ಸಿದ್ದರಾಮಯ್ಯ (ಎಡಚಿತ್ರ) ಮಲ್ಲಿಕಾರ್ಜುನ್ ಖರ್ಗೆ (ಬಲಚಿತ್ರ)
ಕಲಬುರಗಿ: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಇಂದು (ಜು.07) ಮಂಡಿಸಿದ 2023-24ನೇ ಸಾಲಿನ ಬಜೆಟ್ (Budget) ಮೇಲೆ ಕಲಬುರಗಿ ಜನರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರ ತವರು ಜಿಲ್ಲೆಗೆ ಬಂಪರ್ ಕೊಡುಗೆಗಳು ಸಿಗಬಹುದು ಅನ್ನೋ ಆಶಾಭಾವ ಹೊಂದಿದ್ದರು. ಆದರೆ ಕಲಬುರಗಿ ಜನರಿಗೆ ಇಂದಿನ ಬಜೆಟ್ ಸ್ಪಲ್ಪ ಸಿಹಿ ಸ್ವಲ್ಪ ಕಹಿಯಾಗಿದೆ.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (KKRDB) ಗೆ 5000 ಸಾವಿರ ಕೋಟಿ ರೂ.
- ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಐದು ಸಾವಿರ ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೊಳ್ಳೋದಾಗಿ ಬಜೆಟ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ. ಈ ಹಿಂದೆ ಮಂಡಳಿಗೆ ಬಿಜೆಪಿ ಸರ್ಕಾರ ಮೂರು ಸಾವಿರ ಕೋಟಿ ನೀಡಿತ್ತು. ಕಾಂಗ್ರೆಸ್ ನಾಯಕರು ಚುನಾವಣೆ ಪೂರ್ವದಲ್ಲಿಯೇ ತಮ್ಮ ಸರ್ಕಾರ ಬಂದರೇ ಮಂಡಳಿಗೆ ಐದು ಸಾವಿರ ಕೋಟಿ ಹಣ ನೀಡುವುದಾಗಿ ಹೇಳಿದ್ದರು. ಅದರಂತೆ ಮಂಡಳಿಗೆ ಐದು ಸಾವಿರ ಕೋಟಿ ಹಣ ನೀಡಲಾಗಿದೆ.
- ಕಲಬುರಗಿ ನಗರದ ಜಿಮ್ಸ್ ಆಸ್ಪತ್ರೆಯಲ್ಲಿ 200 ಹಾಸಿಗೆಯ ಹೊಸ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ 70 ಕೋಟಿ ಅನುದಾನ.
- ಕಲಬುರಗಿ ಮತ್ತು ಮೈಸೂರು ಟ್ರಾಮಾ ಕೇರ್ ಸೆಂಟರ್ ಕಾರ್ಯಾಚರಣೆಗೆ 30 ಕೋಟಿ ರೂ. ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದಿಂದ ಅತ್ಯಾಧುನಿಕ ಕೌಶಲ್ಯ ಪ್ರಯೋಗಾಲಯ, ಸಂಶೋಧನಾ ಕೇಂದ್ರ ಹೊಂದಿರುವ ಅಲೈಡ್ಹೆಲ್ತ್ ಸೈನ್ಸಸ್ ಕಾಲೇಜು ಸ್ಥಾಪನೆ.
- ಕಲಬುರಗಿ, ಮೈಸೂರು, ಬೆಳಗಾವಿಯಲ್ಲಿ ಸೂಪರ್ ಸ್ಪೆಷಾಲಟಿ ಆಸ್ಪತ್ರೆ ಕಾರ್ಯಾರಂಭ ಮತ್ತು ಸುಟ್ಟ ಗಾಯಗಳ ಘಟಕ ಸ್ಥಾಪನೆಗೆ 155 ಕೋಟಿ ಹಣ ಮಂಜೂರು. ಕಿದ್ವಾಯಿ ಆಸ್ಪತ್ರೆ ಕಲಬುರಗಿ ಕೇಂದ್ರದ ಸೌಲಭ್ಯಗಳ ಸುಧಾರಣೆಗೆ ಇಪ್ಪತ್ತು ಕೋಟಿ ರೂ. ಹಣ ಜಾರಿ ಮಾಡಲಾಗಿದೆ.
