ಕಲಬುರಗಿ, ಅಕ್ಟೋಬರ್ 30: ಕರ್ನಾಟಕದಾದ್ಯಂತ ತೀವ್ರ ಸದ್ದು ಮಾಡುತ್ತಿರುವ ವಕ್ಫ್ ಬೋರ್ಡ್ ಆಸ್ತಿ ವಿಚಾರ ಇದೀಗ ಕಲಬರಗಿ ಜಿಲ್ಲೆಗೂ ಕಾಲಿಟ್ಟಿದೆ. ಒಂದೆಡೆ, ವಿಜಯಪುರದಲ್ಲಿ ರೈತರು ಹಾಗೂ ಪ್ರತಿಪಕ್ಷಗಳಿಂದ ಪ್ರತಿಭಟನೆ ನಡೆಯುತ್ತಿದೆ. ಮತ್ತೊಂದೆಡೆ, ಧಾರವಾಡದ ಅನೇಕ ರೈತರಿಗೂ ಸೋಮವಾರ ನೋಟಿಸ್ ನೀಡಲಾಗಿತ್ತು. ಇದೀಗ ಸಚಿವ ಪ್ರಿಯಾಂಕ್ ಖರ್ಗೆ ತವರು ಕಲಬುರಗಿಯಲ್ಲೂ ಸಮಸ್ಯೆ ಎದುರಾಗಿದೆ. ಜಿಲ್ಲೆಯ ಚಿಂಚೋಳಿ ತಾಲೂಕಿನ 45ಕ್ಕೂ ಹೆಚ್ಚು ರೈತರಿಗೆ ವಕ್ಫ್ ಮಂಡಳಿಯಿಂದ ನೋಟಿಸ್ ಬಂದಿದೆ.
ಚಿಂಚೋಳಿ ತಾಲೂಕಿನ 45ಕ್ಕೂ ಹೆಚ್ಚು ರೈತರಿಗೆ ತಹಶೀಲ್ದಾರರು ನೋಟಿಸ್ ನೀಡಿದ್ದು, ರೈತರ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು ನಮೂದು ಆಗಿದೆ ಎನ್ನಲಾಗಿದೆ. ನೋಟಿಸ್ ನೋಡಿ ರೈತರು ಕಂಗಾಲಾಗಿದ್ದಾರೆ.
ಚಿಂಚೋಳಿ ಪಟ್ಟಣದ ಮಹಾಂತೇಶ್ವರ ಮಠಕ್ಕೂ ನೋಟಿಸ್ ಜಾರಿ ಮಾಡಲಾಗಿದೆ. ಮಠದ 10×7 ಜಾಗ ತಮ್ಮದೆಂದು ವಕ್ಫ್ ಬೋರ್ಡ್ ನೋಟಿಸ್ನಲ್ಲಿ ಪ್ರತಿಪಾದಿಸಲಾಗಿದೆ. ಇದರಿಂದಾಗಿ ಲಕ್ಷಾಂತರ ರೂ. ಕೊಟ್ಟು ಜಮೀನು ಖರೀದಿ ಮಾಡಿದವರಿಗೂ ಸಂಕಷ್ಟ ಎದುರಾಗಿದೆ.
ಮೊದಲೇ ವಕ್ಫ್ ಹೆಸರು ಇದ್ದಿದ್ದರೆ ಜಮೀನು ಖರೀದಿಸುತ್ತಿರಲಿಲ್ಲ. ನಾವು ಕಷ್ಟ ಪಟ್ಟು ಜಮೀನನ್ನು ಖರೀದಿ ಮಾಡಿದ್ದೇವೆ. ಈಗ ವಕ್ಫ್ ಬೋರ್ಡ್ ಹೆಸರು ನಮ್ಮ ಪಹಣಿಯಲ್ಲಿ ಬಂದಿದೆ. ತಹಶೀಲ್ದಾರ್ ಮೇಲಿಂದ ಮೇಲೆ ನಮಗೆ ನೋಟಿಸ್ ನೀಡುತ್ತಿದ್ದಾರೆ. ಕಚೇರಿಗೆ ಬಂದರೆ ವಕ್ಫ್ ಬೋರ್ಡ್ ಅಧಿಕಾರಿಗಳು ಬಂದಿಲ್ಲ ಎನ್ನುತ್ತಾರೆ. ತಹಶೀಲ್ದಾರ್ ಕಚೇರಿಗೆ ಅಲೆದು ಸುಸ್ತಾಗಿದೆ ಎಂದು ರೈತರು ‘ಟಿವಿ9’ ಜೊತೆ ಅಳಲು ತೋಡಿಕೊಂಡಿದ್ದಾರೆ.
