ಬೆಂಗಳೂರು: ಅನಧಿಕೃತ ಟೆಲಿಫೋನ್ ಎಕ್ಸ್‌ಚೇಂಜ್‌ನಿಂದ ಕರೆಗಳನ್ನು ಕನ್ವರ್ಟ್ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ ಕುರಿತಾಗಿ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಸುದ್ದಿಗೋಷ್ಠಿ ನೋಡಿ ವಿಸ್ತೃತ ಮಾಹಿತಿ ನೀಡಿದ್ದಾರೆ. ಇಬ್ರಾಹಿಂ ಪುಲ್ಲಟ್ಟಿ ಮೊಹಮ್ಮದ್ ಕುಟ್ಟಿ ಹಾಗೂ ಗೌತಮ್ ಎನ್ನುವವರನ್ನು ಬಂಧಿಸಲಾಗಿದೆ. BTM ಲೇಔಟ್‌ನ 6 ಕಡೆ ದಾಳಿ ನಡೆಸಿ ಆರೋಪಿಗಳನ್ನು ಸೆರೆಹಿಡಿದಿದ್ದೇವೆ. ಬಂಧಿತ ಆರೋಪಿಗಳಿಂದ 960 ಸಿಮ್ ಕಾರ್ಡ್‌ಗಳು, 30 ಸಿಮ್ ಬಾಕ್ಸ್ ಡಿವೈಸ್ ವಶಕ್ಕೆ ಪಡೆಯಲಾಗಿದೆ. ಇದರಿಂದಲೇ ISD ಕರೆಗಳನ್ನು ಸ್ಥಳೀಯ ಕರೆಗಳಾಗಿ ಕನ್ವರ್ಟ್ ಮಾಡಿ ಅವ್ಯವಹಾರ ನಡೆಸುತ್ತಿದ್ದರು ಎಂದು ಹೇಳಿದ್ದಾರೆ.
ಈ ಗ್ಯಾಂಗ್ನಲ್ಲಿದ್ದವರು ಅಮಾಯಕರ ಗುರುತಿನ ಚೀಟಿಗಳಿಂದ ಸಿಮ್ ಕಾರ್ಡ್ ಖರೀದಿ ಮಾಡುತ್ತಿದ್ದರು. ಕೇರಳ ಹಾಗೂ ಬೆಂಗಳೂರಿನ ಜಾಲಹಳ್ಳಿಯಲ್ಲಿ ತಮ್ಮ ಸಹಚರರ ಮೂಲಕ ಗುರುತಿನ ಚೀಟಿ ಸಂಗ್ರಹಿಸಿದ್ದಾರೆ. ಗ್ರಾಮೀಣ ಭಾಗದ ಜನರ ಗುರುತಿನ ಚೀಟಿಗಳೇ ಹೆಚ್ಚಾಗಿವೆ ಎನ್ನುವ ಮಾಹಿತಿ ಲಭ್ಯವಾಗಿದೆ. ದಾಳಿ ವೇಳೆ 32 ಸಿಮ್ ಕಾರ್ಡ್ ಅಳವಡಿಸುವಂತಹ 30 ಇಲೆಕ್ಟ್ರಾನಿಕ್ ಡಿವೈಸ್ ಮೂಲಕ 900ಕ್ಕೂ ಹೆಚ್ಚು ಸಿಮ್ ಕಾರ್ಡ್ ಅಳವಡಿಸಿಕೊಂಡಿರುವುದು ಪತ್ತೆಯಾಗಿದ್ದು, ಇದಕ್ಕೆ ಹವಾಲಾ ವ್ಯವಹಾರದ ಸಂಪರ್ಕವೂ ಇದೆ ಎಂದು ಗೊತ್ತಾಗಿದೆ ಎಂದು ಕಮಲ್ ಪಂತ್ ತಿಳಿಸಿದ್ದಾರೆ.
