Karnataka Crime News; ಯುವತಿ ವಿಚಾರಕ್ಕೆ ಜಗಳ: ಕಲಬುರಗಿ ನರ್ಸಿಂಗ್ ವಿದ್ಯಾರ್ಥಿಗೆ ಚಾಕು ಇರಿತ
ಜಗಳ ವಿಕೋಪಕ್ಕೆ ಹೋಗಿ ಎಹ್ತೇಶಾಮ್‌ಗೆ ಮುಜಮಿಲ್ ನಿಂದ ಚಾಕು ಇರಿತವಾಗಿದೆ. ಗಾಯಾಳು ಎಹ್ತೇಶಾಮ್‌ಗೆ ಕಲಬುರಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಕಲಬುರಗಿ: ಯುವತಿಯ ವಿಚಾರಕ್ಕೆ ನರ್ಸಿಂಗ್ ವಿದ್ಯಾರ್ಥಿಗೆ ಚಾಕು ಇರಿದಿರುವ ಘಟನೆ ಕಲಬುರಗಿಯ ನೂರ್‌ಬಾಗ್ ಕಾಲೋನಿಯಲ್ಲಿ ನಿನ್ನೆ ಸಂಜೆ ನಡೆದಿದೆ. ಮೊಹ್ಮದ್ ಎಹ್ತೇಶಾಮ್(19) ಚಾಕು ಇರಿತಕ್ಕೊಳಗಾದ ಯುವಕ. ಕಲಬುರಗಿ ಖಾಸಗಿ ಕಾಲೇಜಿನಲ್ಲಿ ನರ್ಸಿಂಗ್ ಪ್ರಥಮ ವರ್ಷ ಓದುತ್ತಿದ್ದ ಎಹ್ತೇಶಾಮ್ ಹಾಗೂ ತನ್ನ ಕ್ಲಾಸ್‌ಮೆಟ್ ವಿದ್ಯಾರ್ಥಿನಿ ಬೆನ್ನುಬಿದ್ದಿದ್ದ ಮುಜಾಮಿಲ್ ನಡುವೆ ಜಗಳ ನಡೆದಿದೆ. ಈ ವೇಳೆ ಜಗಳ ವಿಕೋಪಕ್ಕೆ ಹೋಗಿ ಎಹ್ತೇಶಾಮ್‌ಗೆ ಮುಜಮಿಲ್ ನಿಂದ ಚಾಕು ಇರಿತವಾಗಿದೆ. ಗಾಯಾಳು ಎಹ್ತೇಶಾಮ್‌ಗೆ ಕಲಬುರಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅತ್ಯಾಚಾರಿಗೆ 20 ವರ್ಷ ಜೈಲು ಶಿಕ್ಷೆ 36 ಸಾವಿರ ದಂಡ
ಮಂಡ್ಯ: 2019ರಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದ ಅಪರಾಧಿ ಪ್ರಸನ್ನ ಕುಮಾರ್ಗೆ 20 ವರ್ಷ ಜೈಲು ಶಿಕ್ಷೆ, 36 ಸಾವಿರ ರೂ. ದಂಡ ವಿಧಿಸಿ ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾ.ಕೆ.ವಿ.ನಾಗಜ್ಯೋತಿ ಆದೇಶ ಹೊರಡಿಸಿದ್ದಾರೆ. ಅಪ್ರಾಪ್ತೆಯನ್ನ ಪುಸಲಾಯಿಸಿ ತೆಂಗಿನ ತೋಟಕ್ಕೆ ಕರೆದು ಕೊಂಡು ಹೋಗಿ ಅತ್ಯಾಚಾರ ವೆಸಗಲಾಗಿತ್ತು. ಈ ಸಂಬಂಧ ಕೆ.ಆರ್ ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿತ್ತು. ಸದ್ಯ ಸತತ ಮೂರು ವರ್ಷಗಳ ಸುದೀರ್ಘ ಕಾನೂನು ಹೋರಾಟಕ್ಕೆ ಜಯ ಸಿಕ್ಕಿದೆ.
