ಕರ್ನಾಟಕದ 14 ಕ್ಷೇತ್ರಗಳಲ್ಲಿ ಮತದಾನ: ಯಾವ ಕ್ಷೇತ್ರದಲ್ಲಿ ಯಾರ ಬಲಾಬಲ ಹೇಗಿದೆ?
ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. ಮಾಜಿ ಸಿಎಂಗಳ, ಹೊಸಮುಖಗಳ, ಸಚಿವರ ಮಕ್ಕಳ ಸ್ಪರ್ಧೆಯಿಂದಲೇ ಈ ಕ್ಷೇತ್ರಗಳು ಗಮನ ಸೆಳೆದಿವೆ. ಹಾಗಾದರೆ 14 ಕ್ಷೇತ್ರಗಳ ವಿಶೇಷ ಏನು? ಯಾವ ಕ್ಷೇತ್ರದಲ್ಲಿ ಯಾರ ಬಲಾಬಲ ಹೇಗಿದೆ ಎಂಬ ವಿವರ ಇಲ್ಲಿದೆ.
ಬೆಂಗಳೂರು, ಮೇ 7: ಲೋಕಸಭಾ ಚುನಾವಣೆಗೆ (Lok Sabha Elections) ಕರ್ನಾಟಕದ 14 ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದೆ. ಪ್ರತಿಯೊಂದು ಕ್ಷೇತ್ರಗಳೂ ಕುತೂಹಲ ಮೂಡಿಸಿವೆ. ಈ ಬಾರಿ ಹೆಚ್ಚಿನ ಸೀಟು ನಾವು ಗೆಲ್ಲಬೇಕು ಅಂತ ಕಾಂಗ್ರೆಸ್ ಇದ್ದರೆ, ಬಿಜೆಪಿ ಬಲ ಉಳಿಸಿಕೊಳ್ಳುವ ಭರವಸೆಯಲ್ಲಿದೆ. ಯಾವ ಕ್ಷೇತ್ರದಲ್ಲಿ ಯಾರ ಬಲಾಬಲ ಹೇಗಿದೆ ಎಂಬ ಇಣುಕುನೋಟ ಇಲ್ಲಿದೆ.
ಚಿಕ್ಕೋಡಿಯಲ್ಲಿ ಅಣ್ಣಾಸಾಹೇಬ್ ಜೊಲ್ಲೆ Vs ಪ್ರಿಯಾಂಕಾ ಜಾರಕಿಹೊಳಿ
ಭಾರಿ ಕುತೂಹಲ ಕೆರಳಿಸಿರುವ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಗೆಲುವಿಗಾಗಿ ಎರಡೂ ಪಕ್ಷಗಳೂ ರಣತಂತ್ರ ರೂಪಿಸಿವೆ. ಗ್ಯಾರಂಟಿ ಯೋಜನೆಗಳನ್ನ ಪ್ರಿಯಾಂಕಾ ನಂಬಿಕೊಂಡಿದ್ದಾರೆ. ಇತ್ತ ಅಣ್ಣಾಸಾಹೇಬ್ ಜೊಲ್ಲೆ ಮೋದಿ ಹವಾ ಮೇಲೆ ಚುನಾವಣೆ ಗೆಲ್ಲುವ ತವಕದಲ್ಲಿದ್ದಾರೆ. ಪ್ರಿಯಾಂಕಾಗೆ ಸತೀಶ್ ಜಾರಕಿಹೊಳಿ ಮಗಳು ಎಂಬ ಬಲವಿದೆ. ಎರಡೂ ಪಕ್ಷಗಳು ಲಿಂಗಾಯತ, ಮುಸ್ಲಿಂ, ಎಎಸ್ಸಿ, ಎಸ್ಟಿ ಮತ ಓಲೈಸಿಕೊಳ್ಳಲು ಯತ್ನಿಸಿವೆ. ಪಕ್ಷೇತರ ಅಭ್ಯರ್ಥಿಯಾಗಿರುವ ಶಂಭು ಕಲ್ಲೋಳಿಕರ್ ಕಾಂಗ್ರೆಸ್ ಮತಗಳನ್ನ ಸೆಳೆದರೆ ಪ್ರಿಯಾಂಕಾಗೆ ಕಷ್ಟವಾಗಲಿದೆ.
ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ Vs ಮೃಣಾಲ್ ಹೆಬ್ಬಾಳ್ಕರ್
ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ಗೆ ಒಂದು ರೀತಿ ಅಗ್ನಿ ಪರೀಕ್ಷೆ ಅಂದ್ರೂ ತಪ್ಪಿಲ್ಲ. ಎದುರಾಳಿಯಾಗಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಅಖಾಡದಲ್ಲಿದ್ದು, ಜಾತಿ ಲೆಕ್ಕಾಚಾರವೂ ಜೋರಾಗಿದೆ. ಇಷ್ಟೇ ಅಲ್ಲ ಶೆಟ್ಟರ್ ಹೊರಗಿನವರು ಅನ್ನೋ ಕೂಗಿನ ನಡುವೆ ಕುಟುಂಬ ರಾಜಕಾರಣದ ಸದ್ದು ಇದೆ.
ಬಾಗಲಕೋಟೆಯಲ್ಲಿ ಪಿ.ಸಿ ಗದ್ದಿಗೌಡರ್ Vs ಸಂಯುಕ್ತಾ ಪಾಟೀಲ್
ಬಾಗಲಕೋಟೆಯಲ್ಲಿ ಪಿ.ಸಿ ಗದ್ದಿಗೌಡರ್ ಗೆಲುವಿನ ನಾಗಲೋಟ ಎಂದಿಗೂ ಹಿಂದೆ ಸರಿದಿಲ್ಲ. ಸತತ ಐದು ಬಾರಿ ಗೆಲುವು ಕಂಡಿರುವ ಗದ್ದಿಗೌಡರ್ ಎದುರಾಳಿಯಾಗಿ ಸಂಯುಕ್ತಾ ಪಾಟೀಲ್ ಹೆಜ್ಜೆ ಇಟ್ಟಿದ್ದಾರೆ. ಒಂದ್ವೇಳೆ ಸಂಯುಕ್ತಾ ಪಾಟೀಲ್ ಕ್ಷೇತ್ರದಲ್ಲಿ ಏನಾದರೂ ಗೆಲುವು ಸಾಧಿಸಿದ್ರೆ ಜಿಲ್ಲೆಯಲ್ಲಿ ಮೊದಲ ಮಹಿಳಾ ಸಂಸದರಾಗಲಿದ್ದಾರೆ.
ವಿಜಯಪುರದಲ್ಲಿ ರಮೇಶ್ ಜಿಗಜಿಣಗಿ Vs ರಾಜು ಅಲಗೂರ್
ಎಸ್ಸಿ ಮೀಸಲು ಕ್ಷೇತ್ರವಾದ ವಿಜಯಪುರದಲ್ಲಿ ಈ ಬಾರಿ ಜಿದ್ದಾಜಿದ್ದಿ ಇದೆ. ರಮೇಶ್ ಜಿಗಜಿಣಗಿ ವಿರುದ್ಧ ಕಾಂಗ್ರೆಸ್ನಿಂದ ರಾಜು ಅಲಗೂರ್ ಸ್ಪರ್ಧಿಸಿದ್ದಾರೆ. ಕ್ಷೇತ್ರದಲ್ಲಿ ಮೋದಿ ಮ್ಯಾಜಿಕ್ ವರ್ಸಸ್ ಕಾಂಗ್ರೆಸ್ ಗ್ಯಾರಂಟಿ ಅನ್ನುವಂತಹ ವಾತವರಣ ಇದೆ.
