ಕಲಬುರಗಿ, ಮಾ.02: ಮಹಾದೇವಪ್ಪ ರಾಂಪೂರೆ ಮೆಡಿಕಲ್ ಕಾಲೇಜು (MRMC Medical College), ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯಡಿಯಲ್ಲಿ ಬರುವ ಈ ಮೆಡಿಕಲ್ ಕಾಲೇಜಿನಲ್ಲಿ ನೂರಾರು ಜನ ವಿದ್ಯಾರ್ಥಿಗಳು ತಮ್ಮ ಕನಸ್ಸುಗಳನ್ನ ಕಟ್ಟಿಕೊಂಡು ಮೆಡಿಕಲ್ ಓದುತ್ತಿದ್ದಾರೆ. ಅದರಂತೆ ಪ್ರತಿ ತಿಂಗಳು ಪಿಜಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸರ್ಕಾರದಿಂದ 45 ಸಾವಿರದಿಂದ 55 ಸಾವಿರ ರೂಪಾಯಿ ಶಿಷ್ಯ ವೇತನವನ್ನ ನೀಡಲಾಗುತ್ತದೆ. ಆದರೆ, ಕಾಲೇಜು ಆಡಳಿತ ಮಂಡಳಿಯು ವಿದ್ಯಾರ್ಥಿಗಳಿಂದ ಬ್ಲ್ಯಾಂಕ್ ಚೆಕ್ ಮೇಲೆ ಸಹಿ ಮಾಡಿಸಿಕೊಂಡು ಅವರ ಅಕೌಂಟ್‌ನಿಂದ ಕೋಟ್ಯಾಂತರ ರೂಪಾಯಿ ಶಿಷ್ಯವೇತನ ಹಣವನ್ನ ಕೊಳ್ಳೆ ಹೊಡೆದಿತ್ತು. ಈ ಬಗ್ಗೆ ಟಿವಿ9 ದಾಖಲೆ ಸಮೇತ ನಿರಂತರವಾಗಿ ವರದಿಯನ್ನ ಪ್ರಸಾರ ಮಾಡಿತ್ತು. ಇದೀಗ ಎಮ್‌ಆರ್‌ಎಮ್‌ಸಿ ಮೆಡಿಕಲ್ ಕಾಲೇಜು, ಪಿಜಿ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಹಣವನ್ನ ವಾಪಾಸ್ ಮಾಡಿದೆ.
ನಾಲ್ಕು ತಿಂಗಳ ಶಿಷ್ಯ ವೇತನ ಮೊತ್ತವಾದ ನಾಲ್ಕು ಕೋಟಿ ಸ್ಟೈಫಂಡ್ ಹಣವನ್ನ ಬಿಡುಗಡೆ ಮಾಡಿದ್ದು, ನಿನ್ನೆ(ಮಾ.01) ಒಂದೇ ದಿನ ಬ್ಯಾಂಕ್ ಮೂಲಕ ವಿದ್ಯಾರ್ಥಿಗಳ ಅಕೌಂಟ್‌ಗೆ 2.25 ಕೋಟಿ ರೂ. ಹಣವನ್ನ ಜಮಾ ಮಾಡಿದ್ದಾರೆ. ಈ ಹಿನ್ನಲೆ ವಿದ್ಯಾರ್ಥಿಗಳು ನಿಟ್ಟುಸಿರು ಬಿಟ್ಟಿದ್ದು, ಟಿವಿ9 ವರದಿಗೆ ಸಂದ ಜಯ ಎಂದು ಧನ್ಯವಾದ ಹೇಳುತ್ತಿದ್ದಾರೆ.