
ಕಲಬುರಗಿ, (ಜೂನ್ 26): ಕಲಬುರಗಿಯ ಹೊರವಲಯದ ಪಟ್ಟಣ ಗ್ರಾಮದ ಬಳಿಯ ಡ್ರೈವರ್ ಡಾಬಾದಲ್ಲಿ ನಡೆದ ತ್ರಿಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕೊಲೆಯಾದ ಕೆಲವೇ ಗಂಟೆಗಳಲ್ಲಿ ಕಲಬುರಗಿ ಪೊಲೀಸರು, ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಪಟ್ಟಣ ಗ್ರಾಮದ ನಾಗರಾಜ ತಂದೆ ಶಿವಪುತ್ರ ತಾಳಿಕೋಟಿ (23), ಈರಣ್ಣ ತಂದೆ ಶಿವಪುತ್ರ ತಾಳಿಕೋಟಿ(27), ಭೀರಣ್ಯ ತಂದೆ ಲಕ್ಷ್ಮಣ ಪೂಜಾರಿ (21), ಸಿದ್ದರೂಡ ತಂದೆ ಕಲ್ಯಾಣ ಹತಗುಂದಿ (22), ನಾಗರಾಜ ತಂದೆ ಶಶಿದರ ಬಿಸಗೊಂಡ(17), ತಂಬಾಕವಾಡಿ ಗ್ರಾಮದ ಪೀರೇಶ ತಂದೆ ಅಂಬಾರಾಯ ಹಡಪದ(35), ಪಟ್ಟಣ ಗ್ರಾಮದ ಸಾಗರ ತಂದೆ ಲಕ್ಷ್ಮಿಕಾಂತ ಪಾಟೀಲ (24), ರಾಚಣ್ಯ ಅಲಿಯಾಸ್ ಗಿಲ್ಲಿ ತಂದೆ ಬಸವರಾಜ ಮಾಲಿ ಪಾಟೀಲ(22), ಚಂದ್ರಕಾಂತ ತಂದೆ ಶಾಂತಪ್ಪ ಪೂಜಾರಿ(30), ಭಾಗ್ಯಶ್ರೀ ಗಂಡ ಸೋಮನಾಥ ತಾಳಿಕೋಟಿ (30) ಎನ್ನುವರು ಬಂಧಿಸಿದ್ದು, ವಿಚಾರನೆ ವೇಳೆ ಆರೋಪಿಗಳು ಕೊಲೆಗೆ ಕಾರಣ ಬಾಯ್ಬಿಟ್ಟಿದ್ದಾರೆ. ಕೊಲೆಯ ಅಸಲಿ ಕಥೆ ಬಯಲು ಮಾಡಿದ್ದಾರೆ. ಕಳೆದ ವರ್ಷ ಕೊಲೆಯಾದ ರೌಡಿ ಶೀಟರ್ ಸೋಮನ ಪತ್ನಿಯ ಶಪಥವೇ ಕೊಲೆಗೆ ಕಾರಣ ಎನ್ನುವುದು ಗೊತ್ತಾಗಿದೆ.ಗಂಡನ ಕೊಲೆಗೆ ಪ್ರತಿಕಾರ ತೆಗೆದುಕೊಳ್ಳುವವರೆಗೂ ತನ್ನ ಕೊರಳಲ್ಲಿದ್ದ ಮಾಂಗಲ್ಯ ಸೂತ್ರ ತೆಗೆಯುವದಿಲ್ಲ ಎಂದು ಗಂಡನ ಶವದ ಮುಂದೆ ಶಪಥ ಮಾಡಿದ್ದಳಂತೆ. ಆಕೆಯ ಶಪಥವೇ ತ್ರಿವಳಿ ಕೊಲೆಗೆ ಮುಖ್ಯ ಕಾರಣ ಎಂದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ.
