
ಕಲಬುರಗಿ, ಡಿಸೆಂಬರ್ 11: ಆತ ಕಳ್ಳತನ (theft) ಮಾಡುವುದಕ್ಕೆ ಮಹಾರಾಷ್ಟ್ರದಿಂದ ಕನ್ಯಾಕುಮಾರಿಗೆ ಹೊರಟಿದ್ದ. ಆದರೆ ಟಿಕೆಟ್ ತೆಗೆದುಕೊಳ್ಳದೆ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದವನನ್ನು ಟಿಸಿ ಟಿಕೆಟ್ ಚೆಕ್ ಮಾಡಿ ಕಲಬುರಗಿ ರೈಲ್ವೆ ನಿಲ್ದಾಣದಲ್ಲಿ ಕೆಳಗೆ ಇಳಿಸಿದ್ದರು. ಜೇಬಲ್ಲಿ ಒಂದು ರೂ. ಇಲ್ಲದೆ ಇದ್ದವನು ದುಡ್ಡಿಗಾಗಿ ಕನ್ಯಾಕುಮಾರಿ ಆದರೇನು ಕಲಬುರಗಿ (Kalaburagi) ಆದರೇನು ಅಂತಾ ನಗರದಲ್ಲಿ ಕಳ್ಳತನಕ್ಕೆ ಸ್ಕೆಚ್ ಹಾಕಿ ಯಶಸ್ವಿಯಾಗಿ ಮನೆ ಕಳ್ಳತನ ಕೂಡ ಮಾಡಿದ್ದ. ಬಳಿಕ ವಾಪಸ್ ಮಹಾರಾಷ್ಟ್ರಕ್ಕೆ ಪರಾರಿ ಆಗುತ್ತಿದ್ದ ಖತರ್ನಾಕ್ ಕಳ್ಳನನ್ನು ಇದೀಗ ಕಲಬುರಗಿ ಪೊಲೀಸರು ಬಂಧಿಸಿದ್ದಾರೆ.
ಕಲಬುರಗಿ ಪೊಲೀಸರು ಒಬ್ಬ ಖತರ್ನಾಕ್ ಕಳ್ಳನನ್ನು ಲಾಕ್ ಮಾಡಿ ಕಂಬಿ ಎಣಿಸುವಂತೆ ಮಾಡಿದ್ದಾರೆ. ನವೀನ್ ಜೋಶಿ ಬಂಧಿತ ಕಳ್ಳ. ಮೂಲತಃ ಕಾರವಾರ ಜಿಲ್ಲೆಯವನಾದ ನವೀನ್, ಮಹಾರಾಷ್ಟ್ರದ ಪುಣೆಯಲ್ಲಿ ವಾಸವಾಗಿದ್ದ. ಹೋಟೆಲ್ವೊಂದರಲ್ಲಿ ಕುಕ್ ಆಗಿ ಕೆಲಸ ಮಾಡುತ್ತಿದ್ದ ನವೀನ್ಗೆ ದುಡಿದ ದುಡ್ಡು ಕುಡಿಯುವುದಕ್ಕೆ ಸಾಕಾಗುತ್ತಿರಲಿಲ್ಲ. ಹಾಗಾಗಿ ತಾನು ಮಾಡಿದ್ದ ಕೆಲಸದ ಜೊತೆಗೆ ಕಳ್ಳತನ ಪ್ರವೃತ್ತಿಯಾಗಿಸಿಕೊಂಡಿದ್ದ.
