ಕಲಬುರಗಿ: ಲಾಡ್ಲೇ ಮಶಾಕ್ ದರ್ಗಾದಲ್ಲಿ ಶಾಂತಿಯುತವಾಗಿ ನಡೆದ ಉರುಸ್, ಶಿವಪೂಜೆ
ದರ್ಗಾದಲ್ಲಿ ಒಂದೇ ದಿನ ಉರುಸ್ ಮತ್ತು ಶಿವಲಿಂಗಕ್ಕೆ ಪೂಜೆ ಇದ್ದಿದ್ದರಿಂದ, ಎಲ್ಲರಲ್ಲಿ ಆತಂಕ ಮನೆ ಮಾಡಿತ್ತು. ಆದ್ರೆ ಎರಡು ಸಮುದಾಯದ ಜನರ ಶಾಂತಿಯ ವರ್ತನೆಯಿಂದ, ದರ್ಗಾದಲ್ಲಿ ಇಂದು ಉರುಸ್ ನಡೆಯಿತು ಜೊತೆಗೆ ಶಿವಲಿಂಗಕ್ಕೆ ಪೂಜೆ ಕೂಡಾ ನಡೆಯಿತು.
ಕಲಬುರಗಿ: ಜಿಲ್ಲೆಯ ಆಳಂದ ಪಟ್ಟಣದಲ್ಲಿ ಇಂದು(ಫೆ.18)ಪೊಲೀಸ್ ಮಯವಾಗಿತ್ತು. ಕಳೆದ ಒಂದು ವಾರದಿಂದ ಪಟ್ಟಣದಲ್ಲಿ ಬೀಡು ಬಿಟ್ಟಿದ್ದ ಸಾವಿರಕ್ಕೂ ಹೆಚ್ಚು ಪೊಲೀಸರು, ಬಿಗಿ ಬಂದೋಬಸ್ತ್ ಮಾಡಿದ್ದರು. ಇನ್ನು ಇಂತಹದೊಂದು ಬಿಗಿ ಪೊಲೀಸ್ ಬಂದೋಬಸ್ತ್ಗೆ ಕಾರಣ, ಪಟ್ಟಣದಲ್ಲಿರುವ ಲಾಡ್ಲೇ ಮಶಾಕ್ ದರ್ಗಾದಲ್ಲಿನ ಶಿವಲಿಂಗ ವಿವಾದ. ಹೌದು ಆಳಂದ ಪಟ್ಟಣದಲ್ಲಿರುವ ಸುಪ್ರಸಿದ್ದ ಲಾಡ್ಲೇ ಮಶಾಕ್ ದರ್ಗಾಗದಲ್ಲಿ ರಾಘವ ಚೈತನ್ಯ ಶಿವಲಿಂಗವಿದ್ದು, ಆ ಶಿವಲಿಂಗ ಪೂಜೆಯ ವಿಚಾರ, ಕಳೆದ ಶಿವರಾತ್ರಿ ಹಬ್ಬದ ದಿನ ದೊಡ್ಡ ಮಟ್ಟದ ಘರ್ಷಣೆಗೆ ಕಾರಣವಾಗಿತ್ತು. ದರ್ಗಾದ ಹೊರಗಡೆ ಇದ್ದ ಮುಸ್ಲಿಂ ಸಮುದಾಯದ ಕೆಲ ಕಿಡಿಗೇಡಿಗಳು ಇದ್ದಕ್ಕಿದ್ದಂತೆ ಕಲ್ಲು ತೂರಾಟ ನಡೆಸಿದ್ದರಿಂದ ಘಟನೆಯಲ್ಲಿ ಅನೇಕ ವಾಹನಗಳು ಜಖಂ ಆಗಿದ್ದವು. ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ಹರಸಾಹಸ ಪಟ್ಟಿದ್ದರು.
ಇನ್ನು ಈ ವರ್ಷ ಕೂಡಾ ದರ್ಗಾದಲ್ಲಿರುವ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು, ಕಲಬುರಗಿ ವಕ್ಪ್ ಟ್ರಿಬೂನಲ್ ನ್ಯಾಯಾಲಯ, ಶ್ರೀರಾಮಸೇನೆಯ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಸೇರಿದಂತೆ 15 ಹಿಂದೂ ಮುಖಂಡರಿಗೆ ಅವಕಾಶ ನೀಡಿತ್ತು. ಜೊತೆಗೆ ಅಂದೇ ದರ್ಗಾಗದಲ್ಲಿ ಉರುಸು ಇರೋದರಿಂದ, ಹದಿನೈದು ಮುಸ್ಲಿಂ ಧಾರ್ಮಿಕ ಮುಖಂಡರಿಗೂ ಅವಕಾಶ ನೀಡಿ, ಪೆಬ್ರವರಿ 13 ರಂದು ಆದೇಶ ಹೊರಡಿಸಿತ್ತು. ಮುಂಜಾನೆ ಎಂಟು ಗಂಟೆಯಿಂದ ಹನ್ನೆರಡು ಗಂಟೆ ವರಗೆ ಮುಸ್ಲಿಂ ಸಮಾಜದ ಹದಿನೈದು ಜನರು ಉರುಸ್ ಆಚರಿಸಬೇಕು. ಮಧ್ಯಾಹ್ನ ಎರಡು ಗಂಟೆಯಿಂದ ಸಂಜೆ ಆರು ಗಂಟೆವರಗೆ ಹಿಂದೂ ಸಮಾಜದ ಹದಿನೈದು ಜನರು, ದರ್ಗಾದಲ್ಲಿರುವ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಸಮಯವನ್ನು ನಿಗದಿ ಮಾಡಲಾಗಿತ್ತು. ಇದನ್ನೇ ಕಲಬುರಗಿ ಹೈಕೋರ್ಟ್ ಪೀಠ ಎತ್ತಿ ಹಿಡದಿತ್ತು. ಹೀಗಾಗಿ ಇಂದು ಮುಸ್ಲಿಂ ಸಮಾಜದ ಹದಿನಾಲ್ಕು ಜನರು, ದರ್ಗಾದೊಳಗೆ ಹೋಗಿ ಉರಸ್ ಆಚರಿಸಿ ಬಂದ್ರು. ಉರುಸ್ ಆಚರಿಸಿ ಬಂದ ಮುಸ್ಲಿಂ, ಸಮುದಾಯದವರು, ಆಳಂದನಲ್ಲಿ ಹಿಂದೂ ಮುಸ್ಲಿಂರು ಒಂದೇ ಇದ್ದೇವೆ. ಆದ್ರೆ ರಾಜಕೀಯ ಕಾರಣಕ್ಕಾಗಿ ಇದನ್ನು ವಿವಾದ ಮಾಡಲಾಗುತ್ತಿದೆ ಅಂತ ಹೇಳಿದ್ರು.
