AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಲ್ಮಾನ್ ಖಾನ್ ತಂಗಿ ಮನೆಯಲ್ಲಿ ಕಳ್ಳತನ, ಆರೋಪಿ ಬಂಧನ

Salman Khan: ನಟ ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಖಾನ್ ಮನೆಯಲ್ಲಿ ಕಳ್ಳತನವಾಗಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸಲ್ಮಾನ್ ಖಾನ್ ತಂಗಿ ಮನೆಯಲ್ಲಿ ಕಳ್ಳತನ, ಆರೋಪಿ ಬಂಧನ
ಸಲ್ಲು-ಅರ್ಪಿತಾ
Follow us
ಮಂಜುನಾಥ ಸಿ.
|

Updated on: May 17, 2023 | 9:35 PM

ಕೆಲವು ದಿನಗಳ ಹಿಂದಷ್ಟೆ ರಜನೀಕಾಂತ್ (Rajinikanth) ಮಗಳ ಮನೆಯಲ್ಲಿ ಕಳ್ಳತನ ಆದ ಪ್ರಕರಣ ಬೆಳಕಿಗೆ ಬಂದಿತ್ತು, ಪೊಲೀಸರು ಆರೋಪಿಗಳನ್ನು ಬಂಧಿಸಿ ಬಹುತೇಕ ಆಭರಣಗಳನ್ನು ವಶಪಡಿಸಿಕೊಂಡಿದ್ದರು. ಇದೀಗ ಸಲ್ಮಾನ್ ಖಾನ್ (Salman Khan) ತಂಗಿಯ ಮನೆಯಲ್ಲಿ ಚಿನ್ನಾಭರಣ ಕಳುವಾಗಿದೆ. ಮಾತ್ರವಲ್ಲ ಪೊಲೀಸರು ಆರೋಪಿಯನ್ನು ಬಂಧಿಸಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಮನೆಯಿಂದ ಅವರ ವಜ್ರದ ಕಿವಿಯೋಲೆ ಕಾಣೆಯಾಗಿದ್ದವು. ಈ ಬಗ್ಗೆ ಅರ್ಪಿತಾ ಮುಂಬೈ ಪೊಲೀಸರಿಗೆ ದೂರು ನೀಡಿದ್ದರು. ತಮಗೆ ಒಬ್ಬ ಮನೆಗೆಲಸದ ವ್ಯಕ್ತಿಯ ಮೇಲೆ ಅನುಮಾನವಿರುವುದಾಗಿಯೂ ದೂರಿನಲ್ಲಿ ಉಲ್ಲೇಖಿಸಿದ್ದರು. ದೂರಿನ ಆಧಾರದಲ್ಲಿ ತನಿಖೆ ನಡೆಸಿದ ಪೊಲೀಸರು ಅರ್ಪಿತಾ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸಂದೀಪ್ ಹೆಗ್ಡೆ ಎಂಬಾತನನ್ನು ಬಂಧಿಸಿದ್ದಾರೆ. ಆತನಿಂದ ವಜ್ರದ ಕಿವಿಯೋಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಅರ್ಪಿತಾ ಮನೆಯಲ್ಲಿ 10 ಜನ ಸಿಬ್ಬಂದಿಯಿದ್ದು ಕಳೆದ ನಾಲ್ಕು ತಿಂಗಳಿನಿಂದ ಸಂದೀಪ್ ಹೆಗ್ಡೆ ಎಂಬಾತ ಅರ್ಪಿತಾ ಮನೆಗೆ ಕೆಲಸಕ್ಕೆ ಸೇರಿದ್ದನಂತೆ. ಕೆಲವು ದಿನಗಳ ಹಿಂದೆ ಅರ್ಪಿತಾರ ವಜ್ರದ ಓಲೆಯನ್ನು ಕದ್ದಿದ್ದ ಸಂದೀಪ್ ಅಂದಿನಿಂದ ಕೆಲಸಕ್ಕೆ ಸಹ ಬಂದಿರಲಿಲ್ಲ. ಅರ್ಪಿತಾ ಸಹ ತಮಗೆ ಸಂದೀಪ್ ಮೇಲೆಯೇ ಅನುಮಾನ ಇರುವುದಾಗಿ ಪೊಲೀಸರಿಗೆ ತಿಳಿಸಿದ್ದರು.

