ಕಲಬುರಗಿ: ಮಾಜಿ ಸಿಎಂ ಸಿದ್ಧರಾಮಯ್ಯ (Siddaramaiah) ಅವರು ಕೋಲಾರದಿಂದ ಸ್ಪರ್ಧಿಸುವುದಾಗಿ ಬಹಿರಂಗವಾಗಿ ಘೋಷಣೆ ಮಾಡಿದ್ದಾರೆ. ಈ ಕುರಿತಾಗಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಜಿಲ್ಲೆಯ ಆಳಂದ ತಾಲೂಕಿನ ಹಿರೊಳಿ ಗ್ರಾಮದಲ್ಲಿ ಹೇಳಿಕೆ ನೀಡಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಅವರದ್ದು ಇದು ಕೊನೆಯ ಚುನಾವಣೆ. ಆ ಮೇಲೆ ಕೋಲಾರಕ್ಕೂ ಸಿದ್ದರಾಮಯ್ಯ ಬೈಬೈ ಹೇಳಿ ಹೋಗುತ್ತಾರೆ. ಸಿದ್ದರಾಮಯ್ಯ ಸರ್ಕಾರವಿದ್ದಾಗ 5 ವರ್ಷ ಅಭಿವೃದ್ಧಿ ಏನೂ ಮಾಡಲಿಲ್ಲ. ಈಗಲಾದ್ರೂ ಸಿದ್ದರಾಮಯ್ಯ ಅಭಿವೃದ್ಧಿ ಮಾಡ್ತೀನಿ ಅಂತಾ ಹೇಳಿದ್ದಾರಾ? ನೀರಾವರಿ ಯೋಜನೆಗೆ 5 ಲಕ್ಷ ಕೋಟಿ ರೂ. ನೀಡುವೆ ಅಂತಾ ಹೇಳ್ತಾರೆ. ಐದು ವರ್ಷ ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಏನು ಮಾಡಿದ್ರು? ನೀರೇ ಕೊಡದವರು ಮಜ್ಜಿಗೆ ಕೊಡ್ತಾರಾ ಎಂದು ಪ್ರಶ್ನಿಸಿದರು. ಕೋಲಾರದಲ್ಲಿ ಜನರ ಆಶೀರ್ವಾದದಿಂದ ಜೆಡಿಎಸ್ ಅಭ್ಯರ್ಥಿ ಗೆಲ್ಲುತ್ತಾರೆ. ನಮ್ಮ ಅಭ್ಯರ್ಥಿ ಗೆಲ್ಲುವ ಬಗ್ಗೆ ಸಂಪೂರ್ಣ ವಿಶ್ವಾಸ ಇದೆ ಎಂದು ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.
ಕೊನೆಯ ಹಂತದಲ್ಲಿಯಾದ್ರು ಯಾವ ಕ್ಷೇತ್ರದಿಂದ ಸ್ಪರ್ದೆ ಮಾಡಬೇಕು ಅಂತ ತೀರ್ಮಾನ ಮಾಡಿದ್ದಾರೆ. ಇನ್ನಾದ್ರು ಮಾಜಿ ಸಿಎಂ ಬಗ್ಗೆ ಲಘುವಾಗಿ ಮಾತನಾಡೋದು ತಪ್ಪುತ್ತದೆ. ಬಿಜೆಪಿಯವರು ಮಾತನಾಡುವುದು ತಪ್ಪುತ್ತದೆ. ಸಿದ್ದರಾಮಯ್ಯ ಅವರು ಅನುಭವಯಿರುವ ದೊಡ್ಡ ರಾಜಕಾರಣಿ. ಸೀನಿಯರ್ ಲೀಡರ್ ಅವರೊಬ್ಬರೇ ಇರೋದು. ಎಲ್ಲಾ ಲೆಕ್ಕಾಚಾರ ಮಾಡಿ, ಸರ್ವೇ ಮಾಡಿ ನಿರ್ಧಾರ ಕೈಗೊಂಡಿದ್ದಾರೆ. ಅವರವರ ಪಕ್ಷದ ಅಭ್ಯರ್ಥಿ ಗೆಲ್ಲಲು ಎಲ್ಲಾ ರಾಜಕೀಯ ಪಕ್ಷಗಳು ಪ್ರಯತ್ನ ಪಡುತ್ತವೆ. ಸೋಲು, ಗೆಲುವನ್ನು ಜನರು ನಿರ್ಧಾರ ಮಾಡುತ್ತಾರೆ ಎಂದರು.