ಮತ್ತೊಂದೆಡೆ, ವಿಜಯಪುರದಲ್ಲಿ ರೈತರ ಪ್ರತಿಭಟನೆ ಮುಂದುವರಿದಿದೆ. ಮಂಗಳವಾರ ತಡರಾತ್ರಿ ಕೂಡ ಪ್ರತಿಭಟನೆ ಮುಂದುವರಿಯಿತು. ಈ ಮಧ್ಯೆ, ವಿಜಯಪುರದಲ್ಲಿ ರೈತರಿಗೆ ನೋಟಿಸ್ ನೀಡಿರುವುದನ್ನ ಸಚಿವ ಜಮೀರ್ ಅಹಮ್ಮದ್ ಖಾನ್ ಸಮರ್ಥಿಸಿಕೊಂಡಿದ್ದಾರೆ.
ವಕ್ಫ್ ಆಸ್ತಿ ವಿಚಾರದಲ್ಲಿ ಬಿಜೆಪಿ ತನ್ನ ಕೆಲಸ ಮಾಡುತ್ತಿದೆ. ವಿರೋಧ ಪಕ್ಷವಾಗಿ ಬಿಜೆಪಿ ಕೆಲಸ ಮಾಡುತ್ತಿದೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ಹಾವೇರಿ ಜಿಲ್ಲೆ ಶಿಗ್ಗಾಂವಿಯಲ್ಲಿ ಮಾತನಾಡಿದ ಅವರು, ವಕ್ಫ್ ಆಸ್ತಿ ಅಂತ ನೋಟಿಸ್ ಕೊಟ್ಟವರು ಯಾರು? ದಾಖಲೆಯಲ್ಲಿ ವಕ್ಫ್ ಅಂತ ನಮೂದಿಸಿದವರು ಯಾರು? ವಿಜಯಪುರ ಜಿಲ್ಲೆಯಲ್ಲಿ ವಕ್ಫ್ ಅಂತ ಹೆಸರು ಹಾಕಿದ್ದು 2024ರಲ್ಲಿ. ಅದನ್ನ ಬಿಜೆಪಿಯವರು ಮಾಡುತ್ತಾರಾ ಎಂದು ಬೊಮ್ಮಾಯಿ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ವಕ್ಫ್ ಆಸ್ತಿ ವಿವಾದ: ರೈತರಿಗೆ ನೀಡಿದ ನೋಟಿಸ್ ಸಮರ್ಥಿಸಿಕೊಂಡ ಸಚಿವ ಜಮೀರ್
ತಾವು ಮಾಡುವ ತಪ್ಪು, ಲೋಪ ಮುಚ್ಚಿಕೊಳ್ಳಲು ಕಾಂಗ್ರೆಸ್ ಓಲೈಕೆ ರಾಜಕಾರಣ ಮಾಡುತ್ತಿದೆ. ಭ್ರಷ್ಟಾಚಾರ ಮುಚ್ಚಿಕೊಳ್ಳಲು ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ. ಇದರ ಹಿಂದೆ ತುಷ್ಟೀಕರಣ ರಾಜಕಾರಣ ಇದೆ. ಜನ ಇದನ್ನು ಗಂಭೀರವಾಗಿ ತೆಗೆದುಕೊಳ್ಳಲಿದ್ದಾರೆ ಎಂದು ಬೊಮ್ಮಾಯಿ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