ಕಳ್ಳತನ ಮಾಡಿದ್ದ ಸಂದೀಪ್ ಹೆಗ್ಡೆ ಥಾಣೆಗೆ ತೆರಳಿ ಅಲ್ಲಿ ತಲೆಮರೆಸಿಕೊಂಡಿದ್ದ. ಸಿಸಿಟಿವಿ ಪರಿಶೀಲನೆ ಮಾಡಿದ ಬಳಿಕ ಪೊಲೀಸರು ಥಾಣೆಗೆ ತೆರಳಿ ಸಂದೀಪ್​ನನ್ನು ಬಂಧಿಸಿದ್ದಾರೆ. ಆತನಿಂದ ಓಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಕಳ್ಳತನವಾಗಿದ್ದ ಓಲೆಯ ಒಟ್ಟು ಮೌಲ್ಯ ಸುಮಾರು ನಾಲ್ಕು ಲಕ್ಷ ರುಪಾಯಿಗಳು ಎನ್ನಲಾಗಿದೆ.

ಅರ್ಪಿತಾ, ಸಲ್ಮಾನ್ ಖಾನ್​ರ ಸ್ವಂತ ತಂಗಿಯಲ್ಲ ಬದಲಿಗೆ ಸಾಕು ಸಹೋದರಿ. ಸಲ್ಮಾನ್ ಖಾನ್​ರ ತಂದೆ ಸಲೀಂ ತಮ್ಮ ಎರಡನೇ ಪತ್ನಿ ಹೆಲೆನ್ ರಿಚರ್ಡ್​ಸನ್ ಜೊತೆ ಸೇರಿ ಅರ್ಪಿತಾರನ್ನು ಬಹಳ ಹಿಂದೆಯೇ ದತ್ತು ಪಡೆದಿದ್ದರು. ಅರ್ಪಿತಾರ ತಾಯಿ ಮುಂಬೈನ ಫುಟ್​ಪಾತ್​ ಮೇಲೆ ಸಾವನ್ನಪ್ಪಿ ಅರ್ಪಿತಾ ಅನಾತೆಯಾಗಿದ್ದರು. ದತ್ತು ಪಡೆದಾಗಿನಿಂದಲೂ ಅಂದಿನಿಂದಲೂ ಅರ್ಪಿತಾ, ಸಲ್ಮಾನ್ ಖಾನ್ ಹಾಗೂ ಅವರ ಸಹೋದರರೊಟ್ಟಿಗೆ ಬೆಳೆದಿದ್ದಾರೆ.

ಅರ್ಪಿತಾ ಖಾನ್, ಬಾಲಿವುಡ್​ನ ಯುವನಟ ಆಯುಷ್​ ಶರ್ಮಾ ಅವರನ್ನು ವಿವಾಹವಾಗಿದ್ದು ಇಬ್ಬರು ಮಕ್ಕಳನ್ನು ಸಹ ಪಡೆದಿದ್ದಾರೆ. ಆಯುಷ್ ಶರ್ಮಾ, ಸಲ್ಮಾನ್ ಖಾನ್​ರ ಅಂತಿಮ್ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ಇದೀಗ ಖತ್ವಾ ಹೆಸರಿನ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಲ್ಮಾನ್ ಖಾನ್​ರಿಗೆ ಸ್ವಂತ ತಂಗಿ ಅಲ್ವಿರಾ ಸಹ ಇದ್ದಾರೆ ಆದರೆ ಖಾನ್ ಸಹೋದರರಿಗೆ ಅರ್ಪಿತಾ ಮೇಲೆ ವಿಶೇಷ ಪ್ರೀತಿ. ಅಲ್ವಿರಾಗಿಂತಲೂ ಹೆಚ್ಚಾಗಿ ಸಲ್ಮಾನ್ ಖಾನ್ ಹಾಗೂ ಇತರೆ ಖಾನ್ ಸಹೋದರರೊಟ್ಟಿಗೆ ಅರ್ಪಿತಾ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