ಕಲಬುರಗಿಯಲ್ಲಿ ಉಮೇಶ್ ಜಾಧವ್ Vs ರಾಧಾಕೃಷ್ಣ
ಕಲಬುರಗಿ ಕೂಡ ಎಸ್ಸಿ ಮೀಸಲು ಕ್ಷೇತ್ರ. ಈ ಕದನ ಕಣ ಸಖತ್ ಹೈವೋಲ್ಟೇಜ್ ಆಗಿದೆ. ಉಮೇಶ್ ಜಾಧವ್ ಎದುರಾಳಿಯಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಳಿಯ ರಾಧಾಕೃಷ್ಣ ಅಖಾಡದಲ್ಲಿದ್ದಾರೆ.. ಹೀಗಾಗಿ ಖರ್ಗೆಗೆ ಕಲಬುರಗಿ ಪ್ರತಿಷ್ಠೆಯ ಕಣವಾಗಿದೆ.
ರಾಯಚೂರಿನಲ್ಲಿ ರಾಜಾ ಅಮರೇಶ್ವರ್ ನಾಯಕ್ Vs ಕುಮಾರ್ ನಾಯ್ಕ್
ರಾಯಚೂರಿನಲ್ಲಿ ಬಿಜೆಪಿ, ಕಾಂಗ್ರೆಸ್ ನಡುವೆ ಮತ ಲೆಕ್ಕಾಚಾರ ಜೋರಾಗಿದೆ. ಮುಸ್ಲಿಂ, ಕುರುಬ, ಎಸ್ಸಿ/ಎಸ್ಟಿ ಮತಗಳ ಮೇಲೆ ಅಭ್ಯರ್ಥಿಗಳಿಗೆ ನಂಬಿಕೆ ಇದ್ರೆ, ಬಿಜೆಪಿ ಲಿಂಗಾಯತ ಹಾಗೂ ಹಿಂದುತ್ವದ ಮೇಲೆ ಭರವಸೆ ಇಟ್ಕೊಂಡಿದೆ.
ಬೀದರ್ನಲ್ಲಿ ಭಗವಂತ್ ಖೂಬಾ Vs ಸಾಗರ್ ಖಂಡ್ರೆ
ಬೀದರ್ನಲ್ಲಿ ಭಗವಂತ್ ಖೂಬಾ ಎದುರಾಳಿಯಾಗಿ ಕಾಂಗ್ರೆಸ್ ಸಾಗರ್ ಖಂಡ್ರೆ ಅಖಾಡಕ್ಕೆ ಇಳಿಸಿದೆ. ಬಿಜೆಪಿ ಯ ಸ್ಟ್ರಾಂಗ್ ಕ್ಯಾಂಡಿಡೇಟ್ ಪ್ರತಿಯಾಗಿ ಹೊಸ ಮುಖ ಕದನ ಕಣಕ್ಕೆ ಇಳಿಸಿದ್ದು, ಲಿಂಗಾಯತ, ಮುಸ್ಲಿಂ, ಕುರುಬ ಮತಗಳ ಮೇಲೆ ವಿಶ್ವಾಸ ಇಟ್ಟುಕೊಂಡಿದೆ.
ಕೊಪ್ಪಳದಲ್ಲಿ ಬಸವರಾಜ್ ಕ್ಯಾವಟರ್ Vs ರಾಜಶೇಖರ್ ಹಿಟ್ನಾಳ್
ಕೊಪ್ಪಳದಲ್ಲಿ ಮೋದಿ ವರ್ಚಸ್ಸು, ಹಿಂದುತ್ವ ವರ್ಸಸ್ ಕಾಂಗ್ರೆಸ್ ಗ್ಯಾರಂಟಿ ಎಂಬಂತಿದೆ. ಅಖಾಡದಲ್ಲಿ ಬಿಜೆಪಿಯಿಂದ ವೈದ್ಯ ಬಸವರಾಜ್ ಕ್ಯಾವಟರ್ ಇದ್ರೆ, ಕಾಂಗ್ರೆಸ್ ರಾಜಶೇಖರ್ ಹಿಟ್ನಾಳ್ರನ್ನ ಇಳಿಸಿದೆ.
