ಕಲಬುರಗಿ, ಮಾ.24: ವಿಪಕ್ಷ ನಾಯಕ ಆರ್.ಅಶೋಕ (R Ashoka) ಅವರು ತಮ್ಮ ಹಣೆಗೆ ಕುಂಕುಮ ಹಾಕಲು ನಿರಾಕರಿಸಿದ ಘಟನೆ ನಡೆದಿದೆ. ಕಲಬುರಗಿ (Kalaburagi) ಜಿಲ್ಲೆಯ ಚಿಂಚೋಳಿ ತಾಲೂಕಿನ ಸುಲೆಪೇಟ್ ಬಿಜೆಪಿ ಕಚೇರಿಗೆ ಭೇಟಿ ನೀಡಿದಾಗ ಹಿರಿಯ ಮುಖಂಡರೊಬ್ಬರು ಕುಂಕುಮ ಹಚ್ಚಲು ಮುಂದಾದಾಗ ನಿರಾಕರಿಸಿದ್ದಾರೆ. ಸಿದ್ದರಾಮಯ್ಯ (Siddaramaiah) ಹಿಂದೂ ವಿರೋಧಿ, ಕೇಸರಿ ಕಂಡರೆ ಆಗಲ್ಲ, ಕೇಸರಿ ಶಲ್ಯ ಧರಿಸಲ್ಲ, ಕುಂಕುಮ ಹಾಕಲ್ಲ ಎಂದೆಲ್ಲಾ ಟೀಕಿಸುವ ರಾಜ್ಯದ ಬಿಜೆಪಿ ನಾಯಕರು ತಮ್ಮ ನಾಯಕನ ಈ ನಡೆಗೆ ಏನು ಹೇಳುತ್ತಾರೆ?
ಈ ಹಿಂದೆ ಸದನದಲ್ಲಿ ತಮ್ಮನ್ನು ಹೊಗಳುವ ಭರದಲ್ಲಿ ಬಿಜೆಪಿಯನ್ನು ಬೆಂಬಲಿಸುವ ಬಜರಂಗದಳದ ಕಾರ್ಯಕರ್ತರ ವಿರುದ್ಧ “ನಾನು ಗೃಹಸಚಿವ ಆಗಿದ್ದಾಗ ಪಬ್‌ನಲ್ಲಿ ಗಲಾಟೆ ಆದಾಗ ಗೂಂಡಾ ಕಾಯ್ದೆ ಹಾಕಿದ್ದೆ” ಎಂದು ಹೇಳಿದ್ದರು. ಆ ಮೂಲಕ ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತಿದ್ದ ಅವರು ಬಜರಂಗದಳ ಕಾರ್ಯಕರ್ತರ ಕ್ಷಮೆ ಕೇಳಿದ್ದರು. ಇದೀಗ ಕುಂಕುಮ ಹಣೆಗೆ ಇಡಲು ನಿರಾಕರಿಸಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: ಭುಗಿಲೆದ್ದ ಆಕ್ರೋಶ: ಕೊನೆಗೂ ಬಜರಂಗದಳ ಕಾರ್ಯಕರ್ತರಲ್ಲಿ ಕ್ಷಮೆಯಾಚಿಸಿದ ಅಶೋಕ್!
ಕಚೇರಿಗೆ ಆಗಮಿಸಿದ ಅಶೋಕ್ ಅವರಿಗೆ ಬಿಜೆಪಿ ಮುಖಂಡರು ಹಾರ ಹಾಕಿ ಸ್ವಾಗತಿಸಲು ಮುಂದಾದರು. ಈ ವೇಳೆ ಎರಡು ಹಾರಗಳನ್ನು ತಾವು ಹಾಕಿಕೊಳ್ಳದೆ ಬಿಜೆಪಿ ಹಿರಿಯ ಮುಖಂಡ ಡಾ ವಿಶ್ವನಾಥ್ ಪವಾರ್ ಮತ್ತು ಇನ್ನೊಬ್ಬರಿಗೆ ಹಾಕಿ ಗೌರವಿಸಿದರು. ಈ ನಡುವೆ ಡಾ ವಿಶ್ವನಾಥ್ ಪವಾರ್ ಅವರು ಅಶೋಕ ಅವರ ಹಣೆಗೆ ಕುಂಕುಮ ಇಡಲು ಮುಂದಾಗಿದ್ದಾರೆ. ಆದರೆ ಅಶೋಕ ಅವರು ಕುಂಕುಮ ಹಚ್ಚದಂತೆ ತಡೆದಿದ್ದಾರೆ. ಬಳಿಕ ವಿಶ್ವನಾಥ್ ಶಾಲು ಹಾಕಿ ಸನ್ಮಾನಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:23 pm, Sun, 24 March 24