- ಕಲಬುರಗಿ, ರಾಮನಗರ, ಬೆಳಗಾವಿಯಲ್ಲಿ ಅಲ್ಪಸಂಖ್ಯಾತ ಯುವ ಜನರಿಗೆ ಕೌಶಲ್ಯ ತರಬೇತಿ ಕೇಂದ್ರಗಳನ್ನು ನಾಲ್ಕು ಕೋಟಿ ವೆಚ್ಚದಲ್ಲಿ ಆರಂಭಕ್ಕೆ ಹಣ ಹಂಚಿಕೆ ಮಾಡಲಾಗಿದೆ. ಗುರುದ್ವಾಗಳ ಅಭಿವೃದ್ದಿಗೆ ಐದು ಕೋಟಿ ರೂ. ಅನುದಾನ. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 400 ಸಮುದಾಯ ಶೌಚಾಲಯ ಸಂಕೀರ್ಣಗಳನ್ನು ತಲಾ 25 ಲಕ್ಷ ವೆಚ್ಚದಲ್ಲಿ ನಿರ್ಮಾಣಕ್ಕೆ 100 ಕೋಟಿ ರೂ. ನೀಡಲಾಗಿದೆ.
- ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಸ್ಥಳೀಯ ಆಡಳಿತ ಬಲಪಡಿಸಲು ಪ್ರತಿ ತಾಲೂಕಿಗೆ ಒಬ್ಬ ನುರಿತ ಯುವ ಪದವೀಧರರನ್ನು 24 ತಿಂಗಳ ಅವದಿಗೆ ನೇಮಕ ಮಾಡಲಾಗುವುದು. ಈ ಕಾರ್ಯಕ್ರಮಕ್ಕೆ 10 ಕೋಟಿ ಹಣ ನಿಗದಿಪಡಿಸಲಾಗಿದೆ.
- ಸಣ್ಣ ಕೈಗಾರಿಕೆಗಳನ್ನು ಪ್ರೋತ್ಸಾಹಿಸಲು KSSIDC ವತಿಯಿಂದ ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಕೈಗಾರಿಕಾ ವಸಾಹತ್ತುಗಳನ್ನು ಹಂತಹಂತವಾಗಿ ಸ್ಥಾಪಿಸಲಾಗುವುದು. ಕಲಬುರಗಿಯ ಪ್ರವಾಸಿತಾಣಗಳಾದ ಗಾಣಗಾಪುರ, ಸನ್ನತ್ತಿ, ಮಳಖೇಡ, ಕಲಬುರಗಿ ಕೋಟೆಗಳ ಸಮಗ್ರ ಅಭಿವೃದ್ದಿಗೆ 75 ಕೋಟಿ ಹಣ ಒದಿಗಸಲಾಗಿದೆ.
ಇದನ್ನೂ ಓದಿ: ಮದ್ಯ ಪ್ರಿಯರಿಗೆ ಬಿಗ್ ಶಾಕ್, ಕರ್ನಾಟಕದಲ್ಲಿ ಅಬಕಾರಿ ತೆರಿಗೆ ಹೆಚ್ಚಳ
ತೊಗರಿಗೆ ಸಿಗದ ಪ್ರೋತ್ಸಾಹ
ಇನ್ನು ತೊಗರಿ ಮಂಡಳಿ ಬಲವರ್ಧನೆ ಸೇರಿದಂತೆ ತೊಗರಿ ಬೋರ್ಡ್ಗೆ ಹೆಚ್ಚಿನ ಅನುಧಾನ ನೀಡಬೇಕು ಅನ್ನೋ ಆಗ್ರಹಕ್ಕೆ ಯಾವುದೇ ಬೆಲೆ ಸಿಕ್ಕಿಲ್ಲ. ಕಲಬುರಗಿ ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಹಣ ಸಿಗುವ ನಿರೀಕ್ಷೆ ಕೂಡಾ ಹುಸಿಯಾಗಿದೆ. ಬಜೆಟ್ನಲ್ಲಿ ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಸಿದ್ದರಾಮಯ್ಯ ಸರ್ಕಾರ ಇನ್ನು ಹೆಚ್ಚಿನ ಕೊಡುಗೆ ಕೊಡುತ್ತೆ ಅಂತ ನಿರೀಕ್ಷೆ ಇತ್ತು. ಆದರೆ ಕೆಲ ನಿರೀಕ್ಷೆಗಳು ನಿರೀಕ್ಷೆಗಳಾಗಿಯೇ ಉಳದಿವೆ. ಮುಂದಿನ ದಿನದಲ್ಲಿ ಆದರೂ ಈ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಹಣ ನೀಡಬೇಕು ಅಂತಾರೆ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಒತ್ತಾಯಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