
ಕಲಬುರಗಿ: ಸಿಡಿಲು ಹೊಡೆದ ಪರಿಣಾಮ 13 ಆಕಳು, 4 ಎತ್ತು ಬಲಿಯಾಗಿರುವಂತಹ ಘಟನೆ ಜಿಲ್ಲೆಯ ಕಾಳಗಿ ತಾಲೂಕಿನ ಲಕ್ಷ್ಮಣ್ ನಾಯಕ್ ತಾಂಡಾದಲ್ಲಿ ನಡೆದಿದೆ. ತಾಂಡಾದ ಹೊರವಲಯದಲ್ಲಿನ ಗುಡ್ಡದ ಮೇಲೆ ಮೇಯುತ್ತಿದ್ದಾಗ ಸಿಡಿಲು ಬಡಿದಿದೆ. ಲಕ್ಷಾಂತರ ಮೌಲ್ಯದ ಆಕಳು, ಎತ್ತು ಕಳೆದುಕೊಂಡ ರೈತರು ಕಂಗಾಲಾಗಿದ್ದಾರೆ. ಕಾಳಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಧಾರವಾಡದ ಕೆಲಗೇರಿ ಬಡಾವಣೆಯಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ, ಬೈಕ್ ಸವಾರ ದೇವಾನಂದ ಕುಕನೂರ(28) ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಧಾರವಾಡ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ರಾತ್ರೋ ರಾತ್ರಿ ಪೀಠೋಪಕರಣ ಕಳ್ಳತನ
ಮನೆ ಒಪ್ಪಂದದ ಹಣ ಕೊಡಲಿಲ್ಲ ಅಂತ ರಾತ್ರೋ ರಾತ್ರಿ ಪೀಠೋಪಕರಣ ಕಳ್ಳತನ ಮಾಡಿರುವಂತಹ ಘಟನೆ ದೇವನಹಳ್ಳಿ ಹೊರವಲಯದ ಪ್ರಸನ್ನಹಳ್ಳಿ ಬಳಿ ನಡೆದಿದೆ. ಒಪ್ಪಂದದ ಪ್ರಕಾರ 15 ಲಕ್ಷ ಹಣ ಕೊಟ್ಟಿಲ್ಲ ಅಂತ ರಾತ್ರೋ ರಾತ್ರಿ ನೂತನ ನಿರ್ಮಾಣ ಹಂತದ ಮನೆಯಲ್ಲಿದ್ದ ಪೀಠೋಪಕರಣಗಳನ್ನ ಗುತ್ತಿಗೆದಾರ ತೆಗೆದುಕೊಂಡು ಹೋಗಿದ್ದಾನೆ. ಗೃಹ ಪ್ರವೇಶದ ಕೆಲಸದಲ್ಲಿದ್ದ ಮಾಲೀಕರಿಗೆ ಶಾಖ್ ಉಂಟಾಗಿದೆ. ದೀಪಕ್ ಎಂಬುವವರು ಹೊಸ ಎರಡಂತಸ್ಥಿನ ಮನೆ ಕಟ್ಟಿಸುತ್ತಿದ್ದರು. ನವೀನ್ ಎಂಬುವವರಿಗೆ 70 ಲಕ್ಷ ಹಣಕ್ಕೆ ಮಾಲೀಕ ಮನೆ ನಿರ್ಮಾಣ ಗುತ್ತಿಗೆ ನೀಡಿದ್ದ. ಆದರೆ ಈ ನಡುವೆ ಗುತ್ತಿಗೆದಾರ ಮಾಲೀಕನ ನಡುವೆ ಮಾತಿನ ಚಕಮಕಿ ನಡೆದು ಕೆಲಸ ನಿಲ್ಲಿಸಲಾಗಿದೆ. ಹೀಗಾಗಿ ಬೇರೆಯವರಿಂದ ಕೆಲಸ ಮಾಡಿಸಿ ಮುಂದಿನ ತಿಂಗಳು ಗೃಹ ಪ್ರವೇಶಕ್ಕೆ ಮಾಲೀಕ ಸಿದ್ಧತೆ ಮಾಡಿಕೊಂಡಿದ್ದ. ಹಣ ಕೊಡಲಿಲ್ಲ ಅಂತ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನ ಹೊತ್ತುಕೊಂಡು ಹೋಗಿ ದಮ್ಕಿ ಆರೋಪ ಹಾಕಲಾಗಿದೆ. ನ್ಯಾಯಕ್ಕಾಗಿ ಮನೆ ಮಾಲೀಕ ದೇವನಹಳ್ಳಿ ಪೊಲೀಸ್ ಠಾಣೆ ಮೊರೆಹೋಗಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಟ್ಟಣದಲ್ಲಿ ಘಟನೆ ದಾಖಲಾಗಿದೆ.
