ಕಾಶಿ ಮಾದರಿಯಲ್ಲಿ ಗಾಣಗಾಪುರ ದತ್ತಾತ್ರೇಯ ದೇವಸ್ಥಾನ ಅಭಿವೃದ್ಧಿ: ಮಾಸ್ಟರ್ ಪ್ಲ್ಯಾನ್ ಸಿದ್ಧ
ಗಾಣಗಾಪುರದ ಶ್ರೀ ದತ್ತಾತ್ರೇಯ ದೇವಸ್ಥಾನ ಮತ್ತು ಪಟ್ಟಣದ ಸಮಗ್ರ ಅಭಿವೃದ್ಧಿಗೆ 200 ಕೋಟಿ ರೂ.ಗಳ ಮಾಸ್ಟರ್ ಪ್ಲಾನ್ ಸಿದ್ಧವಾಗಿದೆ. ನಾಲ್ಕು ಲೇನ್ ರಸ್ತೆ, ಸಂಗಮ ಮತ್ತು ಅಷ್ಟತೀರ್ಥಗಳ ಅಭಿವೃದ್ಧಿ, ಮೂಲಸೌಕರ್ಯ ಸುಧಾರಣೆಗಳು ಯೋಜನೆಯ ಭಾಗ. ಕೇಂದ್ರ ಸರ್ಕಾರದಿಂದ ಅನುಮೋದನೆ ನಿರೀಕ್ಷಿಸಲಾಗಿದೆ. ಭಕ್ತರ ಅನುಕೂಲಕ್ಕಾಗಿ ಸ್ವಚ್ಛತೆ, ಪಾರ್ಕಿಂಗ್, ಇನ್ನಿತರ ಸೌಲಭ್ಯಗಳನ್ನು ಒದಗಿಸಲಾಗುವುದು.

ಕಲಬುರಗಿ, ಮೇ 04: ಅಫಜಲಪೂರ (Afzalpur) ತಾಲೂಕಿನ ಸುಪ್ರಸಿದ್ಧ ದೇಗುಲ ಗಾಣಗಾಪುರದ ಶ್ರೀ ದತ್ತಾತ್ರೇಯ ದೇವಸ್ಥಾನ (Dattatreya Temple) ಸೇರಿದಂತೆ ಪ್ರಸಿದ್ಧ ಧಾರ್ಮಿಕ ಕೇಂದ್ರವಾಗಿರುವ ಗಾಣಗಾಪುರವನ್ನೂ ಕೂಡ ಕಾಶಿ ಮಾದರಿಯಲ್ಲಿ ಸಮಗ್ರ ಅಭಿವೃದ್ಧಿಗೆ 200 ಕೋಟಿ ರೂ. ಮೊತ್ತದ ಮಾಸ್ಟರ್ ಪ್ಲ್ಯಾನ್ ಸಿದ್ಧಪಡಿಸಲಾಗಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.
ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕು ಅಂತ ಕಳೆದ ಹದಿನೈದು ದಿನಗಳಿಂದ ನಿರತಂರ ಪ್ರಯತ್ನ ನಡೆಯುತ್ತಿತ್ತು. ಅಲ್ಲದೇ ಶುಕ್ರವಾರ ಗಾಣಗಾಪುರ ಬಂದ್ಗೂ ಕರೆ ನೀಡಲಾಗಿತ್ತು. ಹೀಗಾಗಿ ಸದ್ಯ ಸ್ಪಷ್ಟನೆ ನೀಡಿರುವ ಜಿಲ್ಲಾಧಿಕಾರಿಗಳು, ಗಾಣಗಾಪುರ ಪಟ್ಟಣದಲ್ಲಿ ನಾಲ್ಕು ಲೇನ್ ರಸ್ತೆ, ಸಂಗಮ ಮತ್ತು ಅಷ್ಠ ತೀರ್ಥ ಸ್ಥಳಗಳ ಅಭಿವೃದ್ಧಿ, ಒಳಚರಂಡಿ, ಎಸ್.ಟಿ.ಪಿ ಘಟಕ ಸ್ಥಾಪನೆ, ನಾಗರಿಕ ಸೌಲಭ್ಯಗಳು ಸೇರಿದಂತೆ ಒಟ್ಟಾರೆ ದೇವಸ್ಥಾನ ಮತ್ತು ಪಟ್ಟಣದ ಸೌಂದರ್ಯೀಕರಣ ಹೆಚ್ಚಿಸಲು ಮತ್ತು ಭಕ್ತಾದಿಗಳ ಅನುಕೂಲಕ್ಕೆ ತಕ್ಕಂತೆ ಮೂಲಸೌಕರ್ಯ ಕಲ್ಪಿಸುವುದು ಇದರ ಮೂಲ ಉದ್ದೇಶವಾಗಿದೆ ಎಂದರು.
ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಪ್ರವರ್ಗ “ಎ” ಅಡಿಯಲ್ಲಿ ಬರುವ ಶ್ರೀ ದತ್ತಾತ್ರೇಯನ ಸನ್ನಿದಿಯ ದರ್ಶನಕ್ಕೆ ದೇಶದ ವಿವಿಧ ಭಾಗಗಳಿಂದ ಅಪಾರ ಸಂಖ್ಯೆಯ ಭಕ್ತರು ಆಗಮಿಸುತ್ತಾರೆ. ಹೀಗಾಗಿ, ಭಕ್ತರ ಅನುಕೂಲಕ್ಕೆ ಸ್ವಚ್ಛತೆ, ಕುಡಿಯುವ ನೀರು, ಶೌಚಾಲಯ, ಪಾರ್ಕಿಂಗ್, ಸೂಚನಾ ಫಲಕಗಳು, ಶೂ ಸ್ಟ್ಯಾಂಡ್, ಸಿ.ಸಿ.ಟಿ.ವಿ., ಸಂಗಮ ಮತ್ತು ಅಷ್ಟ ತೀರ್ಥಗಳ ಅಭಿವೃದ್ಧಿ, ಡಸ್ಟ್ ಬಿನ್ ಅಳವಡಿಕೆ, ಪ್ರವಾಸಿ ಮಾಹಿತಿ ಕೇಂದ್ರ, ವಿವಿಧೋದ್ದೇಶ ಸಭಾಂಗಣ ನಿರ್ಮಾಣ ಹೀಗೆ ದೇವಸ್ಥಾನದ ಸಮಗ್ರ ಅಭಿವೃದ್ಧಿಗಾಗಿ “ಪ್ರಸಾದ” ಯೋಜನೆಯಡಿ ಸೇರ್ಪಡೆ ಮಾಡುವಂತೆ 83.52 ಕೋಟಿ ರೂ. ಮೊತ್ತದ ಪ್ರಸ್ತಾವನೆ ಈಗಾಗಲೆ ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ 2024ರ ಅಕೋಬರ್ 29 ರಂದೇ ಸಲ್ಲಿಸಿದ್ದು, ಅನುಮೋದನೆಯ ನಿರೀಕ್ಷೆ ಹೊಂದಲಾಗಿದೆ ಎಂದರು.
ಇನ್ನು, ಈ ಕುರಿತಂತೆ ರಾಜ್ಯದ ಗ್ರಾಮೀಣಾಭಿವೃಧ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಕಲಬುರಗಿ ಸಂಸದ ರಾಧಾಕೃಷ್ಣ ದೊಡ್ಡಮನಿ ಅವರು ಈಗಾಗಲೆ 2-3 ಬಾರಿ ಬಾರಿ ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಸಚಿವರನ್ನು ಕಂಡು ಗಾಣಗಾಪುರ ಸಮಗ್ರ ಅಭಿವೃದ್ಧಿ ಕುರಿತಂತೆ ಮನವರಿಕೆ ಮಾಡಿ ಅನುದಾನ ಒದಗಿಸಲು ಕೋರಿದ್ದಾರೆ.
