ಕಲಬುರಗಿ: ಶರಣಬಸಪ್ಪ ಅಪ್ಪರ ನಾಡು ಕಲಬುರಗಿ, ಮಹಾಶಿವರಾತ್ರಿ (Mahashivaratri) ಹಬ್ಬದ ಸಂಭ್ರಮಕ್ಕೆ ಸಜ್ಜಾಗಿದೆ. ಕಲಬುರಗಿ ನಗರದ ಹೊರವಲಯದಲ್ಲಿರುವ ಬ್ರಹ್ಮಕುಮಾರಿ ವಿವಿಯ ಅಮೃತ ಸರೋವರ ಆವರಣದಲ್ಲಿ ಈ ಬಾರಿಯೂ ಆಕರ್ಷಕ ಬೃಹತ್ ಶಿವಲಿಂಗವು ದರ್ಶನಕ್ಕೆ ಸಿದ್ಧವಾಗಿದೆ. ಕಲಬುರಗಿಯ ಬ್ರಹ್ಮಕುಮಾರಿ ಆಶ್ರಮ ಸಾರ್ವಜನಿಕರನ್ನು ಆಧ್ಯಾತ್ಮದ ಕಡೆಗೆ ಸೆಳೆಯಲು ಪ್ರತಿವರ್ಷ ಮಹಾಶಿವರಾತ್ರಿಯಂದು ವಿಭಿನ್ನ ಹಾಗೂ ವಿಷೇಶವಾಗಿ ಆಚರಿಸುತ್ತ ಬಂದಿದೆ. ಅದರಂತೆ ಈ ಬಾರಿಯು ಶೇಂಗಾದಿಂದ ಬೃಹತ್ ಶಿವಲಿಂಗವನ್ನು ತಯಾರಿಸುವ ಮೂಲಕ ಗಮನ ಸೆಳೆದಿದೆ.
ಈ ಹಿಂದೆ ತೆಂಗಿನಕಾಯಿ, ತೂಗರಿ, ಮುತ್ತು, ಅಡಿಕೆ ಹೀಗೆ ನಾನಾ ರೀತಿಯ ಶಿವಲಿಂಗ ನಿರ್ಮಾಣ ಮಾಡುವ ಮುಖಾಂತರ ಆಶ್ರಮ ಮನೆಮಾತಾಗಿದೆ. ಈ ಬಾರಿಯೂ ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ಬೆಳೆಗಳಲ್ಲಿ ಒಂದಾಗಿರುವ ಶೇಂಗಾವನ್ನು ಬಳಸಿ ಸ್ವತಃ ಆಶ್ರಮವಾಸಿಗಳೇ ಆಕರ್ಷಕ ಶಿವಲಿಂಗ ನಿರ್ಮಿಸಿ ಈ ವರ್ಷದ ಶಿವರಾತ್ರಿಯನ್ನು ಅವಿಸ್ಮರಣೀಯವಾಗಿಸಿದೆ. 8 ಕ್ವಿಂಟಲ್ ಶೇಂಗಾದ ಕಾಳು ಬಳಸಿ ಅರಸಿಣ, ಕುಂಕುಮದ ಬಣ್ಣ ಬಳಿದು ತಯಾರಿಸಲಾದ 25 ಅಡಿ ಎತ್ತರದ ಕಂಗೊಳಿಸುತ್ತಿರುವ ಶಿವಲಿಂಗ ನೋಡುಗರ ಭಕ್ತಿಭಾವ ಉಕ್ಕಿಸುವಂತಿದೆ.
ಶೇಂಗಾದ ಶಿವಲಿಂಗದ ಜೊತೆಗೆ ಆಶ್ರಮದ ಪ್ರಾಂಗಣದಲ್ಲಿ ನ್ಯಾಣ್ಯ, ಕಲ್ಲು ಸಕ್ಕರೆ, ಗೊಂಡಂಬಿ, ಸಿರಿಧಾನ್ಯಗಳು, ಹೀಗೆ ವಿಭಿನ್ನವಾಗಿರುವ ಚಿಕ್ಕಗಾತ್ರದ ಶಿವಲಿಂಗಗಳನ್ನು ನಿರ್ಮಾಣ ಮಾಡಲಾಗಿದೆ.
ಶಿವರಾತ್ರಿಯ ಹಿನ್ನಲೆ ನಿರ್ಮಾಣ ಮಾಡಲಾದ ಶೇಂಗಾ ಶಿವಲಿಂಗದ ದರ್ಶನಕ್ಕೆ ಫೆ.18ರಿಂದ ಹತ್ತು ದಿನಗಳಕಾಲ ಭಕ್ತರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:49 am, Sat, 18 February 23