ಮತದಾನ ಮಾಡಿ ಗುರುತು ತೋರ್ಸಿದ್ರೆ ಈ ಬಾರ್ನಲ್ಲಿ ಸಿಗಲಿದೆ ಸ್ಪೆಷಲ್ ಡಿಸ್ಕೌಂಟ್!
ಉತ್ತರ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ಮಂಗಳವಾರ ಮತದಾನ ನಡೆಯಲಿದೆ. ಮತದಾನ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ. ಈ ಮಧ್ಯೆ, ಬಾರ್ ಮಾಲೀಕರೊಬ್ಬರು ವಿನೂತನ ಹೆಜ್ಜೆ ಇಟ್ಟಿದ್ದಾರೆ. ಮತದಾನ ಮಾಡಿ ಗುರುತು ತೋರಿಸಿದರೆ ಮದ್ಯವನ್ನು ರಿಯಾಯಿತಿ ದರದಲ್ಲಿ ನೀಡುವುದಾಗಿ ಘೋಷಿಸಿದ್ದಾರೆ. ಹಾಗಾದರೆ, ಯಾವ ಬಾರ್ನಲ್ಲಿ ಡಿಸ್ಕೌಂಟ್ಗೆ ಮದ್ಯ ಸಿಗಲಿದೆ? ಯಾವಾಗ ಸಿಗಲಿದೆ ಎಂಬ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಹುಬ್ಬಳ್ಳಿ, ಮೇ 6: ಪ್ರತಿ ಬಾರಿ ಚುನಾವಣೆ ಬಂದಾಗಲೂ ಮತದಾನ ಪ್ರಮಾಣ (Voting Percentage) ಹೆಚ್ಚಿಸಲು ಸರ್ಕಾರಿ ಸಂಸ್ಥೆಗಳಿಂದ ತೊಡಗಿ ಖಾಸಗಿ ಸಂಸ್ಥೆಗಳು, ಇತರ ಸಮಾಜ ಸೇವಾ ಸಂಸ್ಥೆಗಳು ವಿವಿಧ ಸರ್ಕಸ್ ಮಾಡುತ್ತವೆ. ಬೆಂಗಳೂರಿನಲ್ಲಂತೂ ಲೋಕಸಭೆ ಚುನಾವಣೆಯಲ್ಲಿ (Lok Sabha Elections) ಮತದಾನ ಮಾಡಿ ಬಂದು ಗುರುತು ತೋರಿಸಿದವರಿಗೆ ಅನೇಕ ರೆಸ್ಟೋರೆಂಟ್ಗಳು ಉಚಿತ ತಿಂಡಿ ನೀಡದ ಉದಾಹರಣೆಗಳೂ ನಮ್ಮ ಮುಂದಿವೆ. ಇದೀಗ ಹುಬ್ಬಳ್ಳಿಯಲ್ಲಿ ಬಾರ್ (Hubballi Bar) ಮಾಲೀಕರೊಬ್ಬರು ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ವಿನೂತನ ಕ್ರಮ ಕೈಗೊಂಡಿದ್ದಾರೆ. ಮತದಾನ ಮಾಡಿ ಬಂದು ಗುರುತು ತೋರಿಸಿದರೆ ಮದ್ಯದ ದರದಲ್ಲಿ ರಿಯಾಯಿತಿ ನೀಡುವುದಾಗಿ ಘೋಷಿಸಿದ್ದಾರೆ.
ಲೋಕಸಭೆ ಚುನಾವಣೆಯ ಮೂರನೇ ಹಂತದ ಮತದಾನ ಮಂಗಳವಾರ ನಡೆಯಲಿದ್ದು, ಕರ್ನಾಟಕದ 14 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಮತದಾನದ ಪ್ರಮಾಣ ಹೆಚ್ಚಿಸಲು ಚುನಾವಣಾಧಿಕಾರಿಗಳು ಈಗಾಗಲೇ ಸಾಕಷ್ಟು ಜಾಗೃತಿ ಮೂಡಿಸಿದ್ದಾರೆ. ಆದರೂ ಜನ ಮತಚಲಾಯಿಸಲು ಹಿಂದೇಟು ಹಾಕುತ್ತಿದ್ದಾರೆ. ಪರಿಣಾಮವಾಗಿ ಕರ್ನಾಟಕದ ಮೊದಲ ಹಂತದ ಚುನಾವಣೆಯಲ್ಲಿ ಮತದಾನ ಪ್ರಮಾಣ ಕಡಿಮೆ ಆಗಿದೆ. ಹೀಗಾಗಿ ಹುಬ್ಬಳ್ಳಿಯ ಬಾರ್ ಮಾಲೀಕರೊಬ್ಬರು ವಿನೂತನ ಕ್ರಮಕ್ಕೆ ಮುಂದಾಗಿದ್ದಾರೆ.