ಕಳೆದ ವರ್ಷ ರುದ್ರಪ್ಪ ಲಮಾಣಿ ನೇತೃತ್ವದ ಕರ್ನಾಟಕ ವಿಧಾನಸಭೆಯ ಅರ್ಜಿಗಳ ಸಮಿತಿಯು ದೇವಸ್ಥಾನದ ಅಭಿವೃದ್ಧಿ ಕುರಿತಂತೆ ಸಮಿತಿಗೆ ಸಲ್ಲಿಕೆಯಾದ ಅರ್ಜಿ ಸಂಖ್ಯೆ:73/2024 ಕುರಿತಂತೆ ಪರಿಶೀಲಿಸಲು 2024 ರ ಜುಲೈ 4 ರಂದು ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಸಿದ ಸಭೆಯಲ್ಲಿ ಗಾಣಗಾಪುರ ಮತ್ತು ಶ್ರೀ ದತ್ತಾತ್ರೇಯ ದೇವಸ್ಥಾನದ ಅಭಿವೃದ್ಧಿಗೆ ಸಿದ್ದಪಡಿಸಲಾದ ನೀಲಿ ನಕ್ಷೆಯೊಂದಿಗೆ ಅದರ ಜೀರ್ಣೋದ್ಧಾರಕ್ಕೆ ಹಮ್ಮಿಕೊಳ್ಳಬೇಕಾದ ಕಾರ್ಯಕ್ರಮಗಳ ಕುರಿತು ಸಮಿತಿಗೆ ಮನವರಿಕೆ ಮಾಡಿಕೊಟ್ಟಾಗ ಜಿಲ್ಲಾಡಳಿತ ಮುಂಜಾಗ್ರತಾ ಕೆಲಸಗಳಿಗೆ ಸಮಿತಿಯು ಪ್ರಶಂಶೆ ವ್ಯಕ್ತಪಡಿಸಿತ್ತು. ಸಭೆಯಲ್ಲಿ ಅಫಜಲಪೂರ ಕ್ಷೇತದ ಶಾಸಕರಾಗಿರುವ ಎಂ.ವೈ.ಪಾಟೀಲ ಸೇರಿದಂತೆ ಸಮಿತಿಯ ಅನೇಕ ಸದಸ್ಯರು ಮತ್ತು ಮುಜರಾಯಿ ಇಲಾಖೆಯ ಆಯುಕ್ತರು ಚರ್ಚೆಯಲ್ಲಿ ಭಾಗವಹಿಸಿದ್ದರು.
ಅದೇ ದಿನ ಸಮಿತಿಯು ಶ್ರೀ ದತ್ತಾತ್ರೇಯ ದೇವಸ್ಥಾನಕ್ಕೆ ಭೇಟಿ ನೀಡಿ ಸ್ಥಳ ಪರಿವೀಕ್ಷಣೆ ಮಾಡಿ, ಭಕ್ತರೊಂದಿಗೂ ಸಮಾಲೋಚನೆ ಮಾಡಿತ್ತು. ದೇವಸ್ಥಾನ ಅಭಿವೃದ್ಧಿಗೆ ಅನುದಾನ ಬಿಡುಗಡೆಗೆ ಸರ್ಕಾರ ಮಟ್ಟದಲ್ಲಿ ಕ್ರಮ ಕೈಗೊಳ್ಳಲಾಗುವುದೆಂದು ಮತ್ತು ಅವಶ್ಯವಿದ್ದಲ್ಲಿ ಕೇಂದ್ರಕ್ಕೂ ಸಮಿತಿ ನಿಯೋಗ ತೆರಳಲಾಗುವುದು ಎಂದು ಸಮಿತಿ ಅಧ್ಯಕ್ಷರಾದ ರುದ್ರಪ್ಪ ಲಮಾಣಿ ಅವರು ತಿಳಿಸಿರುತ್ತಾರೆ.
ಇತ್ತೀಚೆಗೆ ರಾಜ್ಯದ ಪ್ರಮುಖ 14 ದೇವಾಲಯಗಳ ಪ್ರಸಾದವನ್ನು ಆನ್‌ಲೈನ್ ಮೂಲಕ ಬುಕ್ ಮಾಡಿ ಪಡೆಯಲು “ಇ- ಪ್ರಸಾದ” ಸೇವೆ ಪ್ರಾರಂಭವಾಗಿದ್ದು ಇ ದರಲ್ಲಿ ಗಾಣಗಾಪೂರದ ಶ್ರೀಙಉದ ತ್ತಾತ್ರೇಯನ ದೇವಸ್ಥಾನ ಒಳಗೊಂಡಿದೆ ಎಂದರು.