ಇದನ್ನೂಓದಿ:ಕಲಬುರಗಿ: ದರ್ಗಾದಲ್ಲಿ ಶಿವಲಿಂಗ ಪೂಜೆ, ಎಡಿಜಿಪಿ ಅಲೋಕ್ ಕುಮಾರ್ರಿಂದ ಭದ್ರತೆ ಪರಿಶೀಲನೆ
ಇತ್ತ ದರ್ಗಾದಲ್ಲಿರುವ ಶಿವಲಿಂಗ ಪೂಜೆಗೆ ಹದಿನೈದು ಜನರಿಗೆ ಮಾತ್ರ ಅವಕಾಶ ಇದಿದ್ದರಿಂದ, ಆಳಂದ ಪಟ್ಟಣದ ಹೊರವಲಯದಲ್ಲಿ ಹಿಂದೂಪರ ಸಂಘಟನೆಗಳ ವತಿಯಿಂದ ಮಹಾಶಿವರಾತ್ರಿ ಮಹಾಸಂಗಮ ಕಾರ್ಯಕ್ರಮ ಆಯೋಜಿಸಿದ್ದರು. ಕಾರ್ಯಕ್ರಮದಲ್ಲಿ ಸಾವಿರಾರು ಹಿಂದೂಗಳು, ಶಿವನ ಮೂರ್ತಿಗೆ ಪೂಜೆ ಸಲ್ಲಿಸಿದ್ರು. ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಸೇರಿದಂತೆ ಆಳಂದ ಶಾಸಕ ಸುಭಾಷ್ ಗುತ್ತೇದಾರ್ ಕಾರ್ಯಕ್ರಮದಲ್ಲಿ ಬಾಗಿಯಾದ್ರು. ಕಾರ್ಯಕ್ರಮದ ನಂತರ ಸಿದ್ದಲಿಂಗ ಸ್ವಾಮೀಜಿ, ಶಾಸಕ ಸುಭಾಷ್ ಗುತ್ತೇದಾರ್, ಬಸವರಾಜ್ ಮತ್ತಿಮೂಡ್ ಸೇರಿ ಹದಿನೈದು ಜನರು, ದರ್ಗಾದೊಳಗೆ ಹೋಗಿ ದರ್ಗಾದ ಆವರಣದಲ್ಲಿರುವ ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ್ರು. ಇನ್ನು ರಾಘವ ಚೈತನ್ಯರ ಪೂಜೆ ನಿರಂತರವಾಗಿ ನಡೆಯಬೇಕು, ಅಲ್ಲಿ ದೇವಸ್ಥಾನ ನಿರ್ಮಾಣವಾಗೋವರಗೆ ನಮ್ಮ ಹೋರಾಟ ಮುಂದುವರಿಯುತ್ತೆ ಅಂತಿದ್ದಾರೆ ಸಿದ್ದಲಿಂಗ ಸ್ವಾಮೀಜಿ.
ಕಳೆದ ವರ್ಷ ಪೂಜೆ ವಿಚಾರ ದೊಡ್ಡ ಘರ್ಷಣೆಗೆ ಕಾರಣವಾಗಿತ್ತು. ಆದ್ರೆ ಈ ವರ್ಷ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ, ಉರುಸ್ ಮತ್ತು ಶಿವಲಿಂಗ ಪೂಜೆ ಎರಡು ಕೂಡಾ ಶಾಂತಿಯುತವಾಗಿ ನಡೆದವು. ಎರಡು ಕೋಮಿನ ಜನರು, ಕಾನೂನು ಕೈಗೆತ್ತಿಕೊಳ್ಳದೆ ಶಾಂತಿಯಿಂದ ವರ್ತಿಸಿದ್ದರಿಂದ, ಮತ್ತು ಪೊಲೀಸರ ಅವಿರತ ಶ್ರಮದಿಂದ, ಶಾಂತಿಯುತವಾಗಿ ಪೂಜೆ, ಉರುಸ್ ನಡೆದಿದೆ. ಆದ್ರೆ ಈ ವಿವಾದ ಇಲ್ಲಿಗೆ ಮುಗಿಯುವ ಯಾವುದೇ ಲಕ್ಷಣಗಳು ಮಾತ್ರ ಇಲ್ಲ.
ವರದಿ: ಸಂಜಯ್ ಟಿವಿ9 ಕಲಬುರಗಿ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:38 am, Sun, 19 February 23