ಕಳೆದ ವರ್ಷ ನವೆಂಬರ್ 12 ರಂದು ನಡೆದ ರೌಡಿಶೀಟರ್ ಸೋಮನ ಕೊಲೆಯಾಗಿತ್ತು. ನಿನ್ನೆ ಕೊಲೆಯಾಗಿರೋ ಇದೇ ಸಿದ್ದಾರೂಢ ಹಾಗೂ ಕುಟುಂಬಸ್ಥರು ಸೋಮನನ್ನ ಬರ್ಬರವಾಗಿ ಹತ್ಯೆ ಮಾಡಿದ್ದರು. ಸೋಮು ಕೊಲೆ ಬಳಿಕ ಆತನ ಪತ್ನಿ ಭಾಗ್ಯಶ್ರೀ, ತನ್ನ ಗಂಡನ ಶವದ ಮುಂದೆ ಒಂದು ಶಪಥ ಮಾಡಿದ್ದಳಂತೆ. ಗಂಡನ ಕೊಲೆಗೆ ಪ್ರತೀಕಾರ ತಿರುವ ತನಕ ತನ್ನ ಕೊರಳಿನಲ್ಲಿನ ಮಾಂಗಲ್ಯ ಸೂತ್ರ ತೆಗೆಯೋದಿಲ್ಲ ಎಂದು ಆಣೆ ಮಾಡಿದ್ದಳಂತೆ. ಭಾಗ್ಯಶ್ರೀಯ ಈ ಶಪಥದಿಂದಲೇ ಕೊಲೆಯಾದ ಸೋಮನ ಸಹೋದರ ಈರಣ್ಣ , ನಾಗಾರಾಜ್ ಮತ್ತು ಗ್ಯಾಂಗ್ ತನ್ನ ತಮ್ಮ ಸೋಮನ ಕೊಲೆ ಆರೋಪಿಗಳ ಬೇಲ್ ಗಾಗಿ ಕಾಯುತ್ತಿದ್ದರು.
ಯಾವಾಗ ಕೊಲೆ ಪ್ರಕರಣದ ಆರೋಪಿ ಸಿದ್ದಾರೂಢ ತುಗದಿ,ಜಗದೀಶ್ ಹಾಗೂ ಅಣ್ಣಪ್ಪ ಬೇಲ್ ಮೇಲೆ ಬಂದ್ರೋ ಅಂದಿನಿಂದ ಪ್ರತೀಕಾರಕ್ಕೆ ಸೋಮನ ಸಹೋದರರು ಕಾಯುತ್ತಿದ್ದರು.ಅದರಂತೆ ನಿನ್ನೆ (ಜೂನ್ 24) ಅಂದ್ರೆ ಮಂಗಳವಾರ ಮಧ್ಯರಾತ್ರಿ ತನ್ನದೇ ಡಾಬಾದಲ್ಲಿದ್ದ ಸಿದ್ದಾರೂಢ,ಜಗದೀಶ್ ಮತ್ತು ಅಣ್ಣಪ್ಪ ಇರುವ ಮಾಹಿತಿ ಪಡೆದುಕೊಂಡು ಹೋಗಿದ್ದಾರೆ. ಹೋಗಿದ್ದೇ ತಡ ಸಿದ್ದಾರೂಢ ಹಾಗು ಜಗದೀಶ್ ಕೆಲಸಗಾರ ರಾಮುನನ್ನ ಹಂತಕರು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಈ ಮೂಲಕ ಭಾಗ್ಯಶ್ರೀಯ ಶಪಥದಿಂದಲೇ ತ್ರಿವಳಿ ಕೊಲೆ ನಡೆದಿರುವದು ಪೊಲೀಸರ ತನಿಖೆ ವೇಳೆ ಪತ್ತೆಯಾಗಿದೆ.