ಬಳ್ಳಾರಿಯಲ್ಲಿ ಶ್ರೀರಾಮುಲು Vs ಇ ತುಕರಾಂ
ಎಸ್ಟಿ ಮೀಸಲು ಕ್ಷೇತ್ರವಾದ ಬಳ್ಳಾರಿಯಲ್ಲೂ ಮೋದಿ ವರ್ಚಸ್ಸು ಹಾಗೂ ಗ್ಯಾರಂಟಿ ನಡುವಿನ ಕದನದಂತಿದೆ. ಕಳೆದ ವಿಧಾನಸಭೆಯಲ್ಲಿ ಸೋಲುಂಡಿದ್ದ ಶ್ರೀರಾಮುಲರನ್ನ ಬಿಜೆಪಿ ಅಖಾಡಕ್ಕೆ ಇಳಿಸಿದ್ರೆ, ಕಾಂಗ್ರೆಸ್ ಹಾಲಿ ಶಾಸಕ ಇ ತುಕರಾಂಗೆ ಮಣೆ ಹಾಕಿದೆ. ಈ ಚುನಾವಣೆ ಶ್ರೀರಾಮುಲು ಅವರ ರಾಜಕೀಯ ಪುನರ್ಜನ್ಮದ ಚುನಾವಣೆ ಅಂತಾನೇ ಬಿಂಬಿತವಾಗಿದೆ.
ಹಾವೇರಿಯಲ್ಲಿ ಬಸವರಾಜ ಬೊಮ್ಮಾಯಿ Vs ಆನಂದಸ್ವಾಮಿ ಗಡ್ಡದೇವರಮಠ
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸ್ಪರ್ಧೆಯಿಂದ ಹಾವೇರಿ ಕಣ ರಂಗೇರಿದೆ.. ಕಾಂಗ್ರೆಸ್ನಿಂದ ಆನಂದಸ್ವಾಮಿ ಗಡ್ಡದೇವರಮಠ ಕದನ ಕಣದಲ್ಲಿದ್ದು, ಲಿಂಗಾಯತ ಮತ ಬ್ಯಾಂಕ್ ಮೇಲೆ ಇಬ್ಬರ ನಂಬಿಕೆ ಇದೆ.
ಧಾರವಾಡದಲ್ಲಿ ಪ್ರಹ್ಲಾದ್ ಜೋಶಿ Vs ವಿನೋದ್ ಅಸೂಟಿ
ಧಾರವಾಡ ಲೋಕಸಭೆ ಕ್ಷೇತ್ರ ಈ ಬಾರಿ ಸಾಕಷ್ಟು ಸದ್ದು ಮಾಡಿರುವ ಕ್ಷೇತ್ರ. ಸತತವಾಗಿ ಜಯ ಸಾಧಿಸಿದ್ದ ಜೋಶಿ ವಿರುದ್ಧ ಕಾಂಗ್ರೆಸ್ ವಿನೋದ್ ಅಸೂಟಿಯನ್ನ ಅಖಾಡಕ್ಕೆ ಇಳಿಸಿದೆ. ಈ ಮೂಲಕ ಒಬಿಸಿ, ಕುರುಬ, ಅಹಿಂದ ಮತಗಳ ಮೇಲೆ ಕಣ್ಣಿಟ್ಟಿದೆ. ಈ ನಡುವೆ ಜೋಶಿ ವಿರುದ್ಧ ದಿಂಗಾಲೇಶ್ವರ ಸ್ವಾಮೀಜಿ ಕ್ಯಾಂಪೇನ್ ಮಾಡಿದ್ದು ಲಿಂಗಾಯತ ಮತಗಳು ಯಾರ ಪಾಲಾಗುತ್ವೆ ಅನ್ನೋ ಚರ್ಚೆ ಇದೆ.