ಎಷ್ಟು ರಿಯಾಯಿತಿ?
ಜನರು ಮಂಗಳವಾರ ನಡೆಯಲಿರುವ ಚುನಾವಣೆಯಲ್ಲಿ ಹಕ್ಕನ್ನು ಚಲಾಯಿಸಬೇಕು. ಮತ ಚಲಾಯಿಸಿ, ಮತದಾನ ಮಾಡಿದ ಗುರುತು ತೋರಿಸಿದರೆ ಮದ್ಯದ ದರದ ಮೇಲೆ ಶೇ 3ರ ಡಿಸ್ಕೌಂಟ್ ನೀಡುವುದಾಗಿ ಹುಬ್ಬಳ್ಳಿಯ ಕುಸುಗಲ್ ರಸ್ತೆಯಲ್ಲಿರು ಕರ್ನಾಟಕ ವೈನ್ಸ್ ಅಂಗಡಿ ಮಾಲೀಕ ಘೋಷಿಸಿದ್ದಾರೆ. ಈ ವಿಚಾರವಾಗಿ ಬಾರ್ ಮುಂದೆ ಬ್ಯಾನರ್ ಕೂಡ ಹಾಕಿದ್ದಾರೆ.
ಮತದಾನ ದಿನ ಸಿಗುತ್ತಾ ಮದ್ಯ?
ಸಾಮಾನ್ಯವಾಗಿ ಮತದಾನದ ದಿನ ಮದ್ಯದಂಗಡಿಗಳನ್ನು ಬಂದ್ ಮಾಡಿ ಆದೇಶ ಹೊರಡಿಸಿರಲಾಗುತ್ತದೆ. ಹೀಗಾಗಿ ಮತದಾನದ ದಿನ ಮದ್ಯ ಸಿಗುವುದು ಅನುಮಾನ. ಆದಾಗ್ಯೂ, ಮತದಾನದ ಗುರುತು ತೋರಿಸಿ ಆಮೇಲೆ ಒಂದು ಬಾರಿಗೆ ರಿಯಾಯಿತಿ ದರದಲ್ಲಿ ಮದ್ಯ ಖರೀದಿ ಮಾಡಬಹುದಾಗಿದೆ.
ಇದನ್ನೂ ಓದಿ: ‘ವೋಟ್ ಮಾಡಿ, ಊಟ ಮಾಡಿ’: ಬೆಂಗಳೂರು ಹೋಟೆಲ್ಗಳಲ್ಲಿ ಉಚಿತ ದೋಸೆ, ಸಿಹಿ ತಿಂಡಿ!
ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ನಿಸರ್ಗ ಗ್ರ್ಯಾಂಡ್ ಹೋಟೆಲ್ ‘ವೋಟ್ ಮಾಡಿ, ಊಟ ಮಾಡಿ’ ಅಭಿಯಾನದಡಿ ಏಪ್ರಿಲ್ 26ರಂದು ಮತದಾನ ಮಾಡಿದ ಗುರುತು ತೋರಿಸಿದವರಿಗೆ ಬೆಣ್ಣೆ ದೋಸೆ, ಲಡ್ಡು ಮತ್ತು ಜ್ಯೂಸ್ ನೀಡಿತ್ತು. ಬೆಂಗಳೂರಿನ ಹಲವು ಹೋಟೆಲ್ಗಳು ಇಂಥ ಕ್ರಮ ಕೈಗೊಂಡಿದ್ದವು. ಇದಕ್ಕೆ ಹೈಕೋರ್ಟ್ ಅನುಮತಿಯೂ ಇತ್ತು. ಇದೀಗ ಮದ್ಯ ಮಾರಾಟಗಾರರೂ ಅಂಥ ಕ್ರಮಕ್ಕೆ ಮುಂದಾಗಿದ್ದಾರೆ.
ಲೋಕಸಭೆ ಚುನಾವಣೆ ಕುರಿತ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:36 am, Mon, 6 May 24