Datta Peetha: ಬಾಬಾಬುಡನ್​ಗಿರಿ ದತ್ತಪೀಠ ಪೂಜಾ ವಿಧಾನ, ಯಥಾಸ್ಥಿತಿ ಕಾಪಾಡುವಂತೆ ಹೈಕೋರ್ಟ್​ ಸೂಚನೆ

ಚಿಕ್ಕಮಗಳೂರು ತಾಲ್ಲೂಕಿನ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿರುವ ಶ್ರೀಗುರು ದತ್ತಾತ್ರೇಯ ಬಾಬಾ ಬುಡನ್‌ ಸ್ವಾಮಿ ದರ್ಗಾದ ಪೂಜಾ ವಿಧಾನದಲ್ಲಿ ಯಾವುದೇ ಬದಲಾವಣೆ ಮಾಡಬಾರದು. ಯಥಾಸ್ಥಿತಿ ಕಾಪಾಡಿಕೊಳ್ಳಬೇಕು ಎಂದು ಕರ್ನಾಟಕ ಹೈಕೋರ್ಟ್​ ಆದೇಶ ಹೊರಡಿಸಿದೆ.

Datta Peetha: ಬಾಬಾಬುಡನ್​ಗಿರಿ ದತ್ತಪೀಠ ಪೂಜಾ ವಿಧಾನ, ಯಥಾಸ್ಥಿತಿ ಕಾಪಾಡುವಂತೆ ಹೈಕೋರ್ಟ್​ ಸೂಚನೆ
ಚಿಕ್ಕಮಗಳೂರಿನ ಬಾಬಾಬುಡನ್​ಗಿರಿಯಲ್ಲಿರುವ ಇನಾಂ ದತ್ತಾತ್ರೇಯ ಪೀಠ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Oct 11, 2022 | 4:27 PM

ಬೆಂಗಳೂರು: ಚಿಕ್ಕಮಗಳೂರು ತಾಲ್ಲೂಕಿನ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿರುವ ಶ್ರೀಗುರು ದತ್ತಾತ್ರೇಯ ಬಾಬಾ ಬುಡನ್‌ ಸ್ವಾಮಿ ದರ್ಗಾದ ಪೂಜಾ ವಿಧಾನದಲ್ಲಿ (Bababudangiri Inam Datta Peetha) ಯಾವುದೇ ಬದಲಾವಣೆ ಮಾಡಬಾರದು. ಯಥಾಸ್ಥಿತಿ ಕಾಪಾಡಿಕೊಳ್ಳಬೇಕು ಎಂದು ಕರ್ನಾಟಕ ಹೈಕೋರ್ಟ್​ (Karnataka High Court) ಆದೇಶ ಹೊರಡಿಸಿದೆ. ವಿಚಾರಣೆಯನ್ನು 3 ವಾರಗಳಕಾಲ ಮುಂದೂಡಿದೆ. ‘ಈ ಸಂಬಂಧ ಸರ್ಕಾರವು ಜುಲೈ 19ರಂದು ಸಂಪುಟದ ಉಪಸಮಿತಿ ಶಿಫಾರಸಿನಂತೆ ಕ್ರಮ ಕೈಗೊಂಡಿತ್ತು. ಎರಡೂ ಧರ್ಮದ ಸಂಪ್ರದಾಯಗಳ ಪ್ರಕಾರ ಪೂಜಾವಿಧಿ ನಡೆಸಲು ಮುಜಾವರ್ ಹಾಗೂ ಅರ್ಚಕರಿಗೆ ಅವಕಾಶ ನೀಡಲಾಗಿದೆ’ ಎಂದು ಸಂಪುಟದಲ್ಲಿ ನಿರ್ಧರಿಸಲಾಗಿತ್ತು.

ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸೈಯದ್ ಗೌಸ್ ಮೊಹಿಯುದ್ದೀನ್ ಶಾಖಾದ್ರಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಾಲಯವು ವಾದಗಳನ್ನು ಆಲಿಸಿತು. ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್, ಪ್ರಭುಲಿಂಗ್ ಕೆ.ನಾವದಗಿ, ವಾದ ಮಂಡಿಸಿದರು. ಅರ್ಜಿದಾರರ ಆಕ್ಷೇಪಣೆ ಪ್ರತಿಯನ್ನು ಸರ್ಕಾರಿ ವಕೀಲರಿಗೆ ನೀಡಲು ಸೂಚನೆ ನೀಡಿತು.

ಸರ್ಕಾರದ ಸೂಚನೆ ಏನು?