ಉತ್ತರ ಕನ್ನಡದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ Vs ಅಂಜಲಿ ನಿಂಬಾಳ್ಕರ್
ಉತ್ತರ ಕನ್ನಡದಲ್ಲಿ ಅನಂತ್ ಕುಮಾರ್ ಹೆಗಡೆಗೆ ಟಿಕೆಟ್ ಮಿಸ್ ಆಗಿ, ಕಾಗೇರಿಗೆ ಸಿಕ್ಕಿದೆ. ಕಾಂಗ್ರೆಸ್ ಅಂಜಲಿ ನಿಂಬಾಳ್ಕರ್ಗೆ ಟಿಕೆಟ್ ನೀಡಿದ್ದು ತಮ್ಮ ಗ್ಯಾರಂಟಿಗಳಿಂದ ಗೆಲುವಿನ ಕನಸು ಕಾಣ್ತಿದೆ. ಇನ್ನು ಕಾಗೇರಿ ಪರ ಅನಂತ್ ಕುಮಾರ್ ಹೆಗಡೆ ಪ್ರಚಾರ ಮಾಡದೇ ಇರೋದು ಕೊಂಚ ಮೈನಸ್ ಆದರೂ ಆಗಬಹುದು ಎನ್ನಲಾಗುತ್ತಿದೆ.
ಇದನ್ನೂ ಓದಿ: ಮತದಾನ ಮಾಡಿ ಗುರುತು ತೋರ್ಸಿದ್ರೆ ಈ ಬಾರ್ನಲ್ಲಿ ಸಿಗಲಿದೆ ಸ್ಪೆಷಲ್ ಡಿಸ್ಕೌಂಟ್!
ದಾವಣಗೆರೆಯಲ್ಲಿ ಗಾಯತ್ರಿ ಸಿದ್ದೇಶ್ವರ್ Vsಪ್ರಭಾ ಮಲ್ಲಿಕಾರ್ಜುನ್
ರಾಜ್ಯದಿಂದ ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಮಹಿಳೆಯೊಬ್ರು ದಿಲ್ಲಿಗೆ ಹಾರಿದ್ದರು. ಆದರೆ ಈ ಬಾರಿ ರಾಷ್ಟ್ರೀಯ ಪಕ್ಷಗಳಲ್ಲಿ ಓರ್ವ ಮಹಿಳೆ ಸಂಸದೆಯಾಗಿ ಹೋಗೋದು ಖಚಿತ. ದಾವಣಗೆರೆಯಲ್ಲಿ ಬಿಜೆಪಿಯಿಂದ ಗಾಯತ್ರಿ ಸಿದ್ದೇಶ್ವರ್ ಇದ್ದರೆ, ಕಾಂಗ್ರೆಸ್ನಿಂದ ಪ್ರಭಾ ಮಲ್ಲಿಕಾರ್ಜುನ್ ಇದ್ದಾರೆ. ಇಬ್ಬರಲ್ಲಿ ಯಾರು ಪಾರ್ಲಿಮೆಂಟ್ ಮೆಟ್ಟಿಲು ಹತ್ತುತ್ತಾರೆ ಅನ್ನೋದೇ ಪ್ರಶ್ನೆಯಾಗಿದೆ.
ಶಿವಮೊಗ್ಗದಲ್ಲಿ ರಾಘವೇಂದ್ರ Vs ಗೀತಾ Vs ಈಶ್ವರಪ್ಪ
ಶಿವಮೊಗ್ಗ ಕಣ ಮೂವರ ಸ್ಪರ್ಧೆಯಿಂದ ರಂಗೇರಿದೆ. ಒಂದು ಕಡೆ ಬಂಗಾರಪ್ಪ ಫ್ಯಾಮಿಲಿ ವರ್ಸಸ್ ಬಿಎಸ್ವೈ ಫ್ಯಾಮಿಲಿ ಇದ್ದರೆ, ಮತ್ತೊಂದು ಕಡೆ ಯಡಿಯೂರಪ್ಪ ವಿರುದ್ಧ ರೆಬೆಲ್ ಆಗಿರುವ ಈಶ್ವರಪ್ಪ ಅಗ್ನಿ ಪರೀಕ್ಷೆಗೆ ಇಳಿದಿರೋದು ಕದನ ಕಣ ಮತ್ತಷ್ಟು ಬಿಸಿ ಏರುವಂತೆ ಮಾಡಿದೆ.
ಚುನಾವಣೆ ಸಂಬಂಧಿತ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