
ಕಲಬುರಗಿ, ಮೇ 05: ಕಲಬುರಗಿಯ (Kalaburagi) ಸೇಂಟ್ ಮೇರಿ ಶಾಲೆಯಲ್ಲಿ ರವಿವಾರ (ಮೇ. 04) ನಡೆದಿದ್ದ ನೀಟ್ ಪರೀಕ್ಷೆ ಬರೆಯಲು ಬಂದ ಬ್ರಾಹ್ಮಣ (Brahaman) ವಿದ್ಯಾರ್ಥಿ ಶ್ರೀಪಾದ್ ಪಾಟೀಲ್ ಅವರ ಜನಿವಾರವನ್ನು (Janivara) ಪರೀಕ್ಷಾ ಕೇಂದ್ರ ಸಿಬ್ಬಂದಿ ತೆಗೆಸಿ, ಪರೀಕ್ಷೆ ಬರೆಯಲು ಅವಕಾಶ ನೀಡಿದ್ದರು ಎಂಬ ವಿಚಾರ ವಿವಾದಕ್ಕೆ ಕಾರಣವಾಗಿದೆ. ಈ ಘಟನೆ ಸಂಬಂಧ ಬ್ರಾಹ್ಮಣ ಸಮುದಾಯ ಮತ್ತು ಹಿಂದೂ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಪರೀಕ್ಷಾ ಕೇಂದ್ರದ ಸಿಬ್ಬಂದಿ ಪ್ರಕರಣ ತಿಳಿಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದೀಗ ತಮ್ಮ ವರಸೆಯನ್ನು ಬದಲಿಸಿದ್ದಾರೆ.
“ಪರೀಕ್ಷೆ ಬರೆಯಲು ಬಂದ ಎಲ್ಲ ವಿದ್ಯಾರ್ಥಿಗಳನ್ನು ಸಾಲಾಗಿ ನಿಲ್ಲಿಸಿ ನೀಟ್ ಪರೀಕ್ಷಾ ನಿಯಮಗಳನ್ನು ತಿಳಿಸಿದೆವು. ಬಳಿಕ, ವಿದ್ಯಾರ್ಥಿಗಳನ್ನು ತಪಾಸಣೆಗೆ ಒಳಡಿಸಿದೆವು. ಈ ವೇಳೆ, ವಿದ್ಯಾರ್ಥಿಗಳು ತಮ್ಮ ಕೈ ಯಲ್ಲಿ ಕಟ್ಟಿರುವ ದಾರ, ಕೊರಳಲ್ಲಿನ ತಾಯತಗಳನ್ನು ತೆಗೆದರು. ಎಲ್ಲ ವಿದ್ಯಾರ್ಥಿಗಳು ತಮ್ಮ ಧಾರ್ಮಿಕ ಚಿಹ್ನೆಗಳನ್ನು ತೆಗೆಯುತ್ತಿದ್ದಂತೆ ಶ್ರೀಪಾದ ಪಾಟೀಲ್ ಕೂಡ ಜನಿವಾರ ತೆಗೆದಿದ್ದಾನೆ. ನಾವು ಜನಿವಾರ ತೆಗೆದಿಡು ಅಂತ ಹೇಳಿಲ್ಲ. ತಾನಾಗಿಯೇ ತೆಗೆದಿದ್ದಾನೆ. ಬೇರೆ ಯಾವ ಬ್ರಾಹ್ಮಣ ವಿದ್ಯಾರ್ಥಿ ಕೂಡ ಜನಿವಾರ ತೆಗೆದಿಲ್ಲ. ನಾವು ಜನಿವಾರ ತೆಗೆಸುತ್ತಿರಲಿಲ್ಲ. ಶ್ರೀಪಾದ ಪಾಟೀಲ್ ಜನಿವಾರ ತೆಗೆದು, ಬಳಿಕ ಹೊರಗೆ ಹೋಗಿ ತಮ್ಮ ತಂದೆಯವರಿಗೆ ನೀಡಿದ್ದಾರೆ” ಪರೀಕ್ಷಾ ಕೇಂದ್ರ ಸಿಬ್ಬಂದಿ ಹೇಳಿದ್ದಾರೆ.
ಪ್ರಕರಣ ಸಂಬಂಧ ಪರೀಕ್ಷಾ ಕೇಂದ್ರದ ಇಬ್ಬರು ಸಿಬ್ಬಂದಿಯನ್ನು ಅರೆಸ್ಟ್ ಮಾಡಲಾಗಿದೆ. ಈ ಸಂಬಂಧ ಪೊಲೀಸ್ ಕಮಿಷನರ್ ಎಸ್.ಡಿ.ಶರಣಪ್ಪ ಮಾತನಾಡಿ, ಸದ್ಯ ಇಬ್ಬರನ್ನು ಸಿಬ್ಬಂದಿ ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದೇವೆ. ವಿದ್ಯಾರ್ಥಿ ದೂರು ಆಧರಿಸಿ ಶರಣಗೌಡ, ಗಣೇಶ ಎಂಬುವರ ಇಬ್ಬರ ವಿರುದ್ಧ ಎಫ್ಐಆರ್ ದಾಖಲಿಸಿ, ಬಂಧಿಸಿದ್ದೇವೆ ಎಂದರು.
ಈ ಇಬ್ಬರು ಖಾಸಗಿ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದರು. ರವಿವಾರ ಸೇಂಟ್ ಮೇರಿ ಪರೀಕ್ಷಾ ಕೇಂದ್ರದಲ್ಲಿ ಈ ಘಟನೆ ನಡೆದಿತ್ತು. ಸದ್ಯ ಪ್ರಕರಣದ ತನಿಖೆ ಮುಂದುವರಿಸಿದ್ದೇವೆ ಡಾ.ಎಸ್.ಡಿ.ಶರಣಪ್ಪ ಎಂದು ತಿಳಿಸಿದರು.
ಇದನ್ನೂ ಓದಿ: ನೀಟ್ ಪರೀಕ್ಷೆಯಲ್ಲೂ ಜನಿವಾರ ತೆಗೆಸಿದ ಅಧಿಕಾರಿಗಳು
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:11 pm, Mon, 5 May 25