ಇದನ್ನೂ ಓದಿ: ಟಿ.ನರಸೀಪುರ: ಮೇಯುತ್ತಿದ್ದ ಮೇಕೆ ಮೇಲೆ ಚಿರತೆ ದಾಳಿ
ಟ್ರ್ಯಾಕ್ಟರ್, ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಬಿಎಂಟಿಸಿ ಬಸ್
ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಬಳಿಯ ಜಂಗಲ್ ಪಾಳ್ಯದ ಮುಖ್ಯ ರಸ್ತೆಯಲ್ಲಿ ನಿನ್ನೆ ತಡರಾತ್ರಿ ಬಿಎಂಟಿಸಿ ಬಸ್ ಟ್ರ್ಯಾಕ್ಟರ್, ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಟ್ರ್ಯಾಕ್ಟರ್ ಚಾಲಕನ ಸ್ಥಿತಿ ಗಂಭೀರವಾಗಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತ ಬಳಿಕ ಬಿಎಂಟಿಸಿ ಬಸ್ ಚಾಲಕ, ನಿರ್ವಾಹಕ ಪರಾರಿಯಾಗಿದ್ದಾರೆ.
ವಾಯು ವಿಹಾರಕ್ಕೆ ತೆರಳಿದ್ದ ಮಹಿಳೆಯ ಸರ ಕಿತ್ತುಕೊಂಡು ಪರಾರಿ
ಮಂಡ್ಯ: ಜಿಲ್ಲೆಯ ಮಳವಳ್ಳಿ ತಾಲೂಕಿನ ನೆಟ್ಕಲ್ ಗ್ರಾಮದಲ್ಲಿ ವಾಯು ವಿಹಾರಕ್ಕೆ ತೆರಳಿದ್ದ ಚೆನ್ನಾಜಮ್ಮ ಎಂಬುವವರ ಕತ್ತಿನಲ್ಲಿದ್ದ 30 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಖದೀಮರು ಪರಾರಿಯಾಗಿದ್ದಾರೆ. ವಿಳಾಸ ಕೇಳುವ ನೆಪದಲ್ಲಿ ಇಬ್ಬರು ದುಷ್ಕರ್ಮಿಗಳು ಬೈಕ್ನಲ್ಲಿ ಬಂದು ಮಾಂಗಲ್ಯ ಸರ ಕಿತ್ತೊಯ್ದಿದ್ದಾರೆ. ಬೆಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವಿದ್ಯುತ್ ತಂತಿ ತಗುಲಿ ರೈತ ಸಾವು
ವಿಜಯನಗರ: ಜಿಲ್ಲೆಯ ಹೊಸಪೇಟೆ ತಾಲೂಕಿನ ಬೈಲವದ್ದಿಗೇರಿ ಗ್ರಾಮದಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ತಂತಿ ತಗುಲಿ ರೈತ ಮೃತಪಟ್ಟ ಘಟನೆ ನಡೆದಿದೆ. ವಿದ್ಯುತ್ ತಂತಿ ತಗುಲಿ ರೈತ ಮೂಲಿಮನಿ ಯರಿಸ್ವಾಮಿ ಸಾವನ್ನಪ್ಪಿದ್ದಾರೆ. ಜೆಸ್ಕಾಂ ನಿರ್ಲಕ್ಷ್ಯ ಖಂಡಿಸಿ ಶವವಿಟ್ಟು ಸ್ಥಳೀಯರು ಪ್ರತಿಭಟನೆ ನಡೆಸಿದ್ದು ಸ್ಥಳಕ್ಕೆ ಜೆಸ್ಕಾಂ ಅಧಿಕಾರಿಗಳು ಬರಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ. ಈ ಸಂಬಂಧ ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:35 am, Thu, 15 December 22