ಕಲಬುರಗಿ: ನೀರಿನ ರಭಸಕ್ಕೆ ಹಳ್ಳದಲ್ಲಿ ಯುವತಿ ಕೊಚ್ಚಿಕೊಂಡು ಹೋಗಿರುವಂತಹ ಘಟನೆ ಜಿಲ್ಲೆಯ ಕಮಲಾಪುರ ತಾಲೂಕಿನ ಲಾಡಮುಗುಳಿ ಗ್ರಾಮದಲ್ಲಿ ನಡೆದಿದೆ. ದಾನೇಶ್ವರಿ (18) ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿರೋ ಯುವತಿ. ಯುವತಿ ಶವ ಸಿಗದೇ ಕುಟುಂಬದವರು ಕಂಗಾಲಾಗಿದ್ದಾರೆ. ನಿನ್ನೆ ಮಧ್ಯಾಹ್ನ ಹಳ್ಳದಲ್ಲಿ ಯುವತಿ ಕೊಚ್ಚಿಕೊಂಡು ಹೋಗಿದ್ದು, ನಿನ್ನೆಯಿಂದ ದಾನೇಶ್ವರಿ ಶವಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ. ಅಗ್ನಿಶಾಮಕ ಸಿಬ್ಬಂದಿ, ಎಸ್ಡಿಆರ್ಎಪ್ ತಂಡದಿಂದ ಶೋಧ ನಡೆಸಲಾಗುತ್ತಿದ್ದು, ನಿನ್ನೆ ಶವ ಸಿಗದ ಹಿನ್ನೆಲೆಯಲ್ಲಿ ಇಂದು ಮತ್ತೆ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ದೇವರಿಗೆ ಕೈಮುಗಿದು ಒಡವೆ ಕದ್ದ ಖದೀಮ
ಬೆಂಗಳೂರು: ದೇವರಿಗೆ ಕೈಮುಗಿದು ದೇವರ ಒಡವೆ ಕಳ್ಳತನ ಮಾಡಿದ್ದ ಕಿರಾತಕನನ್ನು ಅರೆಸ್ಟ ಮಾಡಲಾಗಿದೆ. ಯಡೆಯೂರು ಮೂಲದ ಕಲ್ಲೇಶ್ ಬಂಧಿತ ಅರೋಪಿ. ಪೂಜೆ ನೆಪದಲ್ಲಿ ದೇವಾಲಯಕ್ಕೆ ಬಂದಿದ್ದ ಶ್ರೀರಾಮಪುರದ ಕನ್ನಿಕ ಪರಮೇಶ್ವರಿ ದೇವಾಲಯದಲ್ಲಿ ಕಳ್ಳತನ ಮಾಡಿದ್ದ. ಕಳ್ಳತನ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ದೇವಾಲಯಕ್ಕೆ ಬಂದು ಕೈ ಮುಗಿದು ಅಡ್ಡಬಿದ್ದು ಬಳಿಕ ಕಳ್ಳತನ ಮಾಡಿದ್ದ. ಮಾಗಡಿ, ಹೆಣ್ಣೂರು, ಕೆಪಿ ಅಗ್ರಹಾರ ಸೇರಿ ಹಲವೆಡೆ ದೇವಾಲಯದಲ್ಲಿ ಆರೋಪಿ ಕಳ್ಳತನ ಮಾಡಿದ್ದ. ಬಂಧಿತನಿಂದ ಆರು ಲಕ್ಷ ಮೌಲ್ಯದ ಬಂಗಾರದ ಆಭರಣ ವಶಕ್ಕೆ ಪಡೆಯಲಾಗಿದೆ.
ಅಕ್ರಮ ಜಾನುವಾರು ಸಾಗಾಟ, ಇಬ್ಬರ ಬಂಧನ
ಹಾಸನ: ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ಇಬ್ಬರ ಬಂಧನ ಮಾಡಿರುವಂತಹ ಘಟನೆ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ, ಬ್ಯಾಡರಹಳ್ಳಿ ಗೇಟ್ ಬಳಿ ನಡೆದಿದೆ. ಚಾಲಕ ಸಜ್ಜಾದ್, ಮಾಗಡಿ ಮೂಲದ ಅಹಮದ್ ಪಾಷಾ ಬಂಧಿತರು. ವಾಹನ ಸಮೇತ ಎಂಟು ಕರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚನ್ನರಾಯಪಟ್ಟಣದಿಂದ ಬೆಂಗಳೂರಿನ ಕಡೆಗೆ ವಾಹನ ಹೋಗುತ್ತಿತ್ತು. ವಾಹನ ತಡೆದು ತಪಾಸಣೆ ನಡೆಸಿದಾಗ ಅಕ್ರಮ ಸಾಗಾಟ ಬಯಲಾಗಿದೆ. ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಎಂಟು ಸಿಂಧಿ ಕರುಗಳ ರಕ್ಷಣೆ ಮಾಡಲಾಗಿದೆ. ಹಿರಿಸಾವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
35 ಲಕ್ಷ 20 ಸಾವಿರ ಹಣ ದರೋಡೆ ಪ್ರಕರಣ ಭೇದಿಸಿದ ಪೊಲೀಸ್
ತುಮಕೂರು: ಕೊರಟಗೆರೆ ಪಟ್ಟಣದಲ್ಲಿ ಎತ್ತಿನಹೊಳೆ ಯೋಜನೆಯ ಮ್ಯಾನೇಜರ್ ಅವಿನಾಶ್ ಮನೆಯಲ್ಲಿ 35.20 ಲಕ್ಷ ಹಣ ಕದ್ದಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅವಿನಾಶ್ ಕಾರು ಚಾಲಕ ಮಂಜುನಾಥ್, ಸಿದ್ದರಾಜು, ಲಕ್ಷ್ಮೀನಾರಾಯಣ್ ಬಂಧಿತರು. ಆರೋಪಿಗಳಿಂದ 30.20 ಲಕ್ಷ ನಗದು ಜಪ್ತಿ ಮಾಡಲಾಗಿದೆ. ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.