ಕಲಬುರ್ಗಿ: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದ ಪಿಎಸ್ಐ ಹುದ್ದೆಗಳ ನೇಮಕಾತಿ ಹಗರಣದ ಕೇಂದ್ರ ಬಿಂದುವಾಗಿರುವ ನಗರದ ಜ್ಞಾನಜ್ಯೋತಿ ಇಂಗ್ಲಿಷ್ ಶಾಲೆಯು ಮತ್ತೆ ಆರಂಭವಾಗಿದೆ. ಜ್ಞಾನಜ್ಯೋತಿ ಇಂಗ್ಲಿಷ್ ಶಾಲೆಯಲ್ಲಿಯೇ ಪರೀಕ್ಷಾ ಅಕ್ರಮ ನಡೆದಿತ್ತು. ಪ್ರಕರಣ ಸಂಬಂಧ ಈವರೆಗೆ ಸಿಐಡಿ ಪೊಲೀಸರು 32 ಜನರನ್ನು ಬಂಧಿಸಿದ್ದು, ವಿಚಾರಣೆ ಚುರುಕಾಗಿ ನಡೆಯುತ್ತಿದೆ. ಶಾಲೆಯ ಒಡತಿ ದಿವ್ಯಾ ಹಾಗರಗಿ ಮತ್ತು ಅವರ ಪತಿ ರಾಜೇಶ್ ಈಗಾಗಲೇ ಜೈಲಿನಲ್ಲಿದ್ದಾರೆ.
ಮಕ್ಕಳ ಹಿತದೃಷ್ಟಿಯಿಂದ ಶಾಲೆಯನ್ನು ಮತ್ತೆ ತೆರೆಯಲಾಗಿದೆ ಎಂದು ಸಿಬ್ಬಂದಿ ಹೇಳಿದರು. ಸದ್ಯದ ಮಟ್ಟಿಗೆ ದಿವ್ಯಾ ಸೋದರ ಸಂಬಂಧಿಯೊಬ್ಬರು ಶಾಲೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.
ಶ್ರೀಧರ್ ನಿವಾಸದಲ್ಲಿ ಬೃಹತ್ ಮೊತ್ತದ ಹಣ
ಬೆಂಗಳೂರು: ಹಗರದ ಆರೋಪಿ ಶ್ರೀಧರ್ ನಿವಾಸದಲ್ಲಿ ದೊಡ್ಡಮೊತ್ತದ ಹಣ ಪತ್ತೆಯಾಗಿದೆ. ಮೇ 14ರಂದು ಮೊದಲಬಾರಿ ದಾಳಿ ಮಾಡಿದ್ದ ಸಿಐಡಿ ಅಧಿಕಾರಿಗಳಿಗೆ ₹ 16 ಲಕ್ಷ ನಗದು ಸಿಕ್ಕಿತ್ತು. ಉಳಿದ ಹಣ ಸಿಕ್ಕಿರಲಿಲ್ಲ. ಸಿಐಡಿ ಅಧಿಕಾರಿಗಳಿಗೆ ಶ್ರೀಧರ್ ಬಳಿ ಬೃಹತ್ ಮೊತ್ತದ ಹಣ ಇದೆ ಎನ್ನುವ ಮಾಹಿತಿ ಇತ್ತು. ಮೇ 14ರ ದಾಳಿಯ ನಂತರ ಈ ಸಂಬಂಧ ಮತ್ತಷ್ಟು ಮಾಹಿತಿ ಕಲೆಹಾಕಿದರು.
ಶ್ರೀಧರ್ ಆತನ ಗೆಳೆಯರ ಮೂಲಕ ಹಣವನ್ನು ಬೇರೆಡೆಗೆ ಸಾಗಿಸಿರುವುದು ಬೆಳಕಿಗೆ ಬಂತು. ನಂತರ ಶ್ರೀಧರನ ಗೆಳೆಯರನ್ನು ಒಬ್ಬೊಬ್ಬರಾಗಿ ವಿಚಾರಣೆ ಒಳಪಡಿಸಲಾಯಿತು. ಸಿಐಡಿಗೆ ಹೆದರಿ ಮೇ 16ರ ರಾತ್ರಿ ಅವರೆಲ್ಲರೂ ಮತ್ತೆ ಬಸವೇಶ್ವರ ನಗರದ ಶ್ರೀಧರ್ ನಿವಾಸಕ್ಕೆ ಹಣ ತಂದಿಟ್ಟು ಹೋಗಿದ್ದರು. ಹಣವು ಮನೆ ತಲುಪಿದ ಕೆಲವೇ ಗಂಟೆಗಳ ಅಂತರದಲ್ಲಿ ಸಿಐಡಿ ಅಧಿಕಾರಿಗಳು ಮತ್ತೆ ದಾಳಿ ಮಾಡಿದ್ದರು.
ಈ ವೇಳೆ ಕೊಠಡಿಯೊಂದರಲ್ಲಿ ₹ 1.55 ಕೋಟಿ ನಗದು ಪತ್ತೆಯಾಗಿತ್ತು. ಬ್ರೋಕರ್ ಕೇಶವಮೂರ್ತಿ ನಿವಾಸದಲ್ಲಿ ₹ 30 ಲಕ್ಷ ಸಿಕ್ಕಿತ್ತು. ಪಿಎಸ್ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಈವರೆಗೆ ಒಟ್ಟು ₹ 2 ಕೋಟಿ ನಗದನ್ನು ಸಿಐಡಿ ವಶಪಡಿಸಿಕೊಂಡಿದೆ.
Published On - 3:27 pm, Wed, 18 May 22