ವಾಲ್ಮೀಕಿ ನಿಗಮ ಹಗರಣ: ಇಡಿ ಅಧಿಕಾರಿಗಳ ವಿರುದ್ಧ ದೂರು ನೀಡಿದ ಕಲ್ಲೇಶ್​ ವಾಲ್ಮೀಕಿ ನಿಗಮದ ಮಾಜಿ ಪದನಿಮಿತ್ತ ನಿರ್ದೇಶಕ

|

Updated on: Jul 23, 2024 | 10:41 AM

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಲಾಯದ ಅಧಿಕಾರಿಗಳ ವಿರುದ್ಧ ದೂರು ನೀಡಿದ ಕಲ್ಲೇಶ್​​. ಬಿ ಯಾರು? ಇವರಿಗೆ ಮತ್ತು ವಾಲ್ಮೀಕಿ ನಿಗಮದ ಹಗರಣಕ್ಕೂ ಏನು ಸಂಬಂಧ? ಎಂಬ ಎಲ್ಲ ವಿವರ ಇಲ್ಲಿದೆ.​

ವಾಲ್ಮೀಕಿ ನಿಗಮ ಹಗರಣ: ಇಡಿ ಅಧಿಕಾರಿಗಳ ವಿರುದ್ಧ ದೂರು ನೀಡಿದ ಕಲ್ಲೇಶ್​ ವಾಲ್ಮೀಕಿ ನಿಗಮದ ಮಾಜಿ ಪದನಿಮಿತ್ತ ನಿರ್ದೇಶಕ
ಇಡಿ, ದೂರು ಅಧಿಕಾರಿ ಕಲ್ಲೇಶ್​
Follow us on

ಬೆಂಗಳೂರು, ಜುಲೈ 23: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದ (Karnataka Maharshi Valmiki Scheduled Tribes Development) ಹಣ ಅಕ್ರಮ ವರ್ಗವಾಣೆ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿರುವ ಕಲ್ಲೇಶ್​. ಬಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಹಿಂದಿನ ಹೆಚ್ಚುವರಿ ನಿರ್ದೇಶಕರಾಗಿದ್ದರು. ಜೊತೆಗೆ ವಾಲ್ಮೀಕಿ ನಿಗಮದ ಪದನಿಮಿತ್ತ ನಿರ್ದೇಶಕರೂ ಆಗಿದ್ದರು.

ಇಲಾಖೆಯ ಅನುದಾನ ದುರ್ಬಳಕೆ ಮಾಡಿಕೊಂಡ ಆರೋಪದಡಿ ಸದ್ಯ ಕಲ್ಲೇಶ್.ಬಿ ಅವರನ್ನು ಅಮಾನತು ಮಾಡಲಾಗಿದೆ. ಕಳೆದ ಜೂನ್ 22 ರಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಕಲ್ಲೇಶ್ ಅವರನ್ನು ಅಮಾನತು ಮಾಡಿದೆ. ಬಳಿಕ ವಾಲ್ಮೀಕಿ ನಿಗಮ ಹಗರಣ ಸಂಬಂಧ ಜು.16ರಂದು ವಿಚಾರಣೆಗೆ ಹಾಜರಾಗಿದ್ದರು.

ಇದನ್ನೂ ಓದಿ: ವಾಲ್ಮೀಕಿ ನಿಗಮದ ಹಣ ಹರಿದು ಹಂಚಿದ್ದು, ಭ್ರಷ್ಟ ಕುಳಗಳ ಹೊಟ್ಟೆ ಸೇರಿದ್ದು ಹೇಗೆ? ಇಲ್ಲಿದೆ ವಿವರ

ವಿಚಾರಣೆ ವೇಳೆ, “ಹಣ ವರ್ಗಾವಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವ ಬಿ. ನಾಗೇಂದ್ರ ಸೂಚನೆ ನೀಡಿದ್ದಾರೆ ಎಂದ ಒಪ್ಪಿಕೊ. ನಾವು ಹೇಳಿದಂತೆ ಒಪ್ಪಿಕೊಳ್ಳದಿದ್ದರೆ ಬಂಧಿಸುವುದಾಗಿ” ಇಡಿ ಅಧಿಕಾರಿಗಳು ನನಗೆ ಬೆದರಿಕೆ ಹಾಕಿದ್ದರು ಎಂದು ಕಲ್ಲೇಶ್​.ಬಿ ಆರೋಪ ಮಾಡಿದ್ದಾರೆ. ಈ ಸಂಬಂಧ ಕಲ್ಲೇಶ್​ ದೂರು ದಾಖಲಿಸಿದ್ದಾರೆ. ಇಡಿಯ ಇಬ್ಬರು ಅಧಿಕಾರಿಗಳ ವಿರುದ್ಧ ವಿಲ್ಸನ್ ಗಾರ್ಡನ್ ಪೊಲೀಸ್​ ಠಾಣೆಯಲ್ಲಿ ಬಿಎನ್​ಎಸ್​ ಕಾಯ್ದೆಯಡಿ ಸೆಕ್ಷನ್ 3(5),351(2),352ರಡಿ ಎಫ್​ಐಆರ್​ ದಾಖಲಾಗಿದೆ. ಆರೋಪಗಳ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಸದ್ಯ ಇಡಿ ಅಧಿಕಾರಿಗಳಿಗೆ ಪೊಲೀಸರು ನೋಟಿಸ್ ನೀಡಲಿದ್ದಾರೆ.