ಇದನ್ನೂ ಓದಿ: ಆನೇಕಲ್ ಬಳಿ ಭೀಕರ ಬೈಕ್ ಅಪಘಾತ: ಎದೆ ಝಲ್ ಎನಿಸುವಂತಿದೆ ದೃಶ್ಯ
ಕಳ್ಳತನ ಮಾಡುವುದಕ್ಕೆ ಇತ ಮಹಾರಾಷ್ಟ್ರದಿಂದ ದೂರದ ಕನ್ಯಾಕುಮಾರಿಗೆ ರೈಲಿನಲ್ಲಿ ತೆರಳುತ್ತಿದ್ದ. ಆದರೆ ದುರಂತ ಅಂದರೆ ಟಿಕೆಟ್ ತೆಗೆದುಕೊಳ್ಳುವುದಕ್ಕೂ ದುಡ್ಡಿಲ್ಲದೆ ಉಚಿತವಾಗಿ ಪ್ರಯಾಣಿಸುತ್ತಿದ್ದ. ಆದರೆ ಕಲಬುರಗಿ ಜಿಲ್ಲೆಯ ಗಾಣಗಾಪುರದ ಬಳಿ ಟಿಸಿ ತಪಾಸಣೆ ಮಾಡಿದ್ದು, ಟಿಕೆಟ್ ಇಲ್ಲದ ಕಾರಣಕ್ಕೆ ಇತನನ್ನ ಕಲಬುರಗಿಯಲ್ಲಿ ರೈಲಿನಿಂದ ಇಳಿಸಲಾಗಿದೆ. ದುಡ್ಡಿಲ್ಲದೆ ಪರದಾಟ ನಡೆಸಿದ್ದ ನವೀನ್ ಕಳ್ಳತನ ಮಾಡುವುದಕ್ಕೆ ಕನ್ಯಾಕುಮಾರಿ ಆದರೇನು, ಕಲಬುರಗಿ ಆದರೇನು ಅಂತಾ ನಿರ್ಧರಿಸಿದ್ದ.
ಕಲಬುರಗಿಗೆ ಮೊದಲ ಬಾರಿಗೆ ಆಗಮಿಸಿದ್ದ ನವೀನ್, ನಗರದ ಗಾಬರೇ ಲೇಔಟ್ಗೆ ಎಂಟ್ರಿ ಕೊಟ್ಟಿದ್ದ. ಗಾಬರೇ ಲೇಔಟ್ನಲ್ಲಿರುವ ನಿವೃತ್ತ ಆರ್ಎಫ್ಓ ಈರಣ್ಣಾ ಪಟ್ಟೆದಾರ್ ಎಂಬುವರ ಮನೆಗೆ ಬೀಗ ಹಾಕಿರುವುದನ್ನ ಕಂಡು ಬಿಗ ಮುರಿದು ಮನೆಯಲ್ಲಿದ್ದ ವಸ್ತುಗಳನ್ನ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದ.
ಇನ್ನು ಮನೆ ಕಳ್ಳತನ ಬಳಿಕ ನೇರವಾಗಿ ಕಲಬುರಗಿ ಬಸ್ ನಿಲ್ದಾಣಕ್ಕೆ ಆಗಮಿಸಿ ಬಸ್ ಹಿಡಿದು ಮಹಾರಾಷ್ಟ್ರಕ್ಕೆ ತೆರಳಿದ್ದ. ಇತ್ತ ಊರಿಂದ ವಾಪಸ್ ಬಂದ ಈರಣ್ಣಾ ಪಟ್ಟೆದಾರ್, ಮನೆಯಲ್ಲಿದ್ದ ಚಿನ್ನಾಭರಣ ಕಳ್ಳತನ ಆಗಿರುವುದನ್ನ ನೋಡಿ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಲು ಮುಂದಾಗಿದ್ದರು. ಈರಣ್ಣಾ ಮನೆಯಲ್ಲಿ ಸಿಸಿಟಿವಿ ಇಲ್ಲದ ಕಾರಣ ಪಕ್ಕದ ಮನೆಯಲ್ಲಿದ್ದ ಸಿಸಿಟಿವಿ ದೃಶ್ಯವನ್ನ ಪರಿಶೀಲನೆ ಮಾಡಿದ್ದರು. ಆಗ ಓರ್ವ ವ್ಯಕ್ತಿ ಬ್ಯಾಗ್ ಹಾಕಿಕೊಂಡು ಬಂದು ಕಳ್ಳತನ ಎಸಗಿ ಹೋಗಿರುವ ಅನುಮಾನದ ಮೇರೆಗೆ ಆತ ಎಲ್ಲೆಲ್ಲಿ ಓಡಾಡಿದ್ದಾನೆ ಎಂಬ ಮಾಹಿತಿ ಕಲೆ ಹಾಕುವುದಕ್ಕೆ ಪೊಲೀಸರು ಮುಂದಾಗಿದ್ದರು.
