ಬೆಂಗಳೂರು/ ಕಲಬುರ್ಗಿ: 545 ಪಿಎಸ್ಐ ಹುದ್ದೆಗಳಿಗೆ ನೇಮಕಾತಿಯಲ್ಲಿ (PSI Recruitment scam) ಅಕ್ರಮ ಪ್ರಕರಣದಲ್ಲಿ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿರುವ ಬಂಧಿತ 11 ಅಭ್ಯರ್ಥಿಗಳಿಗೆ 14 ದಿನ ನ್ಯಾಯಾಂಗ ಬಂಧನ ನೀಡಲಾಗಿದೆ. ಪ್ರಕರಣದ ಇಬ್ಬರು ಆರೋಪಿಗಳಿಗೆ 4 ದಿನ ಸಿಐಡಿ ಕಸ್ಟಡಿ ನೀಡಿ ಬೆಂಗಳೂರಿನ 19ನೇ ಎಸಿಎಂಎಂ ನ್ಯಾಯಾಲಯ ಆದೇಶ ಮಾಡಿದೆ. ಈ ಮಧ್ಯೆ, ಬೆಂಗಳೂರಿನ ಈ ಆರೋಪಿಗಳು ಜಡ್ಜ್ ಮುಂದೆ ತನಿಖಾಧಿಕಾರಿಗಳ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ. ಸಿಐಡಿ ಕಸ್ಟಡಿ ಅಂತ್ಯವಾದ ಹಿನ್ನೆಲೆ ಆರೋಪಿಗಳನ್ನು ಇಂದು 19 ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಖಾಲಿ ಪೇಪರ್ ಮೇಲೆ ಸಿಐಡಿ ಸಹಿ ಪಡೆದಿದ್ದಾಗಿ ಆರೋಪ ಮಾಡಿರುವ ಆರೋಪಿಗಳು ವಿಚಾರಣೆಯ ವೇಳೆ ಅವಾಚ್ಯವಾಗಿ ತಮ್ಮನ್ನು ನಿಂದಿಸಿರುವುದಾಗಿ ಜಡ್ಜ್ ಮುಂದೆ ಅಲವತ್ತುಕೊಂಡಿದ್ದಾರೆ. OMR ಮತ್ತು ಕಾರ್ಬನ್ ಕಾಪಿಯಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆ ಪೊಲೀಸರು ಇವರನ್ನು ಬಂಧಿಸಿದ್ದರು.
ದಿವ್ಯಾ-ರಾಜೇಶ್ ಹಾಗರಗಿ ದಂಪತಿಗೆ ಜೈಲುಭಾಗ್ಯ:
ಇನ್ನು ಅತ್ತ ಕಲಬುರಗಿಯಲ್ಲಿ ಬಿಜೆಪಿ ನಾಯಕಿ, ಹಗರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿಯನ್ನು (Kalaburgi Divya Hagaragi) ನ್ಯಾಯಾಂಗ ವಶಕ್ಕೆ ನೀಡಿ ಕಲಬುರಗಿ 3ನೇ ಜೆಎಂಎಫ್ಸಿ ನ್ಯಾಯಾಲಯ ಆದೇಶಿಸಿದೆ. ದಿವ್ಯಾ ಹಾಗರಗಿ 11 ದಿನಗಳ ಸಿಐಡಿ ಕಸ್ಟಡಿ ಇಂದಿಗೆ ಅಂತ್ಯವಾದ ಬಳಿಕ, ಜಡ್ಜ್ ಮುಂದೆ ಹಾಜರುಪಡಿಸಿದ್ದ ಸಿಐಡಿ ತನಿಖಾಧಿಕಾರಿಗಳು ದಿವ್ಯಾಳನ್ನ ಹಾರುಪಡಿಸಿದ್ದರು. ತತ್ಫಲವಾಗಿ ದಿವ್ಯಾ ಹಾಗರಗಿಯನ್ನು ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗಿದೆ. ಪಿಎಸ್ಐ ಪರೀಕ್ಷಾ ಅಕ್ರಮ ಆರೋಪದಡಿ ದಿವ್ಯಾ ಪತಿ ರಾಜೇಶ್ ಈಗಾಗಲೇ (ಏಪ್ರಿಲ್ 18 ರಿಂದ) ಕಲಬುರಗಿ ಜೈಲು ಸೇರಿದ್ದಾನೆ. ಹಾಗಾಗಿ ಪತಿ-ಪತ್ನಿ ಇಬ್ಬರೂ ಜೈಲಲ್ಲಿರಬೇಕಾದ ಸ್ಥಿತಿ ಬಂದೊದಗಿದೆ.
ಪ್ರಕರಣದ ಕಿಂಗ್ಪಿನ್ ‘ಕೈ’ ಶಾಸಕ ಪ್ರಿಯಾಂಕ್ ಖರ್ಗೆ ಬಂಟ:
545 ಪಿಎಸ್ಐ ಹುದ್ದೆಗಳಿಗೆ ನೇಮಕಾತಿ ಅಕ್ರಮ ಪ್ರಕರಣದ ಬಗ್ಗೆ ಶಿವಮೊಗ್ಗದಲ್ಲಿ ಗೃಹ ಖಾತೆ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದು, ಪ್ರಕರಣದ ಕಿಂಗ್ಪಿನ್ ‘ಕೈ’ ಶಾಸಕ ಪ್ರಿಯಾಂಕ್ ಖರ್ಗೆ ಬಂಟನಾಗಿದ್ದಾನೆ. ಈಗಾಗಲೇ ಆತನನ್ನ ಸಿಐಡಿ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ಪರೀಕ್ಷಾ ಅಕ್ರಮದಲ್ಲಿ ಅನೇಕ ಅಧಿಕಾರಿಗಳು ಭಾಗಿ ಆಗಿದ್ದಾರೆ. ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳನ್ನು ಬಂಧಿಸಲಾಗುತ್ತಿದೆ. ಇದು ಪ್ರಾಮಾಣಿಕತೆ ತನಿಖೆಯ ಸಂಕೇತವಾಗಿದೆ. ಶೀಘ್ರದಲ್ಲೇ ತನಿಖೆ ಮುಗಿಸಿ ಮರು ಪರೀಕ್ಷೆ ನಡೆಸಲಾಗುತ್ತದೆ. ಮತ್ತೆ ಈ ರೀತಿ ಆಗದಂತೆ ಅಚ್ಚುಕಟ್ಟಾಗಿ ಪರೀಕ್ಷೆ ನಡೆಸುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: PSI Recruitment Scam: ಆರೋಪಿ ದಿವ್ಯಾ ಹಾಗರಗಿ ಕಾಣಿಸಿಕೊಂಡರು ಬಿಜೆಪಿ ಟ್ವೀಟ್ನಲ್ಲಿ! ಜೊತೆಗೆ ಯಾರಿದ್ದಾರೆ ನೋಡಿ!
ಇದನ್ನೂ ಓದಿ: ಅನ್ನ ಭಾಗ್ಯ, ತಾಳಿ ಭಾಗ್ಯ ಜನರನ್ನ ದರಿದ್ರ ಮಾಡುತ್ತದೆ; ಅದನ್ನ ಬಂದ್ ಮಾಡಿ: ಸಿಎಂ ಬೊಮ್ಮಾಯಿಗೆ ಶಾಸಕ ಯತ್ನಾಳ್ ಒತ್ತಾಯ
Published On - 8:21 pm, Mon, 9 May 22