ಕಲಬುರಗಿ, ಜ.4: ಅಯೋಧ್ಯಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರದಲ್ಲಿ ಶ್ರೀರಾಮಲಲ್ಲಾನ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಜನವರಿ 22 ರಂದು ನಡೆಯಲಿದೆ. ಈ ನಡುವೆ ದೇಶಾದ್ಯಂತ ರಾಮಾಯಣಕ್ಕೆ ಸಾಕ್ಷಿಯಾಗಿ ನಿಂತಿರುವ ಹಲವು ಗ್ರಾಮಗಳು ಹೆಸರುಗಳು ಮುನ್ನೆಲೆಗೆ ಬಂದಿವೆ. ಕರ್ನಾಟಕ ಭಾಗದಲ್ಲಿ ಸೀತಾರಾಮ ಸಂಚರಿಸಿದ್ದಕ್ಕೆ ಅನೇಕ ಕುರುಹುಗಳು ಸಿಕ್ಕಿದ್ದು, ಇದೀಗ ಕಲಬುರಗಿ (Kalaburagi) ಜಿಲ್ಲೆಯ ಆಳಂದ ತಾಲೂಕಿನ ನರೋಣಾ (Narona) ಗ್ರಾಮದಲ್ಲಿ ರಾಮ ಶಿವಲಿಂಗ (Shiv Ling) ಸ್ಥಾಪಿಸಿದ ವಿಚಾರ ಬೆಳಕಿಗೆ ಬಂದಿದೆ.
ಆಯೋಧ್ಯ ಶ್ರೀರಾಮನಿಗೂ ಕಲಬುರಗಿ ಜಿಲ್ಲೆಗೂ ಅವಿನಾಭಾವ ನಂಟು ಇದೆ ಎಂಬುದಕ್ಕೆ ನರೋಣಾ ಗ್ರಾಮ ಸಾಕ್ಷಿಯಾಗಿ ನಿಂತಿದೆ. ಅಖಂಡ ಭಾರತದಲ್ಲಿ ರಾಮೇಶ್ವರದಲ್ಲಿ ಬಿಟ್ಟರೆ ನರೋಣಾ ಗ್ರಾಮದಲ್ಲಿ ಮಾತ್ರ ರಾಮ ಸ್ಥಾಪಿಸಿದ ಶಿವಲಿಂಗವನ್ನು ಕಾಣಬಹುದು. ಈ ಶಿವಲಿಂಗ ಇತಿಹಾಸದ ಪುಟದಲ್ಲಿ ಅಚ್ಚಳಿಯದೆ ಉಳಿದಿದೆ.
ಬ್ರಾಹ್ಮಣನಾಗಿದ್ದ ರಾಕ್ಷಸರ ರಾಜ ರಾವಣನ ಸಂಹಾರದ ಬಳಿಕ ಪ್ರಭು ಶ್ರೀರಾಮನಿಗೆ ಬ್ರಹ್ಮಹತ್ಯೆ ದೋಷ ಕಾಡುತ್ತಿತ್ತು. ರಾವಣ ಹತ್ಯೆಯ ದೋಷ ಪರಿಹಾರಾರ್ಥವಾಗಿ ರಾಮನು ಅನೇಕ ಪೂಜೆಗಳನ್ನು ನಡೆಸಿದ್ದನು. ಅಲ್ಲದೆ, ನರೋಣಾ ಗ್ರಾಮದಲ್ಲೇ ಶಿವಲಿಂಗ ಸ್ಥಾಪನೆ ಮಾಡಿದ್ದನು.
ಇದನ್ನೂ ಓದಿ: ಬಾಗಲಕೋಟೆ: ಬಿಲ್‌ಕೆರೂರು ಗ್ರಾಮಕ್ಕೂ ರಾಮಾಯಣಕ್ಕೂ ಇದೆ ನಂಟು; ಏನದು ಗೊತ್ತಾ?
ಶಿವ ಭಕ್ತನಾಗಿದ್ದ ರಾವಣ ಕೋಟಿ ಲಿಂಗ ಸ್ಥಾಪನೆಯ ಹರಕೆ ಹೊತ್ತುಕೊಂಡಿದ್ದನು. ಇದನ್ನು ಪೂರ್ಣಗೊಳಿಸುವ ಮುನ್ನವೇ ಪ್ರಭು ಶ್ರೀರಾಮನಿಂದ ರಾವಣನ ಸಂಹಾರವಾಗಿದೆ. ಹೀಗಾಗಿ ಪ್ರತಿದಿನ ರಾತ್ರಿ ಶಿವಲಿಂಗ ಸ್ಥಾಪನೆ ಬಗ್ಗೆ ಶ್ರೀರಾಮನಿಗೆ ಕನಸು ಬೀಳುತ್ತಿತ್ತಂತೆ. ಇದೇ ಕಾರಣಕ್ಕೆ ಕೋಟಿ ಶಿವಲಿಂಗವನ್ನು (ಕೊನೆಯ ಶಿವಲಿಂಗ) ನರೋಣಾ ಗ್ರಾಮದಲ್ಲಿ ಸ್ಥಾಪಿಸಿದ್ದನು.
ಅಂದಿನ ಚಿಮಣಾಪುರ ಗ್ರಾಮಕ್ಕೆ ಬಂದಿದ್ದ ಶ್ರೀರಾಮ, ಗ್ರಾಮದ ಕ್ಷೆಮಲಿಂಗೇಶ್ವರ ದೇವಸ್ಥಾನ ಸಪ್ತ ಕುಂಡದಲ್ಲಿ ಗಂಗಾಸ್ಥಾನ ಮಾಡಿದ್ದನು. ಬಳಿಕ ಅಲ್ಲಿಯೇ ಶಿವಲಿಂಗ ಸ್ಥಾಪನೆ ಮಾಡಿ ಪಾಪ ಪರಿಹಾರ ಮಾಡಿಕೊಂಡಿದ್ದನು. ಅಲ್ಲದೆ, ಚಿಮಣಾಪುರವನ್ನ ನಾರಾವಣ ಎಂದು ಶ್ರೀರಾಮನೇ ಹೆಸರಿಟ್ಟಿದ್ದ.
ಕಾಲ ಕ್ರಮೇಣ ನಾರಾವಣ ಹೆಸರು ನರೋಣಾ ಆಗಿ ಬದಲಾವಣೆ ಆಯಿತು. ನರೋಣಾದಲ್ಲಿ ಇಂದಿಗೂ ರಾಮನಿಂದ ಸ್ಥಾಪಿತವಾದ ಶಿವಲಿಂಗ ಪ್ರಸಿದ್ಧಿಯಾಗಿದೆ. ರಾಮಾಯಣ ಕಾಲದ ಪ್ರಸಿದ್ಧ ಈ ಕ್ಷೇತ್ರಕ್ಕೆ ನೂರಾರು ಭಕ್ತರು ಆಗಮಿಸಿ ನಿತ್ಯವೂ ದರ್ಶನ ನಡೆಯುತ್ತದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:33 am, Thu, 4 January 24