ಕೆಪಿಟಿಸಿಎಲ್ ನೇಮಕಾತಿ ಅಕ್ರಮ: ಇಬ್ಬರ ಬಂಧನ
ಬೆಳಗಾವಿ: ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಕಾಕ ನಗರ ಠಾಣೆ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಗೋಕಾಕ ತಾಲ್ಲೂಕು ಲೋಳಸೂರ ಗ್ರಾಮದ ಯಲ್ಲಪ್ಪ ರಕ್ಷಿ, ಚಿಕ್ಕೋಡಿ ತಾಲ್ಲೂಕು ಜಾಗನೂರ ಗ್ರಾಮದ ದೊಡಮನಿ ಬಂಧಿತರು. ಈ ಇಬ್ಬರ ಬಂಧನದೊಂದಿಗೆ ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ಬಂಧಿತರಾದವರ ಸಂಖ್ಯೆಯು 22ಕ್ಕೆ ಏರಿದಂತೆ ಆಗಿದೆ. ಪರೀಕ್ಷಾ ಕೇಂದ್ರದೊಳಗೆ ಎಲೆಕ್ಟ್ರಾನಿಕ್ಸ್ ಉಪಕರಣ ತೆಗೆದುಕೊಂಡು ಹೋಗಿದ್ದ ಆರೋಪ ನಾಗಪ್ಪ ಅವರ ಮೇಲಿದೆ. ಯಲ್ಲಪ್ಪ ಎಂಬಾತ ನಾಗಪ್ಪನಿಗೆ ಬ್ಲೂಟೂತ್ ಮೂಲಕ ಉತ್ತರ ಹೇಳಿದ್ದ. ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿದ್ದ ಇಬ್ಬರನ್ನೂ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಪೋಷಕರು ಬೈದರೆಂದು ಮನೆ ಬಿಟ್ಟು ಹೋದ ಬಾಲಕಿ
ಬೆಂಗಳೂರು: ಕಡಿಮೆ ತೆಗೆದಿದ್ದಕ್ಕೆ ಪೋಷಕರು ಬೈದರೆಂದು 9ನೇ ತರಗತಿ ಓದುತ್ತಿದ್ದ ಬಾಲಕಿ ಮನೆಬಿಟ್ಟು ಹೋಗಿರುವ ಘಟನೆ ನಂದಿನಿ ಲೇಔಟ್ನಲ್ಲಿ ನಡೆದಿದೆ. ನಿನ್ನೆ ಸಂಜೆ ಮನೆಯಿಂದ ಟ್ಯೂಷನ್ಗೆ ತೆರಳಿದ್ದ ಬಾಲಕಿ ನಂತರ ಟ್ಯೂಷನ್ ಮುಗಿಸಿ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ತೆರಳಿದ್ದಾಳೆ. ಮೆಜೆಸ್ಟಿಕ್ನಿಂದ ಮಂಗಳೂರು ಬಸ್ ಹತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಘಟನೆ ಸಂಬಂಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಂಗಳೂರಿನಲ್ಲಿ ಬಾಲಕಿಯನ್ನು ಹುಡುಕಲು ಪೊಲೀಸರ ನಾಲ್ಕು ತಂಡಗಳು ಶ್ರಮಿಸುತ್ತಿವೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:03 pm, Wed, 19 October 22