ಇನ್ನೂ ಈ ತ್ರಿವಳಿ ಕೊಲೆಯ ವಿಚಾರಣೆ ವೇಳೆ ಮತ್ತೊಂದು ಇಂಟ್ರಸ್ಟಿಂಗ್ ಪ್ರಕರಣ ಬೆಳಕಿಗೆ ಬಂದಿದೆ.ಡಾಬಾದಲ್ಲಿ ಕೊಲೆಯಾಗಿರುವ ವಿಚಾರ ತಿಳಿಯುತ್ತಿದ್ದ ಹಾಗೆ ಸ್ಥಳಕ್ಕೆ ಬಂದ ಪೊಲೀಸರಿಗೆ ಡಬಲ್ ಮರ್ಡರ್ ಆಗಿರುವ ಬಗ್ಗೆ ಗೋತ್ತಾಗಿದೆ..ಪೊಲೀಸರು ಕೂಡ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಡಬಲ್ ಮರ್ಡರ್ ಆಗಿದೆ ಅಂತಾನೇ ಮಾಹಿತಿ ಕೊಟ್ಟಿದ್ದಾರೆ. ಬಳಿಕ ಡಬಲ್ ಮರ್ಡರ್ ಕೊಲೆ ಪ್ರಕರಣ ಸಂಬಂಧ ಸ್ಥಳಕ್ಕೆ ಬಂದ ಡಾಗ್ ಸ್ಕ್ವಾಡ್ ಅಲ್ಲಿನ ರಕ್ತದ ಕಲೆಗಳ ಜಾಡು ಹಿಡಿದು ಡಾಬಾದ ಹಿಂದಿರುವ ಹೊಲದಲ್ಲಿ ಓಡಿ ಹೋಗಿದೆ. ಆಗ ಹೊಲದಲ್ಲಿ ಮತ್ತೊಂದು ವ್ಯಕ್ತಿಯ ಅಂದ್ರೆ ಡಾಬಾದಲ್ಲಿ ಕೆಲಸ ಮಾಡ್ತಿರುವ ರಾಮಚಂದ್ರನ ಕೊಲೆಯಾಗಿರುವ ವಿಚಾರ ಗೋತ್ತಾಗಿದೆ. ಆ ಬಳಿಕ ಡಬಲ್ ಮರ್ಡರ್ ಕೊಲೆ ಪ್ರಕರಣ ತ್ರಿಬಲ್ ಮರ್ಡರ್ ಕೊಲೆಯಾಗಿ ಕನ್ವರ್ಟ್ ಆಗಿದೆ.
ದುರಂತ ಅಂದ್ರೆ ಹಂತಕರ ಟಾರ್ಗೆಟ್ ಆಗಿರೋದು ರಾಮಚಂದ್ರ ಅಲ್ಲ ಬದಲಿಗೆ ಅಣ್ಣಾರಾಯ ತುಗದಿ ಆಗಿದ್ದ. ಆದ್ರೆ ಅಮವಾಸ್ಯೆ ಕತ್ತಲಲ್ಲಿ ಹಂತಕರ ಕೈಯಿಂದ ತಪ್ಪಿಸಿಕೊಂಡು ಹೊಲದಲ್ಲಿ ಓಡಿ ಹೋಗುತ್ತಿದ್ದ ಅಣ್ಣಾರಾಯ ಮತ್ತು ರಾಮಚಂದ್ರರನ್ನ ಹಂತಕರು ಬೆನ್ನಟ್ಟಿದ್ದಾರೆ. ಆಗ ಕತ್ತಲಲ್ಲಿ ರಾಮಚಂದ್ರನನ್ನೇ ಅಣ್ಣಾರಾಯ ಅಂದುಕೊಂಡು ಹಂತಕರು ಮನಸೋ ಇಚ್ಚೆ ಮಚ್ಚು ಬಿಸಿ ಕೊಲೆ ಮಾಡಿ ಕ್ಷಣಾರ್ಧದಲ್ಲಿ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.
ಸದ್ಯ ಭಾಗ್ಯಶ್ರೀಯ ಮಾಂಗಲ್ಯ ಶಪಥವೇ ಇದೀಗ ಇಬ್ಬರು ಮಹಿಳೆಯರ ಮಾಂಗಲ್ಯ ಕಿತ್ತಿಕೊಂಡಿರುವದು ನಿಜಕ್ಕೂ ದುರಂತವೇ ಸರಿ. ಇನ್ನೂ ತ್ರಿಬಲ್ ಮರ್ಡರ್ ಕೊಲೆ ಪ್ರಕರಣ ಸಂಬಂಧ ಸದ್ಯ 10 ಜನ ಆರೋಪಿಗಳನ್ನ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಪ್ರಕರಣದ ಇನ್ನುಳಿದ ಆರೋಪಿಗಳಿಗಾಗಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.
Published On - 9:17 pm, Thu, 26 June 25