ಇನ್ನು ಎಮ್‌ಆರ್‌ಎಮ್‌ಸಿ ಮೆಡಿಕಲ್ ಕಾಲೇಜು ಒಂದೇ ವರ್ಷದಲ್ಲಿ 300 ಕ್ಕೂ ಅಧಿಕ ಪಿಜಿ ವಿದ್ಯಾರ್ಥಿಗಳ 81 ಕೋಟಿ ರೂಪಾಯಿ ಶಿಷ್ಯವೇತನ ಹಣವನ್ನ ಗುಳುಂ ಮಾಡಿತ್ತು. ಈ ಬಗ್ಗೆ ಟಿರ್ವಿ ವರದಿ ಮಾಡ್ತಿದ್ದಂತೆ, ವಿದ್ಯಾರ್ಥಿಗಳು ಆಡಿಯೋ ಬಾಂಬ್ ಸಿಡಿಸಿ ಕಾಲೇಜು ಆಡಳಿತ ಮಂಡಳಿಯ ವಿರುದ್ಧ ವಾರಗಟ್ಟಲೇ ನಿರಂತರ ಪ್ರತಿಭಟನೆ ಮಾಡಿದ್ದರು. ಜೊತೆಗೆ ಅಕೌಂಟ್‌ನಿಂದ ಹಣ ಡ್ರಾ ಆದ ಬಗ್ಗೆ ವಿದ್ಯಾರ್ಥಿಗಳು ಸೈಬರ್ ಕ್ರೈಂ ಪೊಲೀಸರಿಗೆ ದೂರನ್ನ ಸಹ ನೀಡಿದ್ದರು.
ಇದನ್ನೂ ಓದಿ:ಕಲಬುರಗಿ: ಕೊನೆಗೂ ದೂರು ನೀಡಿದ ವೈದ್ಯಕೀಯ ವಿದ್ಯಾರ್ಥಿಗಳು; FIR ದಾಖಲಿಸದ ಪೊಲೀಸರ ನಡೆ ಮೇಲೆ ಅನುಮಾನ
ಅಲ್ಲದೇ ಟಿವಿ9 ಈ ಬಗ್ಗೆ ದಾಖಲೆಗಳ ಸಮೇತ ನಿರಂತರ ವರದಿ ಪ್ರಸಾರ ಮಾಡಿತ್ತು. ಸಧ್ಯ ಆತಂಕದಿಂದ ವಿದ್ಯಾರ್ಥಿಗಳಿಗೆ ಹಣವನ್ನ ವಾಪಾಸು ಮಾಡಿದ್ದು, ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಂತಾಗಿದೆ. ಇನ್ನು ಈ ಬಗ್ಗೆ ಕಲಬುರಗಿಯಲ್ಲಿ ಪ್ರತಿಕ್ರಿಯಿಸಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ ಶರಣಪ್ರಕಾಶ್ ಪಾಟೀಲ್, ‘ಸ್ಟೈಫಂಡ್ ಹಗರಣದ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಆ ರೀತಿ ಏನಾದರೂ ಆದರೆ, ತನಿಖೆಯಾಗುತ್ತದೆ. ಇನ್ನು ಎಲ್ಲಾ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಗೆ ಸ್ಟೈಫಂಡ್ ಕೊಡುವ ಬಗ್ಗೆ ಖಡಕ್ ಸೂಚನೆ ನೀಡುವುದಾಗಿ ಸಚಿವ ಪಾಟೀಲ್ ಸ್ಪಷ್ಟಪಡಿಸಿದ್ದಾರೆ. ಅದೆನೇ ಇರಲಿ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಿಗಬೇಕಾದ ಸ್ಟೈಫಂಡ್ ಹಣವನ್ನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಗೋಲ್‌ಮಾಲ್ ಮಾಡಿ ಸಿಕ್ಕಿಬಿದ್ದಿರೋದು ಸಾಬೀತಾಗಿದ್ದು, ಇನ್ನಾದರೂ ವಿದ್ಯಾರ್ಥಿಗಳ ಹಿತವನ್ನ ಕಾಪಾಡುವ ಕೆಲಸ ಮಾಡಲಿ ಎನ್ನುವುದು ನಮ್ಮ ಆಶಯ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:17 pm, Sat, 2 March 24