ಇದನ್ನೂ ಓದಿ: Siddaramaiah: ನಾನು ಕೋಲಾರದಿಂದ ಸ್ಪರ್ಧಿಸಲು ಸಿದ್ಧ, ಆದರೆ ಹೈಕಮಾಂಡ್ ತೀರ್ಮಾನಿಸಬೇಕು: ಸಿದ್ಧರಾಮಯ್ಯ
ಇನ್ನು ಸಚಿವ ಆರಗ ಜ್ಞಾನೇಂದ್ರ ಬಗ್ಗೆ ನಾನು ಇಲ್ಲಸಲ್ಲದ ಆರೋಪ ಮಾಡಿಲ್ಲ. ರಾಜ್ಯದಲ್ಲಿ ಅತಿಹೆಚ್ಚು ಜನರು ನನ್ನ ಜೊತೆ ಫೋಟೋ ತೆಗೆಸಿಕೊಳುತ್ತಾರೆ. ನನ್ನಷ್ಟು ಯಾವ ರಾಜಕಾರಣಿ ಜತೆಗೂ ಜನ ಫೋಟೋ ತೆಗೆಸಿಕೊಂಡಿಲ್ಲ. ಗೃಹಸಚಿವರ ಜತೆ ಫೋಟೋ ತೆಗೆಸಿಕೊಂಡಿದ್ದು ತಪ್ಪಲ್ಲ. ಆದರೆ ಸ್ಯಾಂಟ್ರೋ ರವಿ ಸರ್ಕಾರದ ಅಧಿಕಾರದಲ್ಲಿ ಭಾಗಿಯಾಗಿದ್ದಾನೆ. ಯಾವ್ಯಾವ ಇಲಾಖೆಗಳಲ್ಲಿ ಎಷ್ಟು ವರ್ಗಾವಣೆ ಆಗಿದೆ ತನಿಖೆ ಮಾಡಿಸಿ. ಆತನೇ ತಾನು ಡಿಜಿ ಮತ್ತು ಐಜಿಪಿ ಜತೆ ನೇರ ಸಂಪರ್ಕದಲ್ಲಿದ್ದೇನೆ ಅಂತಾನೆ. ಹೀಗಿರುವಾಗ ಪೊಲೀಸ್ ಇಲಾಖೆಯಿಂದ ಹೇಗೆ ತನಿಖೆ ಮಾಡುತ್ತೀರಿ ಎಂದು ಪ್ರಶ್ನಿಸಿದರು.
ಬಿಜೆಪಿ ನಾಯಕರು ಭಯೋತ್ಪಾದನೆ ಬಗ್ಗೆ ಮಾತನಾಡುತ್ತಾರೆ. ಆದ್ರೆ ಸ್ಯಾಂಟ್ರೋ ರವಿ ಪ್ರಕರಣ ಅದಕ್ಕಿಂತ ದೊಡ್ಡ ಟೆರರಿಸಂ. ಭಯೋತ್ಪಾದನೆ ಅಮಾಯಕರ ಪ್ರಾಣ ತೆಗೆದುಕೊಳ್ಳುತ್ತದೆ. ಸಮಾಜಘಾತುಕ ಕೃತ್ಯಗಳು ಸಮಾಜವನ್ನೇ ಬಲಿ ತೆಗೆದುಕೊಳ್ಳುತ್ತದೆ. ನೀವು ಪೊಲೀಸರಿಂದ ಈ ವ್ಯಕ್ತಿ ಬಗ್ಗೆ ಏನು ತನಿಖೆ ಮಾಡಿಸುತ್ತೀರಿ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ಆಗಲಿ. ಸ್ಯಾಂಟ್ರೋ ರವಿ ಜಾಮೀನು ತೆಗೆದುಕೊಳ್ಳುವವರೆಗೂ ಬಿಟ್ಟುದ್ದು ಯಾಕೆ ಎಂದು ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ಮಾಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.