ಆತ ಓಡಾಡಿರುವ ಸಿಸಿಟಿವಿ ದೃಶ್ಯಾವಳಿಯ ಜಾಡು ಹಿಡಿದು ಪೊಲೀಸರು ಕಲಬುರಗಿಯಿಂದ ಮಹಾರಾಷ್ಟ್ರದ ಸೊಲ್ಲಾಪುರಕ್ಕೆ ತೆರಳಿದ್ದರು. ಬಳಿಕ ಅಲ್ಲಿನ ಸಿಸಿಟಿವಿ ಪರಿಶೀಲನೆ ಮಾಡಿದಾಗ ಸೊಲ್ಲಾಪುರದಿಂದ ಪುಣೆಗೆ ತೆರಳಿರುವ ಮಾಹಿತಿ ಸಿಕ್ಕಿತ್ತು. ಜೊತೆಗೆ ಕೆಲ ಟೆಕ್ನಿಕಲ್ ಎವಿಡೆನ್ಸ್ನಿಂದ ಆತ ಬಳಸುತ್ತಿದ್ದ ಮೊಬೈಲ್ ನಂಬರ್ ಪತ್ತೆ ಹಚ್ಚಿದ್ದಾರೆ. ಕೊನೆಗೆ ಮಹಾರಾಷ್ಟ್ರದ ಪುಣೆಯಲ್ಲಿ ಸ್ಟೇಷನ್ ಬಜಾರ್ ಪೊಲೀಸರು ಈ ನವೀನ್ ಜೋಶಿಯನ್ನ ಬಂಧಿಸಿದ್ದಾರೆ.
ಇದನ್ನೂ ಓದಿ: ಸತ್ತಂತೆ ನಟಿಸಿ ದರೋಡೆಕೋರರಿಂದ ಬಚಾವ್ ಆದ ಮಹಿಳೆ : ಶಿಡ್ಲಘಟ್ಟದಲ್ಲೊಂದು ವಿಚಿತ್ರ ಕೇಸ್
ಈ ನವೀನ್ ಎಲ್ಲಿಗೆ ಹೋಗಲಿ ಆತನ ಜೊತೆಗೆ ಒಂದು ಬ್ಯಾಗ್ ಇರ್ತಿತ್ತು. ಆ ಬ್ಯಾಗ್ನಲ್ಲಿ ಕಳ್ಳತನಕ್ಕೆ ಬೇಕಾದ ಎಲ್ಲಾ ವಸ್ತುಗಳಿದ್ದವು. ಸದ್ಯ ಬಂಧಿತನಿಂದ ಕಳ್ಳತನವಾಗಿದ್ದ 20 ಲಕ್ಷ ರೂ ಮೌಲ್ಯದ ಚಿನ್ನಾಭರಣವನ್ನು ಪೊಲಿಸರು ವಶಕ್ಕೆ ಪಡೆದಿದ್ದಾರೆ.
ಬಂಧಿತ ನವೀನ್ ವಿರುದ್ಧ ರಾಯಚೂರಿನಲ್ಲಿ ಒಂದು ಕೇಸ್ ದಾಖಲಾಗಿರುವ ವಿಚಾರ ಕೂಡ ತನಿಖೆಯಲ್ಲಿ ತಿಳಿದುಬಂದಿದೆ. ಈ ನವೀನ್ ಕಲಬುರಗಿಯಲ್ಲಿ ಕಳ್ಳತನ ಮಾಡಿ ಕೊನೆಗೆ ಕಲಬುರಗಿ ಪೊಲೀಸರ ಕೈಗೆ ಸಿಕ್ಕಿಬಿದ್ದು ಜೈಲು ಪಾಲಾಗಿದ್ದಾನೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.