ಅನ್ಯಜಾತಿ ಯುವತಿಯನ್ನ ಪ್ರೀತಿಸಿ ಮದ್ವೆ: ಯುವಕನಿಗೆ ಜೀವ ಬೆದರಿಕೆ, ಪೊಲೀಸ್ ಮೊರೆ ಹೋದ ಜೋಡಿ

ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಕೋಣಸಿರಸಗಿ ಗ್ರಾಮದ ನವಜೋಡಿಗೆ ಜೀವ ಬೆದರಿಕೆ ಹಾಕಿರುವಂತಹ ಘಟನೆ ನಡೆದಿದೆ. ಅನ್ಯಜಾತಿ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ಯುವತಿ ಕಡೆಯವರಿಂದ ಬೆದರಿಕೆ ಆರೋಪ ಕೇಳಿಬಂದಿದೆ. ಹೀಗಾಗಿ ಸದ್ಯ ನವದಂಪತಿ ಕಲಬುರಗಿ ಎಸ್‌ಪಿಗೆ ಮನವಿ ಸಲ್ಲಿಸಿದ್ದು, ಪೊಲೀಸ್ ರಕ್ಷಣೆ ಕೋರಿದ್ದಾರೆ.

ಅನ್ಯಜಾತಿ ಯುವತಿಯನ್ನ ಪ್ರೀತಿಸಿ ಮದ್ವೆ: ಯುವಕನಿಗೆ ಜೀವ ಬೆದರಿಕೆ, ಪೊಲೀಸ್ ಮೊರೆ ಹೋದ ಜೋಡಿ
ಪ್ರಭು, ಸಂಗೀತ
Edited By:

Updated on: Jan 24, 2026 | 4:21 PM

ಕಲಬುರಗಿ, ಜನವರಿ 24: ಅನ್ಯಜಾತಿಯವನನ್ನು ಪ್ರೀತಿಸಿ (love) ಮದುವೆಯಾಗಿದ್ದಕ್ಕೆ ಯುವತಿ ಮನೆಯರಿಂದ ಯುವಕನಿಗೆ ಜೀವ ಬೆದರಿಕೆ (Death Threat) ಹಾಲಾಗಿದ್ದು, ಇದೀಗ ನವಜೋಡಿ ಪೊಲೀಸರ ಮೊರೆಹೋಗಿದ್ದಾರೆ. ಜಿಲ್ಲೆಯ ಯಡ್ರಾಮಿ ತಾಲೂಕಿನ ಕೋಣಸಿರಸಗಿ ಗ್ರಾಮದಲ್ಲಿ ಘಟನೆ ನಡೆದಿದೆ. ಪ್ರಭು(23) ಹಾಗೂ ಸಂಗೀತ(19) ಪ್ರೀತಿಸಿ ಮದುವೆಯಾದ ಜೋಡಿ. ಯುವತಿ ಕುಟುಂಬಕ್ಕೆ ಹೆದರಿ ಸದ್ಯ ದಂಪತಿ ಊರು ಬಿಟ್ಟಿದ್ದು, ನಮಗೆ ರಕ್ಷಣೆ ನೀಡಿ ಎಂದು ಎಸ್​ಪಿಗೆ ಮನವಿ‌ ಮಾಡಿದ್ದಾರೆ.

ನಡೆದದ್ದೇನು?

ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಕೋಣಸಿರಸಗಿ ಗ್ರಾಮದ ಪ್ರಭು ಮತ್ತು ಸಂಗೀತ ಕಳೆದ ಆರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಕಳೆದ ಒಂದು ವಾರದ ಹಿಂದಷ್ಟೇ ರಿಜಿಸ್ಟರ್ ಮದುವೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಮಗನ ಅನೈತಿಕ ಸಂಬಂಧಕ್ಕೆ ತಾಯಿ ಫುಲ್ ಸಪೋರ್ಟ್​! ನವವಿವಾಹಿತೆ ಗಂಭೀರ ಆರೋಪ

ಪ್ರೀತಿ ವಿಚಾರ ಯುವತಿ ಮನೆಯವರಿಗೆ ತಿಳಿದು ಯುವಕನಿಗೆ ಬೆದರಿಕೆ ಹಾಕಿದ್ದಾರೆ. ಹಲವು ಬಾರಿ ಹಲ್ಲೆಗೆ ಯತ್ನಿಸಿರುವುದಾಗಿಯೂ ಆರೋಪ ಕೇಳಿಬಂದಿದೆ. ಯುವತಿ ಕುಟುಂಬಕ್ಕೆ ಹೆದರಿ ನವ ದಂಪತಿ ಸದ್ಯ ಊರು ಬಿಟ್ಟಿದ್ದು, ರಕ್ಷಣೆ ಕೋರಿ ಪೊಲೀಸ್​​ ಮೆಟ್ಟಿಲೇರಿದ್ದಾರೆ.