ಈ ವಿಚಾರವೂ ಕೇವಲ ಆರ್ಥಿಕ ನಷ್ಟದ ವಿಚಾರವಲ್ಲ. ದೇಶದ ಭದ್ರತೆಗೂ ಕಂಟಕ ಉಂಟು ಮಾಡುವ ವಿಷಯವಾಗಿದೆ. ISD ಫೋನ್ ಕರೆಗಳನ್ನು ಸ್ಥಳೀಯ ಕರೆಗಳಾಗಿ ಮಾರ್ಪಾಡು ಮಾಡುವ ಮೂಲಕ ಕದ್ದುಮುಚ್ಚಿ ಅವ್ಯವಹಾರ ನಡೆಸುತ್ತಿದ್ದ ಗ್ಯಾಂಗ್ ಈಗ ಸಿಸಿಬಿ ಬಲೆಗೆ ಬಿದ್ದಿದೆ. ಇದರ ಬಗ್ಗೆ ಸಾಕಷ್ಟು ದಿನಗಳ ಮುಂಚೆಯಿಂದಲೇ ತನಿಖೆ ಆರಂಭಿಸಿ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ. ಇವರ ಜತೆ ಸಂಪರ್ಕದಲ್ಲಿದ್ದವರ ಬಗ್ಗೆಯೂ ಗೊತ್ತಾಗಿದೆ ಅದರ ತನಿಖೆಯೂ ಮುಂದುವರೆದಿದೆ ಎಂದು ಹೇಳಿದ್ದಾರೆ.
ರಮೇಶ್ ಜಾರಕಿಹೊಳಿ ಪ್ರಕರಣ ಕಾನೂನು ಪ್ರಕಾರವೇ ಮುಂದುವರೆಯುತ್ತಿದೆ
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಬಗ್ಗೆ ಮಾತನಾಡಿರುವ ಪೊಲೀಸ್ ಆಯುಕ್ತ ಕಮಲ್ ಪಂತ್, ಎಸ್‌ಐಟಿ ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತಿದೆ. ಹಿರಿಯ ಅಧಿಕಾರಿಗಳು ರಜೆಯ ಮೇಲೆ ಹೋಗಿದ್ದರೂ ಪ್ರಕರಣದ ತನಿಖೆಯಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. ಕಾನೂನು ಪ್ರಕಾರವೇ ತನಿಖೆ ಮುಂದುವರಿಯಲಿದೆ. ಉಚ್ಛ ನ್ಯಾಯಾಲಯದಲ್ಲಿ ಈಗಾಗಲೇ ವಿಚಾರ ಪ್ರಸ್ತಾಪ ಮಾಡಲಾಗಿದೆ. ಕೋರ್ಟ್ನಿಂದ ಯಾರೂ ತಪ್ಪಿಸಿಕೊಳ್ಳಲಾಗೋದಿಲ್ಲ. ಹಿರಿಯ ಅಧಿಕಾರಿಗಳು ಈ ಹಿಂದೆಯೂ ರಜೆಗೆ ಹೋಗಿದ್ದಾರೆ. ಅದರಿಂದಾಗಿ ತನಿಖೆಯಲ್ಲಿ ವ್ಯತ್ಯಾಸವಾಗುವುದಿಲ್ಲ. ಕಾನೂನು ಪ್ರಕಾರ ಕ್ರಮ ಮುಂದುವರಿಯಲಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:
ಕೊವಿಡ್ ಲಸಿಕೆಗೆ ಕಮಿಷನ್ ಆರೋಪ: ಕಮಲ್ ಪಂತ್ಗೆ ದೂರು; ಕಾಂಗ್ರೆಸ್ ವಿರುದ್ಧ ಹರಿಹಾಯ್ದ ರವಿಸುಬ್ರಹ್ಮಣ್ಯ
ರಮೇಶ್ ಜಾರಕಿಹೊಳಿ ರಕ್ತ, ವೀರ್ಯ, ಉಗುರು, ಕೂದಲ ಸ್ಯಾಂಪಲ್ ಪಡೆದು ತನಿಖೆ ನಡೆಸಿಲ್ಲ: ಹೈಕೋರ್ಟ್‌ಗೆ ಯುವತಿಯಿಂದ ಅರ್ಜಿ