ಶ್ರೀಗುರು ದತ್ತಾತ್ರೇಯ ಬಾಬಾ ಬುಡನ್‌ ಸ್ವಾಮಿ ದರ್ಗಾದಲ್ಲಿ ಧಾರ್ಮಿಕ ವಿಧಿಗಳನ್ನು ನೆರವೇರಿಸಲು ಮುಜಾವರ್‌ ಜತೆ ಆಗಮ ಗೊತ್ತಿರುವ ಹಿಂದೂ ಅರ್ಚಕರನ್ನು ನೇಮಿಸಲು ಸರ್ಕಾರ ತೀರ್ಮಾನಿಸಿತ್ತು. ಈ ಸಂಬಂಧ ಕಳೆದ ಆಗಸ್ಟ್ 19ರಂದು ಸುತ್ತೋಲೆ ಹೊರಡಿಸಿದ್ದ ಸರ್ಕಾರವು, ಹಿಂದೂ ಮತ್ತು ಮುಸ್ಲಿಂ ಧರ್ಮಗಳ ಪ್ರತಿನಿಧಿಗಳು ಇರುವ ವ್ಯವಸ್ಥಾಪನಾ ಸಮಿತಿ ರಚಿಸಬೇಕು. ಅರ್ಚಕ ಮತ್ತು ಮುಜಾವರ್‌ ಅವರನ್ನು ಈ ವ್ಯವಸ್ಥಾಪನಾ ಸಮಿತಿಯಿಂದಲೇ ನೇಮಿಸಬೇಕು ಎಂದು ಹೇಳಿತ್ತು.

ಇನಾಂ ದತ್ತಪೀಠದ ಗುಹೆಯ ಒಳಗೆ ನಂದಾದೀಪ ಬೆಳಗಿಸುವುದು. ದತ್ತಾತ್ರೇಯ ಪೀಠ, ಪಾದುಕೆಗಳಿಗೆ ಹೂ ಸಮರ್ಪಿಸಿ ನಿತ್ಯದ ಧಾರ್ಮಿಕ ವಿಧಿವಿಧಾನ ನಿರ್ವಹಿಸಬೇಕು. ಇದಕ್ಕಾಗಿ ಆಗಮ ಶಾಸ್ತ್ರದಲ್ಲಿ ಉತ್ತೀರ್ಣರಾದ ಅರ್ಹ ಹಿಂದೂ ಅರ್ಚಕರನ್ನು ವ್ಯವಸ್ಥಾಪನಾ ಸಮಿತಿ ನೇಮಿಸಬೇಕು ಎಂದು ಹೇಳಿತ್ತು. ಇದೇ ಸಮಿತಿಯು ಮುಸ್ಲಿಂ ಧಾರ್ಮಿಕ ವಿಧಿಗಳನ್ನು ಬಲ್ಲ ಮುಜಾವರ್ ಅವರನ್ನೂ ಪೀಠದ ಕೈಂಕರ್ಯಕ್ಕೆ ನೇಮಿಸಬೇಕು. ಮುಜಾವರ್ ಅವರು ಪ್ರತಿ ಸೋಮವಾರ ಮತ್ತು ಗುರುವಾರದ ನಮಾಜ್‌ ನಂತರ ಹಾಗೂ ಪ್ರತಿದಿನ ಸಂಜೆ ದರ್ಗಾದಲ್ಲಿ ಲೋಬಾನ ಹಾಕಿ, ಫಾತೇಹ್ ಅರ್ಪಿಸಬೇಕು ಎಂದು ಸರ್ಕಾರದ ಸುತ್ತೋಲೆಯು ಸೂಚಿಸಿತ್ತು.

ದತ್ತ ಮಾಲಾ, ದತ್ತ ಜಯಂತಿ ಮತ್ತು ಇತರ ವಿಶೇಷ ಹಿಂದೂ ಧಾರ್ಮಿಕ ಆಚರಣೆಗಳನ್ನು ಸುಗಮವಾಗಿ ನೆರವೇರಿಸಲು ವ್ಯವಸ್ಥಾಪನಾ ಸಮಿತಿಯು ಕ್ರಮ ಕೈಗೊಳ್ಳಬೇಕು. ಅರ್ಚಕರು, ಮಠಗಳ ಪೀಠಾಧಿಪತಿಗಳು ಅಥವಾ ಗುರುಗಳನ್ನು ಗುಹೆಯ ಒಳಗೆ ಕರೆದೊಯ್ದು ಪಾದುಕೆಗಳಿಗೆ ಗೌರವ ಸಲ್ಲಿಸಲು ಅವಕಾಶ ಮಾಡಿಕೊಡಬೇಕು. ಪ್ರತಿ ವರ್ಷ ಹೋಳಿ ಹುಣ್ಣಿಮೆಯ ಮರುದಿನದಿಂದ ಮೂರು ದಿನಗಳ ಕಾಲ ಉರುಸ್‌ ನಡೆಸುವ ಜವಾಬ್ದಾರಿಯನ್ನೂ ವ್ಯವಸ್ಥಾಪನಾ ಸಮಿತಿಯೇ ನಿರ್ವಹಿಸಬೇಕು ಎಂದು ಸೂಚಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:31 pm, Tue, 11 October 22