ಕಲಬುರಗಿ: ಜಿಲ್ಲೆ ಅಪರೂಪದ ತೊಟ್ಟಿಲು ಶಾಸ್ತ್ರಕ್ಕೆ ಸಾಕ್ಷಿಯಾಗಿದೆ. ಕಲಬುರಗಿ ನಗರದ ರಾಜಾಪುರ ಬಡಾವಣೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ಹೂಗಳಲ್ಲೇ ಸಿಂಗಾರ.. ಬಲೂನ್ ಕಟ್ಟಿ ಅಲಂಕಾರ ಮಾಡಲಾಗಿತ್ತು. ಮನೆ ತುಂಬಾ ಸಂಭ್ರಮ ಸಡಗರ.. ಬಂದು ಬಳಗವೆಲ್ಲಾ ಸಂತೋಷದಲ್ಲಿ ಮಿಂದಿದ್ದರು. ತೊಟ್ಟಿಲು ಕೂಡ ಸಿದ್ಧವಾಗಿತ್ತು. ಇನ್ಯಾಕೆ ತಡ ಮಗುವನ್ನ ಕರ್ಕೊಂಡ್ ಬಂದು ತೊಟ್ಟಿಲಲ್ಲಿ ಮಲಗಿಸಿ ತೊಟ್ಟಿಲು ಶಾಸ್ತ್ರ ಮಾಡುವುದೇ ಎಂದಾಗ ಅಲ್ಲಿ ಮಗು ಇರಲಿಲ್ಲ ಇದದ್ದು ಕರು.
ಇದೇನಿದು ತೊಟ್ಟಿಲು ಶಾಸ್ತ್ರ ಅಂದ್ರೆ ಮಗು ಅನ್ಕೊಂಡ್ವಿ.. ಇಲ್ಲಿ ಕರು ಕರ್ಕೊಂಡ್ ಬಂದು ತೊಟ್ಟಿಲಿನಲ್ಲಿ ಕೂರಿಸಿ ತೂಗುತ್ತಿದ್ದಾರೆ ಅಂದ್ರಾ.. ಯಾಕಂದ್ರೆ ಇದು ಕರುವಿಗಾಗಿ ಮಾಡಿರೋ ತೊಟ್ಟಿಲು ಶಾಸ್ತ್ರನೇ.. ಅಷ್ಟಕ್ಕೂ ಕಲಬುರಗಿ ನಗರದ ರಾಜಾಪುರ ಬಡಾವಣೆ ಇಂಥಾದ್ದೊಂದು ಕ್ಷಣಕ್ಕೆ ಸಾಕ್ಷಿಯಾಗಿತ್ತು. ಕಲಬುರಗಿ ನಗರದ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯ ಮಹಿಳಾ ಪಿಎಸ್ಐ ಯಶೋಧಾ ಕಟಕೆ ಅವರೇ ಈ ಕಾರ್ಯಕ್ರಮಕ್ಕೆ ಕಾರಣವಾಗಿದ್ದು. ಯಶೋಧಾ ಅವರು ಕರ್ತವ್ಯದಲ್ಲಿದ್ದಾಗ ಕಸಾಯಿಖಾನೆಗೆ ಹೋಗುತ್ತಿದ್ದ ಅನೇಕ ಗೋವುಗಳನ್ನು ರಕ್ಷಿಸಿ ಗೋಶಾಲೆ ಮತ್ತು ಕೆಲ ಬಡ ಜನರಿಗೆ ನೀಡಿದ್ದರು. ತಾವು ರಕ್ಷಿಸಿದ ಕೆಲ ಗೋವುಗಳು ಕರುವಿಗೆ ಜನ್ಮ ನೀಡಿದ್ವು. ಹೀಗಾಗಿ ಇವತ್ತು ಒಂದು ಕರುವನ್ನು ತಮ್ಮ ಮನೆಗೆ ಕರೆದುಕೊಂಡು ಬಂದು ನಾಮಕರಣ ಮಾಡಲಾಯ್ತು. ಹೆಣ್ಣು ಕರುವಿಗೆ ರಾಧಾ ಅಂತಾ ಹೆಸರಿಟ್ಟು ಸಂಭ್ರಮಿಸಿದ್ರು.
ಮಕ್ಕಳ ನಾಮಕರಣ ಮಾಡುವಂತೆಯೇ ಕರುವಿನ ನಾಮಕರಣವನ್ನ ಸಂಭ್ರಮದಿಂದ ಮಾಡಲಾಯ್ತು. ಕಾರ್ಯಕ್ರಮಕ್ಕೆ ಅನೇಕ ಸ್ವಾಮೀಜಿಗಳು, ಮಂಗಳಮುಖಿಯರು ಸಾಕ್ಷಿಯಾದ್ರು. 7 ದಿನಗಳ ಹಿಂದಷ್ಟೇ ಹುಟ್ಟಿದ್ದ ಕರುವಿನ ಕಿವಿಯಲ್ಲಿ ಮೂರು ಬಾರಿ ರಾಧಾ, ರಾಧಾ ಅಂತಾ ಕೂಗಿ ಹೆಸರಿಟ್ರು.. ಹಾಗೇ ನಾಮಕರಣಕ್ಕೆ ಬಂದವರಿಗೆ ಭರ್ಜರಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಕಟುಕರ ಕೈಗೆ ಸಿಗಬೇಕಿದ್ದ ಹಸು ಕರುವಿಗೆ ಜನ್ಮ ನೀಡಿದೆ. ತಾಯಿ ಗರ್ಭದಲ್ಲೇ ಪ್ರಾಣ ಬಿಡ್ಬೇಕಿದ್ದ ಕರುವಿಗೆ ನಾಮಕರಣ ಜೋರಾಗಿ ನಡೆದಿದೆ. ಒಟ್ನಲ್ಲಿ ಕಾರ್ಯಕ್ರಮದ ನೆಪದಲ್ಲಿ ಮನೆಯವ್ರೆಲ್ಲಾ ಸಂಭ್ರಮಿಸಿದ್ದಂತು ಸುಳ್ಳಲ್ಲ.
ವರದಿ: ಸಂಜಯ್, ಟಿವಿ9, ಕಲಬುರಗಿ
ಇದನ್ನೂ ಓದಿ: Virat Kohli: ವಿವಾದದ ಸುಳಿಗೆ ಸಿಲುಕಿಕೊಂಡ ವಿರಾಟ್ ಕೊಹ್ಲಿ: ಅಹಂಕಾರ ಬಿಟ್ಟು ದೇಶದ ಬಗ್ಗೆ ಯೋಚಿಸಿ ಎಂದ ಕಪಿಲ್ ದೇವ್
Published On - 7:34 am, Fri, 17 December 21