ಕಲಬುರಗಿ, ಮೇ 7: ಸಾಮಾನ್ಯವಾಗಿ ಚುನಾವಣೆ (Elections) ವೇಳೆ ಕರ್ತವ್ಯದಲ್ಲಿರುವ ಸಿಬ್ಬಂದಿಗೆ ಪ್ಯಾಕ್ ಮಾಡಿದ ಪೊಟ್ಟಣಗಳಲ್ಲಿ ಆಹಾರ (Packed food)ಒದಗಿಸಲಾಗುತ್ತದೆ. ಆದರೆ, ಇದೇ ಮೊದಲ ಬಾರಿಗೆ ಕಲಬುರಗಿ (Kalaburagi) ಜಿಲ್ಲೆಯ ಒಂಬತ್ತು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ 2,378 ಮತಗಟ್ಟೆಗಳಲ್ಲಿ ನಿಯೋಜಿತವಾಗಿರುವ ಚುನಾವಣಾ ಸಿಬ್ಬಂದಿಗೆ ತಾಜಾ ಬೆಳಗಿನ ಉಪಾಹಾರ (Fresh Food) ಮತ್ತು ಮಧ್ಯಾಹ್ನದ ಊಟ ದೊರೆಯಲಿದೆ ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.
ಕಲಬುರಗಿ ಮಹಾನಗರ ಪಾಲಿಕೆಯಿಂದ ಕಲಬುರಗಿ ದಕ್ಷಿಣ ಮತ್ತು ಉತ್ತರ ಕ್ಷೇತ್ರಗಳಲ್ಲಿ ಸಿಬ್ಬಂದಿಗೆ ತಾಜಾ ಆಹಾರ ವಿತರಿಸಲಾಗುವುದು. ಉಳಿದ ಏಳು ವಿಭಾಗಗಳಲ್ಲಿ ಶಾಲಾ ಶಿಕ್ಷಣ ಇಲಾಖೆಗೆ ಈ ಕಾರ್ಯವನ್ನು ವಹಿಸಲಾಗಿದೆ. ಪೊಲೀಸ್ ಸೇರಿದಂತೆ 10ರಿಂದ 12 ಮಂದಿಗೆ ಪ್ರತಿ ಮತಗಟ್ಟೆಯಲ್ಲಿನ ಕೊಠಡಿಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಅಕ್ಷರ ದಾಸೋಹ ಸಿಬ್ಬಂದಿಯ ಸಹಾಯದಿಂದ ಆಹಾರ ತಯಾರಿಸಲಾಗುವುದು. ಬೆಳಿಗ್ಗೆ, ಚುನಾವಣಾ ಸಿಬ್ಬಂದಿಗೆ ಉಪಹಾರ ಮತ್ತು ಚಹಾವನ್ನು ನೀಡಲಾಗುವುದು ಮತ್ತು ಮಧ್ಯಾಹ್ನ, ಅವರಿಗೆ ರೊಟ್ಟಿ ಸೇರಿದಂತೆ ತಾಜಾ ಊಟನೀಡಲಾಗುತ್ತದೆ ಎಂದು ಅವರು ತಿಳಿಸಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ. ಒಟ್ಟು 2,804 ಪ್ರಿಸೈಡಿಂಗ್ ಆಫೀಸರ್ಗಳು, 5,608 ಅಸಿಸ್ಟೆಂಟ್ ಪ್ರಿಸೈಡಿಂಗ್ ಆಫೀಸರ್ಗಳು, 5,608 ಮತಗಟ್ಟೆ ಅಧಿಕಾರಿಗಳು ಮತ್ತು 270 ಮೈಕ್ರೋ ಅಬ್ಸರ್ವರ್‌ಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಪ್ರತಿ ಮತಗಟ್ಟೆ ಕೇಂದ್ರದಲ್ಲಿ ಒಬ್ಬ ಪ್ರಿಸೈಡಿಂಗ್ ಆಫೀಸರ್, ಅಸಿಸ್ಟೆಂಟ್ ಪ್ರಿಸೈಡಿಂಗ್ ಆಫಿಸರ್, ಇಬ್ಬರು ಮತಗಟ್ಟೆ ಅಧಿಕಾರಿಗಳು, ಗ್ರೂಪ್ ‘ಡಿ’ ನೌಕರ ಮತ್ತು ಪೊಲೀಸ್ ಪೇದೆ ಇರುತ್ತಾರೆ. ಮತದಾರರಿಗೆ ಕುಡಿಯುವ ನೀರು ಹಾಗೂ ಪ್ರತಿ ಮತಗಟ್ಟೆಯಲ್ಲಿ ವಿಶ್ರಾಂತಿ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಮತದಾರರನ್ನು ಆಕರ್ಷಿಸಲು, ವಿಶೇಷವಾಗಿ ಮಹಿಳೆಯರು ಮತ್ತು ಮೊದಲ ಬಾರಿಗೆ ಮತದಾರರನ್ನು ಆಕರ್ಷಿಸಲು, ಐದು ‘ಸಖಿ’ ಪಿಂಕ್ ಬೂತ್‌ಗಳು, ಒಂದು ಯುವ ಮತಗಟ್ಟೆ, ಒಂದು ಪಿಡಬ್ಲ್ಯೂಡಿ ಬೂತ್ ಮತ್ತು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಥೀಮ್ ಆಧಾರಿತ ಮತಗಟ್ಟೆಯನ್ನು ಸ್ಥಾಪಿಸಲಾಗಿದೆ ಎಂದು ಫೌಜಿಯಾ ತಿಳಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕದ 14 ಕ್ಷೇತ್ರಗಳಲ್ಲಿ ಮತದಾನ: ಯಾವ ಕ್ಷೇತ್ರದಲ್ಲಿ ಯಾರ ಬಲಾಬಲ ಹೇಗಿದೆ?
ಥೀಮ್ ಆಧಾರಿತ ಮತಗಟ್ಟೆಯಲ್ಲಿ ಈ ಪ್ರದೇಶದ ಐತಿಹಾಸಿಕ ಪ್ರಾಮುಖ್ಯತೆಯನ್ನು ಪ್ರದರ್ಶಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಚುನಾವಣೆ ಸಂಬಂಧಿತ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:02 am, Tue, 7 May 24