ಪ್ರಿಯಕರನಿಂದಲೇ ಪ್ರಿಯತಮೆಯ ಹತ್ಯೆ

ಕೋಲಾರ ಹೊರವಲಯದ ಬಂಗಾರಪೇಟೆ ವೃತ್ತದಲ್ಲಿ ಚಿರಂಜೀವಿ ಎಂಬಾತ ತನ್ನ ಪ್ರಿಯತಮೆ ಸುಜಾತ ಎಂಬಾಕೆಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಘಟನೆ ಇತ್ತೀಚೆಗೆ ನಡೆದಿದೆ. ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಸ್ಟಾಫ್​ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಸುಜಾತ ಕೆಲಸಕ್ಕೆ ಹೋಗಲು ತಮ್ಮೂರು ಬಂಗಾರಪೇಟೆ ತಾಲ್ಲೂಕು ಕತ್ತಹಳ್ಳಿ ಗ್ರಾಮದಿಂದ ಕೋಲಾರಕ್ಕೆ ಬಂದಿದ್ದರು. ಈ ವೇಳೆ ತನ್ನ ಜೊತೆಗೆಯಲ್ಲೇ ಬಂದಿದ್ದ ಬಂಗಾರಪೇಟೆ ತಾಲೂಕಿನ ಯಳಬುರ್ಗಿ ಗ್ರಾಮದ ಚಿರಂಜೀವಿ ಕೋಲಾರದ ಹೊರವಲಯದ ಬಂಗಾರಪೇಟೆ ರಸ್ತೆಯಲ್ಲಿ ಏಕಾಏಕಿ ತನ್ನ ಕೀಚೈನಿನಲ್ಲಿದ್ದ ಚಾಕುವೊಂದನ್ನು ಬಳಸಿ ಸುಜಾತ ಕತ್ತು ಕೊಯ್ದಿದ್ದ, ನೋಡನೋಡುತ್ತಿದ್ದಂತೆ ಸುಜಾತ ಸಾವನ್ನಪ್ಪಿದ್ದರು.

ಇದನ್ನೂ ಓದಿ: Kalaburagi: ಮದುವೆಯಾಗಿ 2 ತಿಂಗಳಿಗೆ ಕಳೆದುಕೊಂಡಳು ಜೀವ: ಯುವತಿ ಪ್ರಾಣ ಪಡೆದ ಸಿಟಿ ವ್ಯಾಮೋಹ!

ಇದನ್ನು ನೋಡುತ್ತಿದ್ದ ಸ್ಥಳೀಯರು ಕೊಲೆ ಮಾಡಿ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಚಿರಂಜೀವಿಯನ್ನು ಹಿಡಿದು ತಳಿಸಿದ್ದಾರೆ. ನಂತರ ಕೊಲಾರ ನಗರ ಠಾಣಾ ಪೊಲೀಸರಿಗೆ ಫೋನ್​ ಮಾಡಿ ತಿಳಿಸಿ ಆರೋಪಿಯನ್ನು ಅವರಿಗೆ ಒಪ್ಪಿಸಿದ್ದಾರೆ. ಇನ್ನು ಸ್ಥಳಕ್ಕೆ ಬಂದಿದ್ದ ಕೋಲಾರ ನಗರ ಠಾಣಾ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದರು. ಎಸ್​​ಪಿ ಕನ್ನಿಕಾಸುಕ್ರಿವಾಲ್ ಹಾಗೂ ಸೋಕೋ ಟೀಂ ಪರಿಶೀಲನೆ ನಡೆಸಿ ಪ್ರಕರಣ ಸಂಬಂಧ ತನಿಖೆ ಕೈಗೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.