಾಗಿದ್ದು, ಅವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ದೇವಸ್ಥಾನದಲ್ಲಿ ಹಣ ಸಿಕ್ಕರೆ ಅನೇಕರು ಹುಂಡಿಗೆ ಹಾಕ್ತಾರೆ. ಆದ್ರೆ, ಇವರು ಮಾತ್ರ ದೇವರ ಹುಂಡಿ ಮತ್ತು ದೇವರ ಮೈ ಮೇಲಿದ್ದ ಚಿನ್ನಾಭರಣಗಳನ್ನು ಕದಿಯುತ್ತಿದ್ದರು. ಈ ಖತರ್ನಾಕ ಗ್ಯಾಂಗ್​ನ ಹೆಡಮುರಿ ಕಟ್ಟುವ ಕೆಲಸವನ್ನು ಪೊಲೀಸರು ಮಾಡಬೇಕಿದೆ.

ವರದಿ: ಸಂಜಯ್ ಟಿವಿ9 ಕಲಬುರಗಿ

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