ಇಡಿ ವಿರುದ್ಧ ಕಾಂಗ್ರೆಸ್​​ ಪ್ರತಿಭಟನೆ

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​, ಮಾಜಿ ಸಚಿವ ನಾಗೇಂದ್ರ ಹೆಸರೇಳುವಂತೆ ಇಡಿ ಅಧಿಕಾರಿಗಳು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಕಾಂಗ್ರೆಸ್ ನಾಯಕರ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​, ಸಚಿವರಾದ ಡಾ.ಜಿ.ಪರಮೇಶ್ವರ್​, ಮುನಿಯಪ್ಪ, ಪ್ರಿಯಾಂಕ್ ಖರ್ಗೆ, ಹೆಚ್​.ಕೆ.ಪಾಟೀಲ್, ಭೈರತಿ ಸುರೇಶ್​, ಸಂತೋಷ ಲಾಡ್, ಕೆ.ಎನ್​.ರಾಜಣ್ಣ, ಕೃಷ್ಣಭೈರೇಗೌಡ, ಎಂ.ಬಿ.ಪಾಟೀಲ್​, ವೆಂಕಟೇಶ್, ದಿನೇಶ್ ಗುಂಡೂರಾವ್, ಲಕ್ಷ್ಮೀ ಹೆಬ್ಬಾಳ್ಕರ್, ರಹೀಂ ಖಾನ್​, ಎಂ.ಸಿ.ಸುಧಾಕರ್, ಶರಣಪ್ರಕಾಶ್​ ಪಾಟೀಲ್ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.

ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳಾದ ಇಡಿ, ಸಿಬಿಐ, ಐಟಿ ದುರ್ಬಳಕೆ ಮಾಡಿಕೊಂಡಿದೆ ಅಂತ ಆರೋಪಿಸಿ, ಕೇಂದ್ರದ ವಿರುದ್ಧ ಕಾಂಗ್ರೆಸ್​ ನಾಯಕರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಏನಿದು ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ?

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ನಿಯಮಿತಕ್ಕೆ ಸಂಬಂಧಿಸಿದ ಬ್ಯಾಂಕ್ ಖಾತೆಯಿಂದ 18 ಖಾತೆಗಳಿಗೆ ಬರೋಬ್ಬರಿ 94.73 ಕೋಟಿ ರೂಪಾಯಿ ಅಕ್ರಮವಾಗಿ ವರ್ಗಾವಣೆಯಾಗಿತ್ತು. ಎಂಜಿ ರಸ್ತೆಯ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದಿಂದ ಹಣ ವರ್ಗಾವಣೆಯಾಗಿತ್ತು. ಹಗರಣದ ತನಿಖೆಯನ್ನು ಎಸ್‌ಐಟಿ, ಸಿಬಿಐ ಮತ್ತು ಇಡಿ ನಡೆಸುತ್ತಿವೆ.

ರಾಜ್ಯ ಸರ್ಕಾರದವತಿಯಿಂದ ಎಸ್​ಐಟಿ ತನಿಖೆ ನಡೆಸುತ್ತಿದೆ. ಬ್ಯಾಂಕ್​​​ ಅಧಿಕಾರಿಗಳ ದೂರಿನ ಆಧಾರದ ಮೇಲೆ ಸಿಬಿಐ ತನಿಖೆ ನಡೆಸುತ್ತಿದೆ. ದೂರು ನೀಡಿದ್ದಾರೆ. ಹಗರಣ ಸಂಬಂಧ ಸಂಬಂಧ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬುಧವಾರ (ಜು.10) ಬೆಳ್ಳಂ ಬೆಳಗ್ಗೆ ನಿಗಮದ ಅಧ್ಯಕ್ಷ, ಶಾಸಕ ಬಸನಗೌಡ ದದ್ದಲ್​​ ಹಾಗೂ ಮಾಜಿ ಸಚಿವ ಬಿ. ನಾಗೇಂದ್ರ ಅವರ ಮನೆ ಮತ್ತು ಕಚೇರಿ ಮೇಲೆ ದಾಳಿ ಮಾಡಿದ್ದರು. ಹಗರಣದಲ್ಲಿ ಭಾಗಿಯಾಗಿರುವ ಬಗ್ಗೆ ಸಾಕ್ಷ್ಯಾಧಾರಗಳು ಸಿಕ್ಕ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಮಾಜಿ ಸಚಿವ ಬಿ. ನಾಗೇಂದ್ರ ಅವರನ್ನು ಬಂಧಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:40 am, Tue, 23 July 24