ಕಲಬುರಗಿ, ಫೆಬ್ರವರಿ 11: ಆಳಂದ ಪಟ್ಟಣದಲ್ಲಿ ಇರುವ ಲಾಡ್ಲೆ ಮಶಾಕ್ ದರ್ಗಾದಲ್ಲಿರುವ (Ladle Mashak Aland) ರಾಘವ ಚೈತನ್ಯ ಶಿವಲಿಂಗದ ದೇವಸ್ಥಾನಕ್ಕೆ ಶಿವರಾತ್ರಿಯಂದು (Maha Shivratri) ಅಡಿಗಲ್ಲು ಹಾಕುತ್ತೇವೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ (Pramod Muthalik) ಹೇಳಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಅವರು, ರಾಘವ ಚೈತನ್ಯ ಅವರು ಈಶ್ವರಲಿಂಗ ಪ್ರತಿಷ್ಠಾಪನೆ ಮಾಡಿದ ಆ ಸ್ಥಳ ಅದು. ಅದನ್ನು ಅತಿಕ್ರಮಣ ಮಾಡಿಕೊಂಡಿದ್ದು ಮುಸ್ಲಿಮರು. ಈಗ ದರ್ಗಾ ಮಾಡಿ ಉರುಸ್ ಮಾಡುತ್ತಿದ್ದಾರೆ. ನೂರಾರು ವರ್ಷದ ಹಿಂದಿನ ಪವಿತ್ರ ಕ್ಷೇತ್ರವಿದು. ಪೂಜೆ ಸಲ್ಲಿಸಲು ಕಳೆದ ವರ್ಷವೇ ಕೋರ್ಟ್ ಅನುಮತಿ ಕೊಟ್ಟಿದೆ ಎಂದರು.
ಅಲ್ಲಿ ಪೂಜೆ ಮಾಡುವುದು ನಮ್ಮ ಹಕ್ಕು. ಶಿವರಾತ್ರಿ ದಿನ ಆ ಸ್ಥಳದಲ್ಲಿ ಸಾವಿರಾರು ಜನ ಅಲ್ಲ, ಲಕ್ಷಾಂತರ ಜನ ಬಂದು ಪೂಜೆ ಮಾಡುತ್ತೇವೆ. ರಕ್ಷಣೆ ನೀಡುವುದು ಸರ್ಕಾರದ ಕೆಲಸ. ಸರ್ಕಾರ ಅದರ ಕರ್ತವ್ಯ ನಿರ್ವಹಿಸಲಿ, ನಾವು ನಮ್ಮ ಕರ್ತವ್ಯ ನಿರ್ವಹಿಸುತ್ತೇವೆ ಎಂದು ಅವರು ಹೇಳಿದರು.
ಆ ಸ್ಥಳದಲ್ಲಿ ಈಶ್ವರ ಲಿಂಗ ಇದ್ದ ಮೇಲೆ ಜೀರ್ಣೋದ್ಧಾರ, ದೇವಸ್ಥಾನ ನಿರ್ಮಾಣ ಮಾಡುವುದು ನಮ್ಮ ಕರ್ತವ್ಯ. ಶಿವರಾತ್ರಿ ದಿನ ಗುದ್ದಲಿ ಪೂಜೆಯಿಂದ ಪ್ರಾರಂಭ ಮಾಡುತ್ತೇವೆ. ಯಾವುದೇ ರೀತಿಯ ಕಾನೂನು ಬಾಹಿರವಾಗಿ ಮಾಡುವುದಿಲ್ಲ. ದೇವಸ್ಥಾನ ಅಲ್ಲಿ ಕಟ್ಟುವುದು ನಿಶ್ಚಿತ ಎಂದು ಮುತಾಲಿಕ್ ಹೇಳಿದ್ದಾರೆ.