ವಾಕ್ ವೇ ನಿರ್ಮಾಣ, ಕಿಂಡಿ ದೊಡ್ಡದಾಗಿ ನಿರ್ಮಾಣಕ್ಕೆ ಪ್ರಸ್ತಾವನೆ:
ದೇವಸ್ಥಾನದ ನಿಧಿಯಿಂದ 1 ಕೋಟಿ ರೂ. ವೆಚ್ಚದಲ್ಲಿ ವಾಕ್ ವೇ ಕೆಲಸ ಪ್ರಗತಿಯಲ್ಲಿದೆ. ಶ್ರೀ ದತ್ತಾತ್ರೇಯ ದೇವಸ್ಥಾನ, ಶ್ರೀ ಸಂಗಮ, ಶ್ರೀ ಕಲ್ಲೇಶ್ವರ ದೇವಸ್ಥಾನ ಹಾಗೂ ಅಷ್ಟ ತೀರ್ಥಗಳಿಗೆ ತೆರಳುವ ಭಕ್ತಾದಿಗಳ ನೆರವಿಗಾಗಿ ವಿವಿಧ ಬ್ಯಾನರ್ ಮತ್ತು ಕಬ್ಬಿಣದ ಬೋರ್ಡ್ ತಯಾರಿಸಿ ನಾಮ ಫಲಕಗಳನ್ನು ಅಳವಡಿಸಲಾಗಿದೆ. ಶ್ರೀ ದತ್ತಾತ್ರೇಯನ ದರ್ಶನ ಕಿಂಡಿಯು ತುಂಬಾ ಕಿರಿದಾಗಿದ್ದು, ಇದನ್ನು ದೊಡ್ಡದಾಗಿ ನಿರ್ಮಿಸುವ ಕುರಿತಂತೆ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಿಗೆ ಜಿಲ್ಲಾಡಳಿತದಿಂದ ಪ್ರಸ್ತಾವನೆ ಸಲ್ಲಿಸಿದೆ ಎಂದು ಬಿ.ಫೌಜಿಯಾ ತರನ್ನುಮ್ ತಿಳಿಸಿದರು.
ಇದನ್ನೂ ಓದಿ: ದತ್ತಾತ್ರೇಯ ದೇವಸ್ಥಾನ ಅಭಿವೃದ್ಧಿ ಆಗ್ರಹಿಸಿ ಗಾಣಗಾಪುರ ಬಂದ್
ಕಲಬುರಗಿ ಜಿಲ್ಲೆಯ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ 1,630 ದೇವಾಲಯಗಳ ಪೈಕಿ 1,324 ದೇವಸ್ಥಾನಗಳ ಸರ್ವೆ ದಾಖಲೆಗಳನ್ನು ತಯಾರಿಸಲಾಗಿರುತ್ತದೆ. ಘತ್ತರಗಾ ಶ್ರೀ ಭಾಗ್ಯವಂತಿ ದೇವಿ ದೇವಸ್ಥಾನದ ಅಭಿವೃದ್ಧಿಗೂ ಡಿ.ಪಿ.ಆರ್ ತಯಾರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದ ಜಿಲ್ಲಾಧಿಕಾರಿಗಳು, ಶ್ರೀ ದತ್ತಾತ್ರೇಯ ದೇವಸ್ಥಾನದ ಸಮಗ್ರ ಅಭಿವೃದ್ಧಿ, ಸ್ವಚ್ಛತೆ ಹಾಗೂ ದೇವಸ್ಥಾನಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ಹಲವಾರು ಕಾರ್ಯಕ್ರಮವನ್ನು ರೂಪಿಸಿದ್ದು, ಭಕ್ತಗಣ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನದಲ್ಲಿ ಸುಕ್ಷೇತ್ರದಲ್ಲಿ ಇನ್ನು ಹೆಚ್ಚಿನ ಮೂಲಸೌಕರ್ಯಗಳನ್ನು ಸರ್ಕಾರ ಒದಗಿಸಲಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.