ಕಲಬುರಗಿ, ಫೆ.25: ವೈದ್ಯ ಪಿಜಿ ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ಸಹಾಯ ಆಗಲಿ ಅಂತಾ ಪ್ರತಿ ತಿಂಗಳು ಸರ್ಕಾರದ ನಿಯಮಾವಳಿಯಂತೆ ಸ್ಟೈಫಂಡ್ ನೀಡಲಾಗುತ್ತದೆ. ಆದರೆ, ಈ ಶಿಷ್ಯ ವೇತನಕ್ಕೆ ಕನ್ನ ಹಾಕಿದ್ದ ಕಲಬುರಗಿಯ (Kalaburagi) ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಮಹಾವಿದ್ಯಾಲಯದ ಆಡಳಿತ ಮಂಡಳಿ ವಿರುದ್ಧ ಕೊನೆಗೂ ವಿದ್ಯಾರ್ಥಿಗಳು ದೂರು ನೀಡಿದ್ದಾರೆ.
ನೂರಾರು ಕೋಟಿ ಹಣವನ್ನ ನುಂಗಿ ನೀರು ಕುಡಿದಿರುವ ವೈದ್ಯಕೀಯ ಕಾಲೇಜಿನ ಹಗರಣದ ಬಗ್ಗೆ ಟಿವಿ9 ಬಯಲಿಗೆಳೆದಿತ್ತು. ಆದರೆ ತಮ್ಮ ಭವಿಷ್ಯಕ್ಕೆ ತೊಂದರೆಯಾಗುತ್ತೆ ಅಂತ ಸುಮ್ಮನಿದ್ದ ವಿಧ್ಯಾರ್ಥಿಗಳು ಕೊನೆಗೂ ಧೈರ್ಯ ಮಾಡಿ ಠಾಣೆ ಮೆಟ್ಟಿಲೇರಿದ್ದಾರೆ. ತಮ್ಮ ಶಿಷ್ಯವೇತನವನ್ನ ಆಡಳಿತ ಮಂಡಳಿ ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.
ಕಾಲೇಜು ಆಡಳಿತ ಮಂಡಳಿ ವಿರುದ್ಧ ವಿದ್ಯಾರ್ಥಿಗಳು ದೂರು ನೀಡಿದರೂ ಪೊಲೀಸರು ಮಾತ್ರ ನಾನಾ ಕಾರಣಗಳನ್ನು ಹೇಳಿ ಎಫ್ಐಆರ್ ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ. ಖುದ್ದು 30 ಕ್ಕೂ ಹೆಚ್ಚು ವಿದ್ಯಾರ್ಥಿಗಳು ದೂರು ನೀಡಿದರೂ ಎಫ್ಐಆರ್ ದಾಖಲು ಮಾಡಿಲ್ಲ ತಡರಾತ್ರಿಯವರೆಗೂ ಠಾಣೆಯ ಮುಂದೆ ವಿದ್ಯಾರ್ಥಿಗಳು ನಿಂತಿದ್ದರು. ಇದೇ ವೇಳೆ ಠಾಣೆಗೆ ಕಾಲೇಜು ಡೀನ್ ಅವರನ್ನೂ ಪೊಲೀಸರು ಕರೆದಿದ್ದಾರೆ. ಆ ಮೂಲಕ ಬೇದರುಸುವ ತಂತ್ರ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ದೂರು ದಾಖಲಾಗುವ ಮುನ್ನ ಡೀನ್ ಠಾಣೆಗೆ ಬಂದಿದ್ದು ಹೇಗೆ? ಪೊಲೀಸರ ನಡೆಯ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಇದನ್ನೂ ಓದಿ: ಕಲಬುರಗಿ ಮೆಡಿಕಲ್ ಕಾಲೇಜಿನಲ್ಲಿ ಕೋಟ್ಯಂತರ ಶಿಷ್ಯವೇತನ ಗೋಲ್ ಮಾಲ್, ಆಡಿಯೋದಲ್ಲಿ ಆಡಳಿತ ಮಂಡಳಿ ಕಳ್ಳಾಟ ಬಯಲು
ವೈದ್ಯ ಪಿಜಿ ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ಸಹಾಯ ಆಗಲಿ ಅಂತಾ ಪ್ರತಿ ತಿಂಗಳು ಸರ್ಕಾರದ ನಿಯಮಾವಳಿಯಂತೆ ಸ್ಟೈಫಂಡ್ ನೀಡಲಾಗುತ್ತದೆ. ಆದರೆ ಕಲಬುರಗಿಯ MRMC ಮೆಡಿಕಲ್ ಕಾಲೇಜು ಮಾತ್ರ ಆ ಶಿಷ್ಯವೇತನದಲ್ಲಿ ಭಾರೀ ಕಳ್ಳಾಟವಾಡಿರುವುದು ಬಟಾಬಯಲಾಗಿತ್ತು. ವಿದ್ಯಾರ್ಥಿಗಳಿಂದ ಮೊದಲೆ ಬ್ಲ್ಯಾಂಕ್ ಚೆಕ್ ಪಡೆದು ಶಿಷ್ಯವೇತನವನ್ನ ವಿದ್ಯಾರ್ಥಿಗಳ ಖಾತೆಗೆ ಜಮಾ ಆದ ತಕ್ಷಣ, ಕಾಲೇಜು ಆಡಳಿತ ಮಂಡಳಿ ಡ್ರಾ ಮಾಡಿಕೊಂಡು ಪಿಜಿ ವಿದ್ಯಾರ್ಥಿಗಳಿಗೆ ಮೋಸ ಮಾಡುತ್ತಿತ್ತು.
ಪಿಜಿ ವೈದ್ಯ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಧೋಕಾ ಬಗ್ಗೆ ದಾಖಲೆಗಳೇ ಹೇಳುತ್ತಿವೆ. ತಮ್ಮ ಶಿಕ್ಷಣಕ್ಕೆ ತೊಂದರೆ ಮಾಡಬಹುದು ಅಂತಾ ಬಹಿರಂಗವಾಗಿ ಅನ್ಯಾಯ ಬಗ್ಗೆ ವಿದ್ಯಾರ್ಥಿಗಳು ಹೇಳುತ್ತಿಲ್ಲ. ಆದರೆ ತಮಗಾಗುತ್ತಿರುವ ಅನ್ಯಾಯದ ಬಗ್ಗೆ ವಿದ್ಯಾರ್ಥಿಗಳೇ ಸಾಮಾಜಿಕ ಕಾರ್ಯಕರ್ತರ ಬಳಿ ಮಾತನಾಡಿರೋ ಆಡಿಯೋ ವೈರಲ್ ಆಗಿದ್ದು, ಗೋಲ್ ಮಾಲ್ ಬಟಾಬಯಲಾಗಿದೆ. MRMC ಮೆಡಿಕಲ್ ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ಮೋಸ ಮಾಡಿರುವ ಗಂಭೀರ ಆರೋಪ ಕೇಳಿ ಬಂದಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