ಸಂಸದ ಡಿಕೆ ಸುರೇಶ್ಗೆ ಗುಂಡಿಟ್ಟು ಕೊಲ್ಲಬೇಕು ಎಂಬ ಮಾಜಿ ಸಚಿವ ಈಶ್ವರಪ್ಪ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸುರೇಶ್ ನೀಡಿರುವ ಹೇಳಿಕೆ ಕೂಡ ಖಂಡನೀಯ. ದೇಶಕ್ಕೆ ಸ್ವಾತಂತ್ರ್ಯ ಸಿಗಲು ಎರಡು ನೂರು ವರ್ಷಗಳ ಪರಿಶ್ರಮ ಇದೆ. ಅದಕ್ಕಾಗಿ ರಕ್ತ ಸುರಿದಿದ್ದೇವೆ. ತ್ಯಾಗ, ಬಲಿದಾನದಿಂದ ಕಟ್ಟಿದ ಅಖಂಡ ಭಾರತವನ್ನು ನಾವು ದಕ್ಷಿಣ ಭಾರತ ಮಾಡುತ್ತೇವೆ ಎನ್ನುತ್ತಾರೆ. ಈ ರೀತಿಯ ಹೇಳಿಕೆ ದೇಶ ದ್ರೋಹದ ಹೇಳಿಕೆ. ಭಾಷೆ, ಆರ್ಥಿಕತೆ, ಜಾತಿ ಹೆಸರಿನಲ್ಲಿ ದೇಶ ತುಂಡು ಮಾಡುವುದು ಅಂದರೆ ಏನು ಎಂದು ಪ್ರಶ್ನಿಸಿದರು.
ಕಾಂಗ್ರೆಸ್ನವರು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದರಲ್ಲ, ಯಾಕೆ ಮಾಡಿದ್ದರು? ದೇಶ ಒಡೆಯುವುದಕ್ಕಾ? ಈಗಾಗಲೇ ದೇಶ ಒಡೆದು ಪಾಕಿಸ್ತಾನ ಅಂತ ಮಾಡಿದ್ದಾರೆ. ಈ ವಿಚಾರದಲ್ಲಿ ನೋವು ತಡೆದುಕೊಳ್ಳಲು ಆಗದೆ ಸಿಟ್ಟಿನಿಂದ ಈಶ್ವರಪ್ಪ ಅವರು ಆ ರೀತಿ ಮಾತನಾಡಿದ್ದಾರೆ. ದೇಶ ದ್ರೋಹ ಹೇಳಿಕೆ ನೀಡುವವರನ್ನು ಗುಂಡಿಕ್ಕುವ ಕಾನೂನು ರಚನೆ ಮಾಡುವಂತೆ ಹೇಳಿದ್ದಾರೆ ಎಂದು ಈಶ್ವರಪ್ಪ ಹೇಳಿಕೆಯನ್ನು ಪ್ರಮೋದ್ ಮುತಾಲಿಕ್ ಬೆಂಬಲಿಸಿದರು.
ಇದನ್ನೂ ಓದಿ: ಕಲಬುರಗಿ ಮೆಡಿಕಲ್ ಕಾಲೇಜಿನಲ್ಲಿ ಕೋಟ್ಯಂತರ ಶಿಷ್ಯವೇತನ ಗೋಲ್ ಮಾಲ್, ಆಡಿಯೋದಲ್ಲಿ ಆಡಳಿತ ಮಂಡಳಿ ಕಳ್ಳಾಟ ಬಯಲು
ಈಶ್ವರಪ್ಪ ವಿರುದ್ಧ ದೂರು ದಾಖಲು ವಿಚಾರವಾಗಿ ಪ್ರತಿಕ್ರಿಯಿಸಿ, ಈ ರಾಜಕಾರಣಿಗಳಿಗೆ ಒಂದೇ ಅಸ್ತ್ರ ಇರುವುದು, ಅದು ಪೊಲೀಸ್ ಠಾಣೆ ಮತ್ತು ಹೆದರಿಸುವುದು. ಗೂಂಡಾ ಆ್ಯಕ್ಟ್, ರೌಡಿ ಸೀಡರ್ ಹಾಕೋದೆ ಇವರ ಉದ್ಯೋಗ. ಪೊಲೀಸರ ಮೂಲಕ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಹಿಂದೂಗಳ ಟ್ಯಾಕ್ಸ್ ಹಿಂದುಗಳಿಗೆ ಹಾಗೂ ಮುಸ್ಲಿಮರ ಟ್ಯಾಕ್ಸ್ ಮುಸ್ಲಿಮರಿಗೆ ಹೋಗಬೇಕು ಎಂಬ ಹೇಳಿಕೆ ಸರಿ ಅಲ್ಲ. ಅದು ಮೂರ್ಖತನದ ಹೇಳಿಕೆ ಎಂದು ಮುತಾಲಿಕ್ ಅಭಿಪ್ರಾಯ ಪಟ್ಟಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