ಕಲಬುರಗಿ, ಜುಲೈ 27: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಮನ್ ಕೀ ಬಾತ್ (Mann Ki Baat) ಕಾರ್ಯಕ್ರಮದಲ್ಲಿ ಕಲಬುರಗಿ ನಗರದಲ್ಲಿರುವ ಬಹುಮನಿ ಕೋಟೆಯ (Bahmani Fort) ಬಗ್ಗೆ ಪ್ರಸ್ತಾಪಿಸಿದ್ದು, ಕೋಟೆಯ ವೈಭವದ ಬಗ್ಗೆ ಮಾತನಾಡಿದ್ದಾರೆ. ಯುನೆಸ್ಕೋ ಪಟ್ಟಿಯಲ್ಲಿ 12 ಮರಾಠಾ ಕೋಟೆಗಳು ಸೇರ್ಪಡೆಯಾಗಿದ್ದು, ವಿಶ್ವಪರಂಪರೆಯ ತಾಣಗಳೆಂದು ಗುರುತಿಸಿವೆ. ಅದೇ ಮಾದರಿಯಲ್ಲಿ ದೇಶದ ವಿವಿಧೆಡೆಯಲ್ಲಿ ಅದ್ಭುತವಾದ ಕೋಟೆಗಳು ಇರುವುದನ್ನು ಉಲ್ಲೇಖಿಸಿರುವ ಪ್ರಧಾನಿ ನರೇಂದ್ರ ಮೋದಿ, ಕಲಬುರಗಿಯ ಬಹುಮನಿ ಸುಲ್ತಾನರ ಕಾಲದ ಕೋಟೆಯ ಅದ್ಭುತ ಮತ್ತು ದೊಡ್ಡ ಕೋಟೆಯಾಗಿದೆ ಎಂದು ಹೇಳಿದ್ದಾರೆ.
ದೇಶದ ಹಲವು ಕಡೆ ಇಂತಹ ಅದ್ಭುತ ಕೋಟೆಗಳಿವೆ. ಆತ್ಮಸಮ್ಮಾನದ ಪ್ರತಿಕವಾಗಿವೆ. ರಾಜಸ್ಥಾನ, ಚಿತ್ತೋರ, ರಣತಂಬೋರ, ಅಮೇರ್ನ ಅದ್ಭುತ ಕೋಟೆಗಳ ಸಾಲಿನಲ್ಲಿ ಕಲಬುರಗಿಯ ಕೋಟೆಯನ್ನು ಉಲ್ಲೇಖಿಸಿ, ನಾಡಿನ ಇತಿಹಾಸ, ಪಾರಂಪರಿಕ ತಾಣದ ಸ್ಮರಣೆ ಮೋದಿ ಮಾಡಿದ್ದಾರೆ. ಕಲಬುರಗಿಯ ಕೋಟೆಯೂ ಅತಿ ದೊಡ್ಡದಾಗಿದೆ. ಆ ಸಮಯದಲ್ಲಿ ಕೋಟೆ ಹೇಗೆ ನಿರ್ಮಾಣ ಮಾಡಿದ್ದಾರೆ ಎಂಬುವುದು ಯೋಚಿಸಬೇಕು. ಆ ನಿಟ್ಟಿನಲ್ಲಿ ದೊಡ್ಡ ಗುರಿಗಳು ನಮ್ಮಲ್ಲಿ ಇರಬೇಕು ಎಂದು ಮೋದಿ ಸ್ಫೂರ್ತಿ ತುಂಬಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿ ಪ್ರಶಂಸೆಗೆ ಪಾತ್ರವಾದ ಕಲಬುರಗಿ ರೊಟ್ಟಿಯ ವಿಶೇಷತೆ ಏನು?
ಕಲಬುರಗಿಯಲ್ಲಿ 14ನೇ ಶತಮಾನದಲ್ಲಿ ಹಿಂದು ದೊರೆ ರಾಜಾ ಗುಲ್ಚಂದ್ನಿಂದ ಕೋಟೆಯನ್ನು ನಿರ್ಮಿಸಲಾಗಿತ್ತು. ನಂತರ ಆಡಳಿತಕ್ಕೆ ಬಂದಿದ್ದ ಬಹುಮನಿ ಸುಲ್ತಾನರ ಅಲ್ಲಾಉದ್ದೀನ್ ಬಹುಮನ್ ಷಾನಿಂದ ಕೋಟೆಯನ್ನು ನಿರ್ಮಿಸಲಾಗಿತ್ತು. ಪರ್ಷಿಯನ್ ವಾಸ್ತುಶೈಲಿಯಲ್ಲಿ ಕೋಟೆಯನ್ನು ನಿರ್ಮಿಸಿದ್ದು, ಏಷ್ಯಾದ ಅತಿ ದೊಡ್ಡ ಮಸೀದಿ ಮತ್ತು ವಿಶ್ವದ ಅತಿದೊಡ್ಡ ತೋಪು ಈ ಕೋಟೆಯಲ್ಲಿದೆ.